ADVERTISEMENT

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾಗಿ ಲಕ್ಷ್ಮಿನಾರಾಯಣ ನೇಮಕ

‘ಭಿನ್ನಾಭಿಪ್ರಾಯ ಶಮನಗೊಳಿಸುವೆ, ಆರೂ ಕ್ಷೇತ್ರಗಳಲ್ಲಿ ಪಕ್ಷ ಗೆಲ್ಲಿಸುವೆ’

​ಪ್ರಜಾವಾಣಿ ವಾರ್ತೆ
Published 22 ಜನವರಿ 2023, 5:35 IST
Last Updated 22 ಜನವರಿ 2023, 5:35 IST
ಲಕ್ಷ್ಮೀನಾರಾಯಣ
ಲಕ್ಷ್ಮೀನಾರಾಯಣ   

ಕೋಲಾರ: ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಉಳಿದಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್‌ನ ನೂತನ ಅಧ್ಯಕ್ಷರನ್ನಾಗಿ ಮಾಲೂರಿನ ಲಕ್ಷ್ಮೀನಾರಾಯಣ ಅವರನ್ನು ನೇಮಿಸಲಾಗಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಶನಿವಾರ ಈ ಘೋಷಣೆ ಮಾಡಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಕೆ.ಚಂದ್ರಾರೆಡ್ಡಿ, ಬಿಜೆಪಿ ಸೇರ್ಪಡೆಯಾದ ನಂತರ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಕೆಲವು ದಿನಗಳ ಮಟ್ಟಿಗೆ ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಜವಾಬ್ದಾರಿ
ವಹಿಸಿಕೊಂಡಿದ್ದರು.

ADVERTISEMENT

ಆದರೆ, ಜಿಲ್ಲಾ ಕಾಂಗ್ರೆಸ್ ಮುಖಂಡರ ಬಣ ರಾಜಕೀಯಕ್ಕೆ ಬೇಸತ್ತು ಅವರು ಈ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆನಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಹಲವರು ಪೈಪೋಟಿ ನಡೆಸಿದ್ದರು.

ಮುಳಬಾಗಿಲಿನ ಕೊತ್ತೂರು ಮಂಜುನಾಥ್, ಕೋಲಾರದ ಬಿ.ಎಂ.ಮುಬಾರಕ್, ಮಾಲೂರಿನ ಲಕ್ಷ್ಮೀನಾರಾಯಣ ಅವರ ಹೆಸರು ಕೇಳಿಬಂದಿತ್ತು. ಅಂತಿಮವಾಗಿ ಹಿರಿಯ ಕಾಂಗ್ರೆಸ್ ಮುಖಂಡ ‘ಲಚ್ಚಿ’ ಎಂದೇ ಜನಪ್ರಿಯರಾಗಿರುವ ಲಕ್ಷ್ಮೀನಾರಾಯಣ ಅವರನ್ನು ಪಕ್ಷದ ವರಿಷ್ಠರು ಆಯ್ಕೆ ಮಾಡಿದ್ದಾರೆ.

‘ಜಿಲ್ಲೆಯ ಕಾಂಗ್ರೆಸ್‌ ಮುಖಂಡರಲ್ಲಿ ಏನಾದರೂ ಭಿನ್ನಾಭಿಪ್ರಾಯ, ಜಗಳ ಇದ್ದರೆ ಶಮನಗೊಳಿಸುವೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಕೆಲಸ ಮಾಡುತ್ತೇನೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಮುಂದಿನ ವಿಧಾನಸಭಾ ಚುನಾವಣೆ ಹಾಗೂ ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುತ್ತಿದ್ದು, ಅದಕ್ಕೆ ಕಾಂಗ್ರೆಸ್ ಪಕ್ಷವನ್ನು ಸಜ್ಜುಗೊಳಿಸುವ ಜವಾಬ್ದಾರಿ ಅವರ ಮೇಲಿದೆ ಜೊತೆಗೆ ಜಿಲ್ಲೆಯಲ್ಲಿನ ಕಾಂಗ್ರೆಸ್ ಪಕ್ಷದ ಗುಂಪುಗಾರಿಕೆಯನ್ನು ನಿಭಾಯಿಸುವ ಸವಾಲೂ ಇದೆ.

ಅವರು 1989ರಲ್ಲಿ ಮಾಲೂರಿನ ಯೂತ್‌ ಕಾಂಗ್ರೆಸ್‌ ಅಧ್ಯಕ್ಷನಾಗಿದ್ದರು. ಬಂಗಾರಪ್ಪ ನೇತೃತ್ವದ ಕರ್ನಾಟಕ ಕಾಂಗ್ರೆಸ್‌ ಪಾರ್ಟಿ ಸೇರಿ 1994ರಲ್ಲಿ ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಮರಳಿ ಕಾಂಗ್ರೆಸ್‌ ಸೇರಿದ್ದ ಅವರು ಮಾಲೂರು ಪುರಸಭೆಯಲ್ಲಿ ಮೂರು ಬಾರಿ ಸದಸ್ಯರಾಗಿದ್ದರು. 2004ರಲ್ಲಿ ಅಧ್ಯಕ್ಷರೂ
ಆದರು. ಈಗ ಅವರ ಪತ್ನಿ ಎಸ್‌.ವಿಜಯಲಕ್ಷೆ ವಾರ್ಡ್‌ 5ರಲ್ಲಿ ಸದಸ್ಯರಾಗಿದ್ದಾರೆ. ರಾಜ್ಯ ಕುಂಬಾರ ಸಂಘದ ಅಧ್ಯಕ್ಷರೂ ಆಗಿದ್ದ ಲಕ್ಷ್ಮೀನಾರಾಯಣ ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿದ್ದಾಗ ಕೇಂದ್ರದಲ್ಲಿ ವಿವಿಧ ಮಂಡಳಿಗಳಲ್ಲಿ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.