
ಕೋಲಾರ: ಜಿಲ್ಲೆಯ ಹಲವು ಇಲಾಖೆಗಳ ಆಯಕಟ್ಟಿನ ಸ್ಥಳಗಳಲ್ಲಿ ಮಹಿಳಾ ಅಧಿಕಾರಿಗಳೇ ಇದ್ದು, ನಾರಿಶಕ್ತಿ (ಲೇಡಿ ಪವರ್) ವಿಜೃಂಭಿಸುತ್ತಿದೆ. ಸರ್ಕಾರಿ ಆಡಳಿತ ಯಂತ್ರದಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿ ಶಕ್ತಿ ತುಂಬುತ್ತಿದ್ದಾರೆ.
ಅದಕ್ಕೆಲ್ಲಾ ಮುಕುಟವಿಟ್ಟಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್ ಆ ಪಟ್ಟಿಗೆ ಈಗ ಹೊಸದಾಗಿ ಸೇರಿಕೊಂಡಿದ್ದಾರೆ.
ವಿಶೇಷವೆಂದರೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿ ತುಳಸಿ ಮದ್ದಿನೇನಿ ಇದ್ದಾರೆ. ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಸರೀನಾ ಸಿಕ್ಕಲಿಗಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎಂ.ಮಂಗಳಾ, ಉಪವಿಭಾಗಾಧಿಕಾರಿ ಡಾ.ಎಚ್‌ಪಿಎಸ್ ಮೈತ್ರಿ, ಅಬಕಾರಿ ಉಪ ಆಯುಕ್ತೆ ಸಯ್ಯದ್ ಅಜ್ಮತ್ ಆಫ್ರೀನ್ ಜೊತೆಗೆ ನಾಲ್ಕು ತಾಲ್ಲೂಕುಗಳ ತಹಶೀಲ್ದಾರ್‌ಗಳು ಕೂಡ ಮಹಿಳೆಯರು ಎನ್ನುವುದು ಮತ್ತೊಂದು ವಿಶೇಷ. ಕೋಲಾರದ ಡಾ.ನಯನಾ, ಮಾಲೂರಿನ ರೂಪಾ, ಬಂಗಾರಪೇಟೆಯ ಕೆ.ಎನ್.ಸುಜಾತಾ ಹಾಗೂ ಮುಳಬಾಗಿಲಿನ ವಿ.ಗೀತಾ ಆ ನಾಲ್ವರು ತಹಶೀಲ್ದಾರ್‌ಗಳು.
ಇನ್ನುಳಿದಂತೆ ಬಹುತೇಕ ಪ್ರಮುಖ ಇಲಾಖೆಗಳ ಮುಖ್ಯಸ್ಥರು ಮಹಿಳೆಯರೇ ಆಗಿದ್ದಾರೆ. ಕೃಷಿ, ಶಾಲಾ ಶಿಕ್ಷಣ, ಆಹಾರ, ಕಾರ್ಮಿಕ ಇಲಾಖೆ, ಕ್ರೀಡೆ, ಕೈಗಾರಿಕೆ, ಹಿಂದುಳಿದ ವರ್ಗಗಳ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಇಲಾಖೆ, ಬೆಸ್ಕಾಂನಲ್ಲೂ ನಾರಿಮಣಿಗಳೇ ಇದ್ದಾರೆ. ಕೆಲವರು ಎರಡು ಮೂರು ವರ್ಷಗಳಿಂದ ಈ ಸ್ಥಾನಗಳಲ್ಲಿದ್ದಾರೆ. ಕೆಲವರು ಹೊಸದಾಗಿ ಬಂದಿದ್ದಾರೆ. ಪ್ರಮುಖ ಇಲಾಖೆಗಳ ಆಯಕಟ್ಟಿನ ಸ್ಥಳಗಳು ಅಲ್ಲದೇ ವಿವಿಧ ಇಲಾಖೆ, ಜಿಲ್ಲಾಡಳಿತ ಕಚೇರಿ, ತಾಲ್ಲೂಕು ಕಚೇರಿಗಳಲ್ಲಿ ವಿವಿಧ ಹಂತದ ಮಹಿಳಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಂಖ್ಯೆ ಹೆಚ್ಚಿದೆ.
ಈ ಹಿಂದೆ ಪ್ರತಿಭೆ, ಸಾಮರ್ಥ್ಯಗಳಿದ್ದರೂ ಅವಕಾಶಗಳಿಗಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಇತ್ತು. ನಾಲ್ಕು ಗೋಡೆಗಳಿಗೆ ಸೀಮಿತ ಎಂಬ ಮಾತಿತ್ತು. ಈಗ ಮಹಿಳೆಯರಿಗೆ ಉತ್ತಮ ಅವಕಾಶಗಳು ಸಿಗುತ್ತಿರುವುದಕ್ಕೆ ಜಿಲ್ಲೆಯಲ್ಲಿನ ಈ ಅಂಕಿಅಂಶಗಳೇ ಸಾಕ್ಷಿ. ಇದು ಜಿಲ್ಲೆಯ ಯುವತಿಯರಿಗೆ, ಮಹಿಳೆಯರಿಗೆ ಸ್ಫೂರ್ತಿ ತುಂಬುವಂಥದ್ದು.
ಮಹಿಳೆಯರಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಹಲವಾರು ಸಮಸ್ಯೆಗಳಿದ್ದು, ನಿವಾರಣೆಗೆ ಹೆಚ್ಚು ಒತ್ತು ಸಿಗಲಿ ಎಂಬ ಸಾರ್ವಜನಿಕರ ಕೋರಿಕೆಯೂ ಇದೆ.
ವಿಶೇಷವೆಂದರೆ ಹಿಂದೆ ನಡೆದ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳಲ್ಲಿಯೂ ಮಹಿಳಾ ಮತದಾರರೇ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಆದರೆ, ಜಿಲ್ಲೆಯಲ್ಲಿ ಆರು ವಿಧಾನಸಭಾ ಕ್ಷೇತ್ರಗಳಿದ್ದು, ಒಬ್ಬ ಶಾಸಕಿ (ಕೆಜಿಎಫ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ರೂಪಕಲಾ ಶಶಿಧರ್) ಮಾತ್ರ ಇದ್ದಾರೆ.
ಜನರ ಕಷ್ಟಗಳಿಗೆ ಸ್ಪಂದಿಸಬೇಕು
ಜಿಲ್ಲೆಯ ಹೆಚ್ಚಿನ ಇಲಾಖೆಗಳಲ್ಲಿ ಮಹಿಳಾ ಅಧಿಕಾರಿಗಳು ಇರುವುದು ಖುಷಿಯ ವಿಚಾರ. ಜಿಲ್ಲಾ ಕೇಂದ್ರದಲ್ಲಿ ಇಲಾಖೆಗಳ ಮುಖ್ಯಸ್ಥರಾಗಿ ಕೆಲಸ ಮಾಡಲು ಸಿಕ್ಕಿರುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು; ಜನರ ಕಷ್ಟಗಳಿಗೆ ಸ್ಪಂದಿಸಬೇಕು. ಸಕಾಲಕ್ಕೆ ಕಾನೂನುಬದ್ಧವಾಗಿ ಕೆಲಸ ಮಾಡಿಕೊಡಬೇಕು. ನಮ್ಮ ಜಿಲ್ಲೆಯಲ್ಲಿ ಎಲ್ಲಾ ಕೆಲಸಗಳು ಚೆನ್ನಾಗಿ ನಡೆಯುತ್ತಿವೆ. ಅವರಿಗೆ ಧೈರ್ಯವಾಗಿ ಜಿಲ್ಲಾಡಳಿತ ಬೆಂಬಲಕ್ಕಿದೆ. ಎಸ್.ಎಂ.ಮಂಗಳಾ ಹೆಚ್ಚುವರಿ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.