ADVERTISEMENT

ಖಾಸಗಿ ಶಾಲೆ ವ್ಯಾಮೋಹ ಬಿಡಿ

​ಪ್ರಜಾವಾಣಿ ವಾರ್ತೆ
Published 16 ಮೇ 2022, 16:04 IST
Last Updated 16 ಮೇ 2022, 16:04 IST
ಕೋಲಾರ ತಾಲ್ಲೂಕಿನ ಹರಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ಶಾಲೆ ಆರಂಭೋತ್ಸವದಲ್ಲಿ ಬಿಇಒ ಸಿ.ಆರ್.ಅಶೋಕ್ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದರು
ಕೋಲಾರ ತಾಲ್ಲೂಕಿನ ಹರಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ಶಾಲೆ ಆರಂಭೋತ್ಸವದಲ್ಲಿ ಬಿಇಒ ಸಿ.ಆರ್.ಅಶೋಕ್ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದರು   

ಕೋಲಾರ: ‘ಸರ್ಕಾರಿ ಶಾಲೆಗಳು ಶೈಕ್ಷಣಿಕ ಚಟುವಟಿಕೆಗಳ ತಾಣವಾಗಿವೆ. ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಮನವಿ ಮಾಡಿದರು.

ತಾಲ್ಲೂಕಿನ ಹರಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ಶಾಲೆ ಆರಂಭೋತ್ಸವದಲ್ಲಿ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿ ಮಾತನಾಡಿ, ‘ಅನೇಕ ಆದರ್ಶ ಪುರುಷರು ಸರ್ಕಾರಿ ಶಾಲೆಗಳಲ್ಲಿ ಓದಿ ರಾಷ್ಟ್ರಕ್ಕೆ ಭದ್ರ ಬುನಾದಿ ಆಗಿದ್ದಾರೆ. ಸರ್ಕಾರಿ ಶಾಲೆಗಳಲ್ಲಿನ ನುರಿತ ಶಿಕ್ಷಕರು ಹೆಚ್ಚು ಆಸಕ್ತಿದಾಯಕವಾಗಿ ಬೋಧನೆ ಮಾಡುವುದರಿಂದ ಶಾಲೆಗಳು ಕಲಿಕಾ ತಾಣಗಳಾಗಿವೆ’ ಎಂದರು.

‘ಅರ್ಹ ವಯಸ್ಸಿನ ಪ್ರತಿ ವಿದ್ಯಾರ್ಥಿಯು ಶಾಲೆಗೆ ದಾಖಲಾಗುವಂತೆ ಮಾಡಬೇಕು. ಶಾಲೆ ಬಿಟ್ಟಿರುವ ಮಕ್ಕಳನ್ನು ಗುರುತಿಸಿ ಶಾಲೆಗೆ ಕರೆತರಬೇಕು. ಶಿಕ್ಷಕರು ಶಾಲೆಗಳಲ್ಲಿ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸಬೇಕು’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಿ ನಾಗರಾಜ್ ಹೇಳಿದರು.

ADVERTISEMENT

‘ಮಳೆಬಿಲ್ಲು ಕಾರ್ಯಕ್ರಮದಡಿ 14 ದಿನಗಳ ಕಾಲ ಶಾಲೆಯ ಕಡೆ ಮಕ್ಕಳನ್ನು ಆಕರ್ಷಿಸಲಾಗುತ್ತದೆ. ಆಟ, ಆಟಿಕೆ, ನಾಟಕ, ಚಿತ್ರಕಲೆ, ಗಣಿತ ಕಲಿಕೆ ಮೂಲಕ ಮಕ್ಕಳು ಸಂತಸಮಯ ಕಲಿಕೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು’ ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ಜಿ.ವಿ.ಗಂಗಾಧರ್ ಸಲಹೆ ನೀಡಿದರು.

ಸುಶಿಕ್ಷಿತರಾಗಿಸಿ: ‘ಪೋಷಕರು ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಬೇಕು. ಸಮಾಜದ ಭದ್ರ ಬುನಾದಿ ಆಗಿರುವ ಮಕ್ಕಳನ್ನು ಸುಶಿಕ್ಷಿತರಾಗಿಸಿ ಅಮೂಲ್ಯ ಆಸ್ತಿಯಾಗಿ ಮಾಡಬೇಕು’ ಎಂದು ಹರಟಿ ಶಾಲೆ ಮುಖ್ಯೋಪಾಧ್ಯಾಯ ಜಿ.ಶ್ರೀನಿವಾಸ್ ತಿಳಿಸಿದರು.

ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷೆ ಮಮತಾ, ರೈತ ಮುಖಂಡ ಗಣೇಶ್‌ಗೌಡ, ಗ್ರಾ.ಪಂ ಮಾಜಿ ಸದಸ್ಯ ವೆಂಕಟೇಶಪ್ಪ, ಶಿಕ್ಷಕರಾದ ಗೋವಿಂದಪ್ಪ, ಸೊಣ್ಣೇಗೌಡ, ಮೀನಾ, ಮುನಿಯಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.