ADVERTISEMENT

ಅಧ್ಯಾಪಕರ ನಿಯೋಜನೆ ರದ್ದು ಆದೇಶ ಹಿಂಪಡೆಯಲಿ: ವೈ.ಎ.ನಾರಾಯಣಸ್ವಾಮಿ

ಸಚಿವರಿಗೆ ಪತ್ರ ಬರೆದಿದ್ದೇನೆ: ಸರ್ಕಾರದ ಮುಖ್ಯ ಸಚೇತಕ ವೈಎಎನ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಮೇ 2022, 12:54 IST
Last Updated 4 ಮೇ 2022, 12:54 IST
ಕೋಲಾರ ತಾಲ್ಲೂಕಿನ ಬೆಗ್ಲಿ ಹೊಸಹಳ್ಳಿಯಲ್ಲಿ ಬುಧವಾರ ನಡೆದ ದೊಡ್ಡದ್ಯಾವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸರ್ಕಾರದ ಮುಖ್ಯ ಸಚೇತಕ ವೈ.ಎ.ನಾರಾಯಣಸ್ವಾಮಿ ಅವರಿಗೆ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು
ಕೋಲಾರ ತಾಲ್ಲೂಕಿನ ಬೆಗ್ಲಿ ಹೊಸಹಳ್ಳಿಯಲ್ಲಿ ಬುಧವಾರ ನಡೆದ ದೊಡ್ಡದ್ಯಾವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸರ್ಕಾರದ ಮುಖ್ಯ ಸಚೇತಕ ವೈ.ಎ.ನಾರಾಯಣಸ್ವಾಮಿ ಅವರಿಗೆ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು   

ಕೋಲಾರ: ‘ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪದವಿ ಕಾಲೇಜುಗಳಿಗೆ ಮಾಡಿರುವ ಅಧ್ಯಾಪಕರ ನಿಯೋಜನೆ ರದ್ದು ಆದೇಶವನ್ನು ಹಿಂಪಡೆಯಬೇಕು’ ಎಂದು ಸರ್ಕಾರದ ಮುಖ್ಯ ಸಚೇತಕ ವೈ.ಎ.ನಾರಾಯಣಸ್ವಾಮಿ ಆಗ್ರಹಿಸಿದರು.

ತಾಲ್ಲೂಕಿನ ಬೆಗ್ಲಿ ಹೊಸಹಳ್ಳಿಯಲ್ಲಿ ಬುಧವಾರ ನಡೆದ ದೊಡ್ಡದ್ಯಾವರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿ, ‘ಕೋಲಾರದ ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ 4 ಸಾವಿರ ವಿದ್ಯಾರ್ಥಿಗಳಿದ್ದು, 55 ಮಂದಿ ಕಾಯಂ ಅಧ್ಯಾಪಕರು ಕೆಲಸ ಮಾಡುತ್ತಿದ್ದಾರೆ. ಈ ಪೈಕಿ 25 ಮಂದಿ ನಿಯೋಜನೆ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ’ ಎಂದರು.

‘ಸರ್ಕಾರ ನಿಯೋಜನೆ ರದ್ದು ಮಾಡುವುದರಿಂದ 25 ಅಧ್ಯಾಪಕರು ಹೊರ ಹೋದರೆ 4 ಸಾವಿರ ಮಕ್ಕಳಿಗೆ 30 ಅಧ್ಯಾಪಕರಿಂದ ಪಠ್ಯ ಬೋಧನೆ ಮಾಡಲು ಸಾಧ್ಯವಿಲ್ಲ. ಗ್ರಾಮೀಣ ಹೆಣ್ಣು ಮಕ್ಕಳ ಕಲಿಕೆಗೆ ಅಡ್ಡಿಯಾಗುವುದನ್ನು ತಪ್ಪಿಸಲು ಸರ್ಕಾರ ಕೂಡಲೇ ನಿಯೋಜನೆ ರದ್ದು ಮಾಡಿ ಹೊರಡಿಸಿರುವ ಆದೇಶ ವಾಪಸ್‌ ಪಡೆಯಬೇಕು. ಈ ಸಂಬಂಧ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಅವರಿಗೆ ಪತ್ರ ಬರೆದಿದ್ದೇನೆ’ ಎಂದು ಹೇಳಿದರು.

ADVERTISEMENT

‘ರಾಜ್ಯದಲ್ಲಿ ಈ ಶೈಕ್ಷಣಿಕ ವರ್ಷದಿಂದ 1 ಮತ್ತು 2ನೇ ತರಗತಿಗೆ ಮಾತ್ರ ರಾಷ್ಟ್ರೀಯ ಶಿಕ್ಷಣ ನೀತಿಯಡಿ (ಎನ್ಇಪಿ) ಕಲಿಕೆ ಆರಂಭಗೊಳ್ಳಲಿದೆ. ಇದು ದೇಶದಲ್ಲೇ ಐತಿಹಾಸಿಕ ನಿರ್ಧಾರವಾಗಿದ್ದು, ಎನ್‌ಇಪಿ ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕವಾಗಲಿದೆ’ ಎಂದು ತಿಳಿಸಿದರು.

‘ಎನ್‌ಇಪಿ ಜಾರಿ ಕುರಿತು ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅವರು ಇರುವುದೇ ವಿರೋಧ ವ್ಯಕ್ತಪಡಿಸಲು. ಅದಕ್ಕೆ ಹೆದರಿ ಮಕ್ಕಳಿಗೆ ಕೌಶಲಾಧಾರಿತ ಮೌಲ್ಯಯುತ ಶಿಕ್ಷಣ ನೀಡುವ ನಿರ್ಧಾರ ಕೈಬಿಡಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.

ಆತಂಕ ಪಡಬೇಕಿಲ್ಲ: ‘ಪ್ರೌಢ ಶಾಲಾ ಸಹ ಶಿಕ್ಷಕರು, ದೈಹಿಕ ಶಿಕ್ಷಣ ಮತ್ತು ವಿಶೇಷ ಶಿಕ್ಷಕರ ಹೆಚ್ಚುವರಿ ಕುರಿತು ಹೊರಬಿದ್ದಿದ್ದ ಆದೇಶದಿಂದ ಆತಂಕದಲ್ಲಿದ್ದ ಶಿಕ್ಷಕರ ಪರ ಎಲ್ಲಾ ವಿಧಾನ ಪರಿಷತ್ ಸದಸ್ಯರು ಕೆಲಸ ಮಾಡಿದ್ದೇವೆ. ಈ ವರ್ಷ ಹೆಚ್ಚುವರಿ ಪ್ರಕ್ರಿಯೆ ತಡೆ ಹಿಡಿಯಲಾಗಿದ್ದು, ಶಿಕ್ಷಕರು ಆತಂಕ ಪಡಬೇಕಿಲ್ಲ. ಪ್ರೌಢ ಶಾಲೆಗಳಲ್ಲಿ ಮಕ್ಕಳ ಕಲಿಕೆಗೆ ಆಗುವ ತೊಂದರೆ ತಪ್ಪಿಸಲು ಈ ಬಾರಿ ಮೇ ತಿಂಗಳಲ್ಲೇ ಅತಿಥಿ ಶಿಕ್ಷಕರ ನೇಮಕಕ್ಕೆ ಅವಕಾಶ ನೀಡಲಾಗಿದೆ’ ಎಂದು ವಿವರಿಸಿದರು.

‘ಸರ್ಕಾರ ಈಗಾಗಲೇ 15 ಸಾವಿರ ಶಿಕ್ಷಕರ ನೇಮಕಕ್ಕೆ ಕ್ರಮ ವಹಿಸಿದೆ, ಈ ಬಾರಿಯ ವರ್ಗಾವಣೆ ಪ್ರಕ್ರಿಯೆಯಲ್ಲಿ 50 ಸಾವಿರ ಶಿಕ್ಷಕರಿಗೆ ಅನುಕೂಲವಾಗಿದೆ. ಹಲವು ವರ್ಷಗಳಿಂದ ವರ್ಗಾವಣೆಗಾಗಿ ಪರಿತಪಿಸುತ್ತಿದ್ದ ಶಿಕ್ಷಕರಿಗೆ ಖುಷಿ ಸಿಕ್ಕಿದೆ. ಬೆಂಗಳೂರು ವಿಭಾಗವೊಂದಲ್ಲೇ 200 ಸಹ ಶಿಕ್ಷಕರಿಗೆ ಮುಖ್ಯ ಶಿಕ್ಷಕರಾಗಿ ಬಡ್ತಿ ನೀಡುವ ಪ್ರಕ್ರಿಯೆಯನ್ನು ಮೇ 15ರೊಳಗೆ ನಡೆಸುವಂತೆ ಸೂಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ, ಜಿಲ್ಲಾ ಪಿಯುಸಿ ಉಪನ್ಯಾಸಕರ ಸಂಘದ ಅಧ್ಯಕ್ಷ ಟಿ.ಕೆ.ನಟರಾಜ್, ಸಹ್ಯಾದ್ರಿ ಕಾಲೇಜಿನ ಅಧ್ಯಕ್ಷ ಉದಯಕುಮಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.