ADVERTISEMENT

ಕಾರ್ಮಿಕ ಸಂಹಿತೆ ರದ್ದತಿ, ನರೇಗಾ ಮರು ಜಾರಿಗೆ ಆಗ್ರಹ: ಕೇಂದ್ರದ ವಿರುದ್ಧ ಮುಷ್ಕರ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 5:06 IST
Last Updated 10 ಫೆಬ್ರುವರಿ 2026, 5:06 IST
ಕೋಲಾರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಸಿಐಟಿಯು ಮುಖಂಡರಾದ ಎಂ.ವಿಜಯಕೃಷ್ಣ, ಗಾಂಧಿನಗರ ನಾರಾಯಣಸ್ವಾಮಿ, ಎಚ್.ಬಿ ಕೃಷ್ಣಪ್ಪ ಹಾಗೂ ವಿವಿಧ ಸಂಘಟನೆಗಳು ಮುಖಂಡರು ಮುಷ್ಕರದ ಕರಪತ್ರ ಬಿಡುಗಡೆ ಮಾಡಿದರು
ಕೋಲಾರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಸಿಐಟಿಯು ಮುಖಂಡರಾದ ಎಂ.ವಿಜಯಕೃಷ್ಣ, ಗಾಂಧಿನಗರ ನಾರಾಯಣಸ್ವಾಮಿ, ಎಚ್.ಬಿ ಕೃಷ್ಣಪ್ಪ ಹಾಗೂ ವಿವಿಧ ಸಂಘಟನೆಗಳು ಮುಖಂಡರು ಮುಷ್ಕರದ ಕರಪತ್ರ ಬಿಡುಗಡೆ ಮಾಡಿದರು   

ಕೋಲಾರ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನಾಲ್ಕು ಕಾರ್ಮಿಕ ಸಂಹಿತೆ ರದ್ದುಪಡಿಸಬೇಕು ಹಾಗೂ ಮನರೇಗಾ ಮರು ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫೆ.12 ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಹಾಗೂ ಸಂಯುಕ್ತ ಹೋರಾಟ– ಕರ್ನಾಟಕ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ವಿಬಿ– ಜಿ ರಾಮ್‌ ಜಿ ಕಾಯ್ದೆಯನ್ನು ರದ್ದುಗೊಳಿಸಬೇಕು. ಭೂಸ್ವಾಧೀನ ಕಾಯ್ದೆಗಳನ್ನು ಹಿಂಪಡೆಯಬೇಕು. ಕೈಗಾರಿಕಾ ಸಂಬಂಧಗಳ (ಕರ್ನಾಟಕ) ಕರಡು ನಿಯಮಗಳನ್ನು ಪ್ರಕಟಿಸುವ ಮೂಲಕ ರಾಜ್ಯ ಸರ್ಕಾರ ಕಾರ್ಮಿಕರಿಗೆ ದ್ರೋಹ ಬಗೆದಿದೆ. ಕಾರ್ಮಿಕ ವಿರೋಧಿಯಾಗಿರುವ ಈ ಕರಡು ನಿಯಮಗಳನ್ನು ಕೂಡಲೇ ಹಿಂಪಡೆಯಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೊಳಿಸಿರುವ ಭೂಸುಧಾರಣಾ, ಎಪಿಎಂಸಿ, ಜಾನುವಾರು ಸಂರಕ್ಷಣಾ ತಿದ್ದುಪಡಿ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಕಾರ್ಮಿಕರ ಕಾಯ್ದೆಗಳು ದುಡಿಯುವ ವರ್ಗಕ್ಕೆ ವಿರುದ್ಧವಾಗಿವೆ. ದೇಶದ ಸಂಪತ್ತಿನ ಸಂರಕ್ಷಣೆ, ದುಡಿಯುವ ಜನರ ಹಕ್ಕುಗಳ ರಕ್ಷಣೆ ಮತ್ತು ಮಾನವ ವಿರೋಧಿ ನೀತಿಗಳ ವಿರುದ್ಧ ಈ ಮುಷ್ಕರ ನಡೆಯಲಿದೆ. ಕಾರ್ಮಿಕರು, ರೈತರು, ಯುವ ಸಮುದಾಯ, ಮಹಿಳಾ ಸಂಘಟನೆಗಳು, ವಿದ್ಯಾರ್ಥಿಗಳು ಹಾಗೂ ಎಲ್ಲಾ ದುಡಿಯುವ ವರ್ಗದ ಜನ ತಮ್ಮ ಎಲ್ಲಾ ರೀತಿಯ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿ ಸ್ವಯಂ ಪ್ರೇರಿತರಾಗಿ ಮುಷ್ಕರಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ, ‘ಕೇಂದ್ರದ ಕಾರ್ಮಿಕರ ನೀತಿಗಳಿಂದ ನೇರವಾದ ಹೊಡೆತ ಸ್ಥಳೀಯ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಬೀಳಲಿದೆ. ಕಾರ್ಮಿಕರ ಹಿತ ಕಾಪಾಡುವ ಬದಲಿಗೆ ಬಂಡವಾಳಶಾಹಿಗಳ ಹಿತ ಸರ್ಕಾರಗಳಿಗೆ ಮುಖ್ಯವಾಗಿದೆ. ಈ ಮಸೂದೆಗಳ‌ನ್ನು ವಾಪಸು ಪಡೆಯಲು ನಡೆಯಲಿರುವ ಮುಷ್ಕರವು ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಹಾಗೂ ಸ್ಥಳೀಯ ಕೈಗಾರಿಕೆಗಳಲ್ಲಿ ನಡೆಯಲಿದೆ. ನಗರದಲ್ಲಿ ಗಾಂಧಿವನದಿಂದ ಬೃಹತ್ ಮೆರವಣಿಗೆ ನಡೆದು ಮೆಕ್ಕೆ ವೃತ್ತದಲ್ಲಿ ಪ್ರತಿಭಟನೆ ನಡೆಯಲಿದೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾ ಖಜಾಂಚಿ ಎಚ್.ಬಿ ಕೃಷ್ಣಪ್ಪ, ಕಾರ್ಯದರ್ಶಿ ಎಂ.ಭೀಮರಾಜ್, ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ವಿ.ನಾರಾಯಣರೆಡ್ಡಿ, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನ್ನೆಹೊಸಹಳ್ಳಿ ರಮೇಶ್, ಸಿಐಟಿಯು ಸಹ ಕಾರ್ಯದರ್ಶಿ ಹರೀಷ್, ಕೇಶವರಾವ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.