
ಕೋಲಾರ: ಹಿಂದೆ ಹಳ್ಳಿಗಳಲ್ಲಿ ವ್ಯಾಜ್ಯಗಳನ್ನು ಮಧ್ಯಸ್ಥಿಕೆ ಮೂಲಕ ಬಗೆಹರಿಸಲಾಗುತಿತ್ತು. ಆದರೆ, ಅದಕ್ಕೆ ಕಾನೂನಿನ ಗಡಿ ಇರುತ್ತಿರಲಿಲ್ಲ. ಈಗ ನಮ್ಮ ಮಧ್ಯಸ್ಥಿಕೆ ವ್ಯವಸ್ಥೆ ನ್ಯಾಯದಾನವು ಕಾನೂನು ಪ್ರಕ್ರಿಯೆಯ ಒಂದು ಭಾಗವಾಗಿ ನಡೆಯುತ್ತಿದ್ದು, ಕಾಯ್ದೆಯೂ ಬಂದಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ವಿಜಯಕುಮಾರ್ ಎಂ.ಆನಂದಶೆಟ್ಟಿ ತಿಳಿಸಿದರು.
ಬೆಂಗಳೂರು ಮಧ್ಯಸ್ಥಿಕಾ ಕೇಂದ್ರ ಮತ್ತು ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಆಶ್ರಯದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಮಧ್ಯಸ್ಥಗಾರರಿಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎರಡು ದಿನಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಬಾಕಿ ವ್ಯಾಜ್ಯ ಪ್ರಕರಣಗಳು ಹೆಚ್ಚಿದ್ದು, ನ್ಯಾಯಾಧೀಶರು ನಿರ್ವಹಿಸಬಹುದಾದ ಸಾಮರ್ಥ್ಯವನ್ನು ಮೀರಿವೆ. ಸಾಕಾರಾತ್ಮಕ ಅಂಶವೆಂದರೆ ನ್ಯಾಯಾಂಗದ ಮೇಲೆ ಜನರಿಗೆ ನಂಬಿಕೆ ಇದೆ. ಬಂದಂಥ ಎಲ್ಲಾ ವ್ಯಾಜ್ಯಗಳು ನ್ಯಾಯಾಲಯದಲ್ಲಿ ಮೆರಿಟ್ ಮೇಲೆ ನಿರ್ಧಾರವಾಗುವಂಥವು ಇರುವುದಿಲ್ಲ. ಅದಕ್ಕಾಗಿಯೇ ಮಧ್ಯಸ್ಥಿಕೆ ನ್ಯಾಯದಾನದಂಥ ಸಮರ್ಪಕವಾದ ವೇದಿಕೆ ಸೃಷ್ಟಿ ಮಾಡಿಕೊಟ್ಟರೆ ಅಲ್ಲಿಯೇ ಬಗೆಹರಿಸಬಹುದು. ಹಿಂದೆ ಇದ್ದ ರೀತಿಯ ಸಂಬಂಧ ಮರುಕಳಿಸಬೇಕು ಎಂಬುದು ಇದರ ಉದ್ದೇಶ. ಆಗ ಸಮಾಜದಲ್ಲಿ ಸಹಬಾಳ್ವೆ ನೆಲೆಸುತ್ತದೆ. ಎಂದರು.
ಆಗಾಗ್ಗೆ ಇಂಥ ತರಬೇತಿ ಪಡೆದರೆ ಹೆಚ್ಚು ಹೆಚ್ಚು ಅನುಭವ ಸಿಗುತ್ತದೆ, ಪರಿಣತಿ ಸಿದ್ಧಿಸುತ್ತದೆ. ವ್ಯಾಜ್ಯಗಳನ್ನು ಬಗೆಹರಿಸಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಅನುಭವವನ್ನು ಪರಸ್ಪರ ಹಂಚಿಕೊಂಡಷ್ಟು ಬೇರೆಯವರಿಗೆ ದಾರಿದೀಪ, ಮಾರ್ಗದರ್ಶನ ಆಗಲಿದೆ. ಕಾರ್ಯಾಗಾರದಲ್ಲಿ ಎರಡು ಕಡೆಯಿಂದ ಸಂವಾದ ನಡೆಯುತ್ತದೆ. ಎರಡು ದಿನಗಳ ತರಬೇತಿಯ ಪ್ರಯೋಜನ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಶ್ರೀನಿವಾಸ್ ಮಾತನಾಡಿ, ‘ಪ್ರಾಮಾಣಿಕ ಪ್ರಯತ್ನ ನಡೆದರೆ ವ್ಯಾಜ್ಯಗಳನ್ನು ತ್ವರಿತಗತಿಯಲ್ಲಿ ಬಗೆಹರಿಸಬಹುದು. ಮಧ್ಯಸ್ಥಿಕೆ ಮೂಲಕ ಪ್ರಕರಣ ಇತ್ಯರ್ಥ ಮಾಡಿದರೆ ಸಂಬಂಧಗಳು ಸುಧಾರಿಸುತ್ತವೆ. ರಾಜಿ ಮಾಡಿಕೊಂಡಾಗ ಸಮಯ ಹಾಗೂ ಖರ್ಚು ಉಳಿಯುತ್ತದೆ. ಹೆಚ್ಚು ವ್ಯಾಜ್ಯಗಳನ್ನು ಮಧ್ಯಸ್ಥಿಕೆ ಮೂಲಕ ಬಗೆಹರಿಸಿಕೊಳ್ಳಬೇಕು’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಟೇಶ್ ಆರ್., ಬೆಂಗಳೂರು ಮಧ್ಯಸ್ಥಿಕಾ ಕೇಂದ್ರದ ಹಿರಿಯ ತರಬೇತುದಾರರಾದ ಪ್ರಸಾದ್ ಸುಬ್ಬಣ್ಣ, ಬ್ಯುಲಾ ಸಿಂಗ್, ಪ್ರಾಧಿಕಾರದ ಉಪಪ್ರಧಾನ ಕಾನೂನು ನೆರವು ಅಭಿರಕ್ಷಕ ಎಸ್.ಸತೀಶ್, ಮುನಿಸ್ವಾಮಿ, ಮಧ್ಯಸ್ಥಗಾರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.