ADVERTISEMENT

ಮಾಲೂರು: ಗುಡಿಸಲು ಜೀವನಕ್ಕೆ ಮುಕ್ತಿ ಯಾವಾಗ?

ಚಿಕ್ಕ ತಿರುಪತಿಯ ಹಿಂಭಾಗದಲ್ಲಿರುವ ಜನರ ಗೋಳು

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2024, 7:22 IST
Last Updated 31 ಡಿಸೆಂಬರ್ 2024, 7:22 IST
<div class="paragraphs"><p>ಚಿಕ್ಕತಿರುಪತಿ ದೇವಾಲಯ ಹಿಂಭಾಗದಲ್ಲಿ ಚಿಕ್ಕತಿರುಪತಿ–ಮುಗಳೂರು ರಸ್ತೆ ಬಳಿ 31 ಕುಟುಂಬಗಳು ವಾಸವಾಗಿರುವ ಗುಡಿಸಲುಗಳು</p></div>

ಚಿಕ್ಕತಿರುಪತಿ ದೇವಾಲಯ ಹಿಂಭಾಗದಲ್ಲಿ ಚಿಕ್ಕತಿರುಪತಿ–ಮುಗಳೂರು ರಸ್ತೆ ಬಳಿ 31 ಕುಟುಂಬಗಳು ವಾಸವಾಗಿರುವ ಗುಡಿಸಲುಗಳು

   

ಮಾಲೂರು: ತಾಲ್ಲೂಕಿನ ಚಿಕ್ಕತಿರುಪತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೇಂದ್ರ ಸ್ಥಾನ ಚಿಕ್ಕತಿರುಪತಿಯಲ್ಲಿ 31ಕ್ಕೂ ಹೆಚ್ಚು ಕುಟುಂಬಗಳು ಸುಮಾರು 30 ವರ್ಷಗಳಿಂದ ಸುಸಜ್ಜಿತವಾದ ನಿವಾಸವಿಲ್ಲದೆ ಗುಡಿಸಲುಗಳಲ್ಲೇ ಜೀವನದ ಬಂಡಿ ಸಾಗಿಸುತ್ತಿದ್ದಾರೆ. 

ಪ್ರಸಿದ್ಧ ಯಾತ್ರಾ ಸ್ಥಳ ಚಿಕ್ಕತಿರುಪತಿಯಲ್ಲಿ ಸುಮಾರು 1,600 ಮತದಾರರು ಇದ್ದು, ಚಿಕ್ಕತಿರುಪತಿ ಗ್ರಾಮ ಪಂಚಾಯಿತಿಯು 29 ಸದಸ್ಯರನ್ನು ಹೊಂದಿದ್ದು, ಈ ಪೈಕಿ ಚಿಕ್ಕತಿರುಪತಿ ಗ್ರಾಮದವರೇ 9 ಸದಸ್ಯರಿದ್ದಾರೆ. ಆದರೆ, ಚಿಕ್ಕತಿರುಪತಿಯ ವೆಂಕಟರಮಣಸ್ವಾಮಿ ದೇವಾಲಯದ ಹಿಂಭಾಗದಲ್ಲಿರುವ ಚಿಕ್ಕತಿರುಪತಿ–ಮುಗಳೂರು ರಸ್ತೆ ಬಳಿ 31 ಕುಟುಂಬಗಳು ಈಗಲೂ ಗುಡಿಸಲುಗಳಲ್ಲಿ ವಾಸ ಮಾಡುತ್ತಿವೆ.

ADVERTISEMENT

‘ಮೂಲ ಸೌಕರ್ಯಗಳಾದ ಚರಂಡಿ, ರಸ್ತೆ, ಬೀದಿದೀಪ ಸೇರಿದಂತೆ ಯಾವುದೇ ಮೂಲಸೌಕರ್ಯಗಳು ಇಲ್ಲಿಲ್ಲ. ಸುಮಾರು 30 ವರ್ಷಗಳಿಂದ ಇದೇ ಗುಡಿಸಲುಗಳಲ್ಲಿ ವಾಸವಾಗಿರುವ ನಾವು, ನಮಗೊಂದು ಮನೆ ಅಥವಾ ನಿವೇಶನ ಕಲ್ಪಿಸಿಕೊಡಿ ಎಂದು ಗೋಗರೆಯುತ್ತಿದ್ದಾರೆ. ಆದರೆ, ಅವರ ಗೋಳು ಕೇಳಲು ಯಾರೂ ಇಲ್ಲ’ ಎಂದು ಸ್ಥಳೀಯ ನಿವಾಸಿಗಳು ಅಲವತ್ತುಕೊಂಡರು. 

‘ತಮಗೆ ಮನೆ ಅಥವಾ ನಿವೇಶನ ಕಲ್ಪಿಸಲು ಕೋರಿ 25 ವರ್ಷಗಳಿಂದ ಗ್ರಾಮ ಪಂಚಾಯಿತಿ ಕಚೇರಿಗೆ ಅರ್ಜಿ ಹಾಕುತ್ತಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಗುಡಿಸಲು ನಿವಾಸಿಗಳ ಮಕ್ಕಳು ಚಿಕ್ಕತಿರುಪತಿಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ. ಗುಡಿಸಲುಗಳಲ್ಲಿ ವಾಸವಿರುವ ಮಕ್ಕಳು ಒಟ್ಟಾಗಿ ಕುಳಿತು ಓದಿನಲ್ಲಿ ತೊಡಗುತ್ತಾರೆ. ಆದರೆ, ಅವರಿಗೆ ಸಂಜೆ ಮತ್ತು ರಾತ್ರಿ ಹೊತ್ತು ಓದಿಕೊಳ್ಳಲು ವಿದ್ಯುತ್ ಸಂಪರ್ಕದ ವ್ಯವಸ್ಥೆ ಇಲ್ಲದ ಕಾರಣ, ಸಮಸ್ಯೆಯಾಗಿದೆ. ಆದರೆ, ನಮ್ಮ ಈ ಸಮಸ್ಯೆಗಳನ್ನು ಕೇಳಿಸಿಕೊಂಡು, ಪರಿಹರಿಸಲು ರಾಜಕಾರಣಿಗಳು, ಅಧಿಕಾರಿಗಳು ಸೇರಿದಂತೆ ಯಾರೂ ಮುಂದೆ ಬರುತ್ತಿಲ್ಲ’ ಎಂದು ಗುಡಿಸಲು ನಿವಾಸಿಗಳು ಅಳಲು ತೋಡಿಕೊಂಡರು. 

ದೇವಸ್ಥಾನಕ್ಕೂ ಅಂಟಿದ ಅವ್ಯವಸ್ಥೆ ಕೊಳಕು: ಚಿಕ್ಕತಿರುಪತಿಯ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯಕ್ಕೆ ತಮಿಳುನಾಡು, ಆಂಧ್ರಪ್ರದೇಶ ಮತ್ತು ಬೆಂಗಳೂರಿನಿಂದಲೂ ಪ್ರತಿನಿತ್ಯ ನೂರಾರು ಮಂದಿ ಭೇಟಿ ನೀಡುತ್ತಾರೆ. ಆದರೆ, ಗ್ರಾಮ ಪಂಚಾಯಿತಿ ನಿರ್ಲಕ್ಷ್ಯತೆಯಿಂದ ದೇವಸ್ಥಾನದಲ್ಲೂ ಅವ್ಯವಸ್ಥೆ ಹೆಚ್ಚಾಗಿದ್ದು, ಭಕ್ತರಿಗೆ ಯಾವುದೇ ಮೂಲ ಸೌಕರ್ಯ ಸಿಗುತ್ತಿಲ್ಲ ಎಂಬ ಆರೋಪ ವ್ಯಕ್ತವಾಗಿದೆ. 

ಪಂಚಾಯಿತಿಯಿಂದ ನಿರ್ಮಿಸಿರುವ ಶೌಚಾಲಯ ಕಟ್ಟಡವು ಸ್ಥಗಿತಗೊಂಡು 2–3 ವರ್ಷಗಳಾಗಿದ್ದು, ಪ್ರಸ್ತುತ ಅಕ್ರಮ ಚಟುವಟಿಕೆಗಳ ತಾಣವಾಗಿದೆ. ದೇವಾಲಯ ಸುತ್ತ ಇರುವ ಚರಂಡಿ ಸ್ವಚ್ಛತೆ ಇಲ್ಲದೆ, ಕಳೆ ಬೆಳೆದು ಕೊಳಚೆ ನೀರು ಹರಿಯಲು ಅವಕಾಶ ಇಲ್ಲದಂತಾ ಗಿದೆ. ಇದರಿಂದ ನಿಂತ ನೀರಿನಿಂದ ದುರ್ವಾಸನೆ ಬರುತ್ತಿದ್ದು, ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು, ಮೂಗು ಮುಚ್ಚಿಕೊಂಡೇ ದೇವಾಲಯ ಪ್ರದರ್ಶನ ಹಾಕುವ ಅನಿವಾರ್ಯತೆ ಎದುರಾಗಿದೆ. 

ಅಕ್ಕಪಕ್ಕದ ಮನೆಗಳಿಂದ ಬಿಡುಗಡೆಯಾಗುವ ಕೊಳಚೆ ನೀರು ಹರಿಯಲು ಚರಂಡಿ ವ್ಯವಸ್ಥೆ ಇಲ್ಲದ ಕಾರಣ, ಮನೆಗಳಿಂದ ಹರಿಯುವ ಕೊಳಚೆ ನೀರು ಮನೆಗಳ ಮುಂದಿನ ಹಳ್ಳಗಳಲ್ಲಿ ತುಂಬಿಕೊಂಡು ಸೊಳ್ಳೆಗಳ ಕಾಟ ಹೆಚ್ಚಾಗಿದೆ. ದೂರದಿಂದ ಬರುವ ಭಕ್ತರು ಸೇರಿದಂತೆ ಚಿಕ್ಕತಿರುಪತಿ ನಿವಾಸಿಗಳಿಗೆ ಮೂಲ ಸೌಕರ್ಯಗಳ ಕೊರತೆ ಎದುರಾಗಿದ್ದು, ಸೂರು ಇಲ್ಲದ ಬಡ ಗುಡಿಸಲು ನಿವಾಸಿಗಳ ಕಷ್ಟ ಕೇಳುವವರಿಲ್ಲದೆ ಗ್ರಾಮ ಪಂಚಾಯಿತಿ ಅಡಳಿತಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.

30 ವರ್ಷಗಳಿಂದ ಇದೇ ಗುಡಿಸಲು ಗಳಲ್ಲಿ ವಾಸಿಸುತ್ತಿದ್ದೇವೆ. ನಮ್ಮನ್ನು ಕೇಳುವವರೇ ಇಲ್ಲ. ಚುನಾವಣೆ ವೇಳೆ ಮಾತ್ರ ಬರುವ ಜನಪ್ರತಿನಿಧಿಗಳು, ಸಾರಾಯಿ ಕೊಟ್ಟು ಮತ ಕೇಳುತ್ತಾರೆ. ಮತ್ತೆ ನಮ್ಮತ್ತ ತಿರುಗಿಯೂ ನೋಡಲ್ಲ
ರಾಚಮ್ಮ, ಗುಡಿಸಲು ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.