ADVERTISEMENT

ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಜಮೀನು ಮಂಜೂರು

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2019, 20:16 IST
Last Updated 19 ಆಗಸ್ಟ್ 2019, 20:16 IST

ಕೋಲಾರ: ತಾಲ್ಲೂಕಿನ ಹೊಳಲಿ ಗ್ರಾಮದ ಬಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡಲು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಸಿಎ)ಗೆ 16 ಎಕರೆ ಜಮೀನನ್ನು ಗುತ್ತಿಗೆ ಆಧಾರದ ಮೇರೆಗೆ ಮಂಜೂರು ಮಾಡಿ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸೋಮವಾರ ಆದೇಶಿಸಿದ್ದಾರೆ.

16 ಎಕರೆ ಸರ್ಕಾರಿ ಗೋಮಾಳ ಜಮೀನನ್ನು 30 ವರ್ಷಗಳಿಗೆ ಗುತ್ತಿಗೆ ಆಧಾರದ ಮೇಲೆ ಷರತ್ತುಗಳೊಂದಿಗೆ ಮಂಜೂರು ಮಾಡಿದ್ದಾರೆ. ಹೊಳಲಿ ಗ್ರಾಮದ ಸಮೀಪ ಜಮೀನನ್ನು ಸ್ಟೇಡಿಯಂ ನಿರ್ಮಾಣಕ್ಕೆ ಗುತ್ತಿಗೆ ಆಧಾರದಲ್ಲಿ ಮಂಜೂರು ಮಾಡುವಂತೆ ಕೆಸಿಎಗೆ ಜಿಲ್ಲಾಡಳಿತವನ್ನು ಕೋರಿತ್ತು. ಸರ್ಕಾರ ಇದಕ್ಕೆ ಸಮ್ಮತಿ ಸೂಚಿಸಿ ಪ್ರಚಲಿತ ಮಾರುಕಟ್ಟೆ ದರ ಶೇ.10ರಷ್ಟು ವಾರ್ಷಿಕ ದರ ನಿಗದಿಡಿಸಿ 30 ವರ್ಷಗಳ ಅವಧಿಗೆ ನೀಡಿದೆ.

ವಾರ್ಷಿಕ ದರ ಕಡಿಮೆ ಮಾಡುವಂತೆ ಕೆಸಿಎ ಮನವಿಗೆ ಸರ್ಕಾರ ಸಮ್ಮತಿಸಿದ್ದು, ಜಮೀನಿಗೆ ಶೇ.5ರಷ್ಟು ವಾರ್ಷಿಕ ಜಮೀನು ಗುತ್ತಿಗೆದರ ₹3,17,775 ಲಕ್ಷ ಸಂಸ್ಥೆ ಈಗಾಗಲೇ ಪಾವತಿಸಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ಶೇ.10ರಷ್ಟು ಗುತ್ತಿಗೆ ದರ ಹೆಚ್ಚಿಸುವ ಇನ್ನಿತರೆ ಷರತ್ತಿಗೆ ಒಳಪಟ್ಟು ಜಮೀನು ಸ್ಥಾಪನೆಗೆ ನೀಡಿ ಆದೇಶ ಪತ್ರಕ್ಕೆ ಜಿಲ್ಲಾಧಿಕಾರಿ ಸಹಿ ಮಾಡಿದ್ದಾರೆ.

ADVERTISEMENT

ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಜೆ.ಮಂಜುನಾಥ್, ‘ಕೆಸಿಎ ಮನವಿಗೆ ಸ್ಪಂದಿಸಿ ಸರ್ಕಾರದ ಅನುಮತಿ ಪಡೆದು ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಲಾಗಿದೆ. ಇದರಿಂದ ಸ್ಥಳೀಯ ಕ್ರೀಡಾ ಅಭಿವೃದ್ಧಿಗೂ ಪೂರಕವಾಗುತ್ತದೆ’ ಎಂದರು.

‘ಕೆಸಿಎ ಮೈದಾನದಲ್ಲಿ ಎರಡು ಪಿಚ್ ನಿರ್ಮಿಸಲು ಉದ್ದೇಶಿಸಿದ್ದು, ಬೆಂಗಳೂರಿನಿಂದ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇರುವಷ್ಟೇ ಹತ್ತಿರ ಕೋಲಾರದ ಹೊಳಲಿಯ ಕ್ರೀಡಾಂಗಣ ಬರುವುದರಿಂದ ಕೆಪಿಎಲ್ ಪಂದ್ಯಾವಳಿ ಇನ್ನಿತರೆ ತರಬೇತಿಗಳು ನಡೆಯಲಿದೆ. ರಾಷ್ಟ್ರೀಯನ ಕ್ರಿಕೆಟ್ ಅಕಾಡಮಿ ಬೆಂಗಳೂರು ವಿಮಾನ ನಿಲ್ದಾಣದ ಬಳಿ ಬರುತ್ತಿದೆ. ಅದಕ್ಕೂ ಸಹ ಈ ಮೈದಾನ ಹತ್ತಿರ ಆಗುವುದರಿಂದ ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು ಕ್ರಿಕೆಟ್ ಆಡಲು ಉತ್ತೇಜನ ಸಿಗಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.