ADVERTISEMENT

ಮುನಿಸ್ವಾಮಿ ಚಿಲ್ಲರೆ ರಾಜಕಾರಣ ನಿಲ್ಲಿಸಲಿ: ಮುನಿಯಪ್ಪ ಗುಡುಗು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2019, 14:22 IST
Last Updated 16 ಸೆಪ್ಟೆಂಬರ್ 2019, 14:22 IST

ಕೋಲಾರ: ‘ಸಂಸದ ಎಸ್.ಮುನಿಸ್ವಾಮಿ ಚಿಲ್ಲರೆ ರಾಜಕಾರಣ ನಿಲ್ಲಿಸಲಿ. ಕಾರ್ಪೋರೇಟರ್ ಮಟ್ಟಕ್ಕಿಳಿದು ಕಂಡಕಂಡಲ್ಲಿ ಬಾಲಿಷವಾಗಿ ಮಾತನಾಡುವುದನ್ನು ಬಿಡಬೇಕು’ ಎಂದು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ವ್ಯಂಗ್ಯವಾಡಿದರು.

ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಾನು ಎಂದಿಗೂ ಮುನಿಸ್ವಾಮಿ ಅವರಂತೆ ಬಾಲಿಷವಾಗಿ ಮಾತನಾಡಿಲ್ಲ, ನನ್ನ ಅವಧಿಯಲ್ಲಿ ಜಿಲ್ಲೆಯ ಸಾಕಷ್ಟು ಅಭಿವೃದ್ಧಿ ಕೆಲಸಗಳಿಗೆ ಅನುಮೋದನೆ ಸಿಕ್ಕಿದ್ದು, ಹಾಲಿ ಸಂಸದರು ಪ್ರಚಾರದ ಗೀಳು ಬಿಟ್ಟು ಅವುಗಳನ್ನು ಪೂರ್ಣಗೊಳಿಸಲಿ’ ಎಂದು ಸವಾಲು ಹಾಕಿದರು.

‘ಮುನಿಸ್ವಾಮಿ ಆಕಸ್ಮಿಕವಾಗಿ ಲೋಕಸಭಾ ಸದಸ್ಯರಾಗಿದ್ದಾರೆ. ನಾನು ರೈಲ್ವೆ ಸಚಿವನಾಗಿದ್ದಾಗ ₹ 250 ಕೋಟಿ ಅಂದಾಜು ವೆಚ್ಚದಲ್ಲಿ ಮಾರಿಕುಪ್ಪಂನಿಂದ ಕುಪ್ಪಂವರೆಗೆ, ಶ್ರೀನಿವಾಸಪುರದಿಂದ ಮದನಪಲ್ಲಿಗೆ ಹಾಗೂ ದೆಹಲಿಗೆ ರೈಲು ಸಂಪರ್ಕ ಸೇವೆ ಕಲ್ಪಿಸುವ ಕೆಲಸ ಮಾಡಿದ್ದೇನೆ. ಅಲ್ಲದೇ, ರೈಲ್ವೆ ಕೋಚ್ ಕಾರ್ಖಾನೆ ಸ್ಥಾಪನೆಗೆ ಅನುಮೋದನೆ ಕೊಡಿಸಿದೆ. ದೆಹಲಿ ರೈಲು ಸೇವೆ ಇದೀಗ ಸ್ಥಗಿತಗೊಂಡಿದೆ. ನನ್ನ ಅವಧಿಯಲ್ಲಿ ಅರ್ಧಕ್ಕೆ ನಿಂತಿರುವ ಕೆಲಸಗಳನ್ನು ಮುಂದುವರಿಸಲಿ’ ಎಂದರು.

ADVERTISEMENT

‘ಕ್ಷೇತ್ರದಲ್ಲಿ ನನಗೆ ಏಕೆ ಸೋಲಾಯ್ತು ಎಂಬ ಬಗ್ಗೆ ಮಾಜಿ ಸಚಿವ ಬಸವರಾಜರಾಯರೆಡ್ಡಿ ನೇತೃತ್ವದ ಸತ್ಯಶೋಧನಾ ಸಮಿತಿಯು ಜಿಲ್ಲೆಯಲ್ಲಿನ ಪಕ್ಷದ ಮುಖಂಡರು ಹಾಗೂ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹಿಸಿದೆ. ಸಮಿತಿಯು ಅಕ್ಟೋಬರ್ ಮೊದಲ ವಾರದಲ್ಲಿ ಕೆಪಿಸಿಸಿ ಮತ್ತು ಎಐಸಿಸಿಗೆ ವಾಸ್ತವ ವರದಿ ಸಲ್ಲಿಸಲಿದ್ದು, ಆವರೆಗೂ ಕಾದು ನೋಡೋಣ’ ಎಂದು ಹೇಳಿದರು.

‘ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿದ ಪಕ್ಷದ ನಾಯಕರಿಗೆ ಮಾನ- ಮರ್ಯಾದೆಯಿಲ್ಲ. ಅವರಿಗೆ ಕಾಂಗ್ರೆಸ್ ಪಕ್ಷದ ಹೆಸರು ಹೇಳಲು ನಾಚಿಕೆ ಆಗಬೇಕು. ನಾನು ಹಿಂದೆ ಪಕ್ಷ ವಿರೋಧಿ ಕೆಲಸ ಮಾಡಿದ್ದರೆ ಪುರಾವೆ ಒದಗಿಸಲಿ. ನಾನು ಪಕ್ಷ ದ್ರೋಹಿಯಾಗಿದ್ದರೆ ಈ ನಾಯಕರು ಶಾಸಕರಾಗುತ್ತಿರಲಿಲ್ಲ’ ಎಂದು ಗುಡುಗಿದರು.

ಕೆ.ಎಚ್.ಮುನಿಯಪ್ಪ ತಮ್ಮ ರಾಜಕೀಯ ಗುರು ಎಂದು ಬಂಗಾರಪೇಟೆ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿ, ‘ಈ ವಿಚಾರದಲ್ಲಿ ಹೆಚ್ಚು ಮಾತನಾಡುವುದಿಲ್ಲ. ಅದು ಮುಗಿದ ಅಧ್ಯಾಯ. ನಾರಾಯಣಸ್ವಾಮಿ ನನ್ನ ವಿರುದ್ಧ ಏನು ಹೇಳಿಕೆ ಕೊಟ್ಟಿದ್ದಾರೆ ಎಂಬುದು ಆ ಭಾಗದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿಗೆ ಗೊತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.