ADVERTISEMENT

ಅಕ್ರಮ ನಡೆದಿದ್ದರೆ ತನಿಖೆ ಮಾಡಿಸಲಿ: ಶಾಸಕ ರಮೇಶ್‌ಕುಮಾರ್‌ ತಿರುಗೇಟು

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2021, 17:19 IST
Last Updated 2 ಅಕ್ಟೋಬರ್ 2021, 17:19 IST
ಶಾಸಕ ಕೆ.ಆರ್.ರಮೇಶ್‌ಕುಮಾರ್‌ ಕೋಲಾರದ ಕೋಲಾರಮ್ಮ ಕೆರೆಗೆ ಶನಿವಾರ ಬಾಗಿನ ಅರ್ಪಿಸಿದರು
ಶಾಸಕ ಕೆ.ಆರ್.ರಮೇಶ್‌ಕುಮಾರ್‌ ಕೋಲಾರದ ಕೋಲಾರಮ್ಮ ಕೆರೆಗೆ ಶನಿವಾರ ಬಾಗಿನ ಅರ್ಪಿಸಿದರು   

ಕೋಲಾರ: ‘ಡಿಸಿಸಿ ಬ್ಯಾಂಕ್ ಜನಪರವಾಗಿದೆ. ಆದರೆ, ಕೆಲವರು ಪ್ರಜ್ಞೆಯಿಲ್ಲದೆ ಬ್ಯಾಂಕ್‌ ವಿರುದ್ಧ ಏನೇನೋ ಆರೋಪ ಮಾಡುತ್ತಿದ್ದಾರೆ. ವಿರೋಧಿಗಳ ಸಂಖ್ಯೆ ಇನ್ನೂ ಹೆಚ್ಚಲಿ. ನಾವು ಹೆಚ್ಚು ಕೆಲಸ ಮಾಡಿ ತೋರಿಸುತ್ತೇವೆ’ ಎಂದು ಶಾಸಕ ಕೆ.ಆರ್.ರಮೇಶ್‌ಕುಮಾರ್‌ ಡಿಸಿಸಿ ಬ್ಯಾಂಕ್‌ ವಿರೋಧಿಗಳಿಗೆ ತಿರುಗೇಟು ನೀಡಿದರು.

ಇಲ್ಲಿ ಶನಿವಾರ ಕೋಲಾರಮ್ಮ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿ, ‘ಡಿಸಿಸಿ ಬ್ಯಾಂಕ್‌ನಲ್ಲಿ ಅಕ್ರಮ ನಡೆದಿದ್ದರೆ ಅಥವಾ ಹಣದ ದುರುಪಯೋಗವಾಗಿದ್ದರೆ ತನಿಖೆ ಮಾಡಿಸಲಿ. ನಮ್ಮ ಅಭ್ಯಂತರವಿಲ್ಲ’ ಎಂದು ಹೇಳಿದರು.

‘ಸ್ತ್ರೀಶಕ್ತಿ ಸಂಘಗಳ ಸದಸ್ಯರು, ರೈತರು ಸಾಲ ಪಡೆದಿದ್ದಾರೆ. ಅವರೆಲ್ಲಾ ಒಂದೇ ಪಕ್ಷ ಅಥವಾ ಒಂದೇ ಜಾತಿಯವರಾ? ಪ್ರಜ್ಞೆಯಿಲ್ಲದೆ ಮಾತನಾಡುವವರಿಗೆ ಉತ್ತರಿಸುವ ಅಗತ್ಯವಿಲ್ಲ. ಯಾವುದೇ ಕಾರಣಕ್ಕೂ ಜನಪರ ಕೆಲಸ ನಿಲ್ಲಿಸುವುದಿಲ್ಲ. ಸಾಲವನ್ನು ₹ 50 ಸಾವಿರದಿಂದ ₹ 1 ಲಕ್ಷಕ್ಕೆ ಹೆಚ್ಚಿಸುತ್ತೇವೆ. ಈ ಸಂಬಂಧ ಶಾಸಕರೆಲ್ಲಾ ನಬಾರ್ಡ್ ಅಧಿಕಾರಿಗಳನ್ನು ಭೇಟಿಯಾಗಿ ಚರ್ಚಿಸಿದ್ದು, ಇನ್ನೂ ಅನೇಕ ಯೋಜನೆ ಜಾರಿಗೆ ತರುತ್ತೇವೆ’ ಎಂದರು.

ADVERTISEMENT

‘ಸಾಲ ವಿತರಣೆ ಕಾರ್ಯಕ್ರಮಕ್ಕೆ ಕರೆಯಲಿಲ್ಲ ಎಂದು ಕೆಲವರು ಮೂದಲಿಸುತ್ತಿದ್ದಾರೆ. ಆಮಂತ್ರಣ ಪತ್ರಿಕೆ ಕೊಟ್ಟು ಆಹ್ವಾನಿಸಲು ಅದೇನು ಮದುವೆಯಾ ಅಥವಾ ಆರತಕ್ಷತೆಯಾ? ಸಾಲ ಕೊಡಿ ಎಂದು ಕೇಳಿದರಿಗೆ ನಿರಾಕರಿಸಿದ್ದೇವೆಯೇ ಅಥವಾ ಪಕ್ಷವಾರು ಕಾರ್ಯಕ್ರಮ ಮಾಡುತ್ತಿದ್ದೇವೆಯೇ ಹೇಳಲಿ’ ಎಂದು ಸವಾಲು ಹಾಕಿದರು.

‘ತಿಥಿ ಕಾರ್ಯಕ್ರಮದಲ್ಲಿ ಪುರೋಹಿತರು ಪೂಜಾ ಕಾರ್ಯ ಮಾಡುತ್ತಾರೆ. ಅವರು ಹೇಳಿದ್ದನ್ನು ಅಲ್ಲಿ ಕುಳಿತವರು ಮಾಡುತ್ತಾರೆ. ಅದೇ ರೀತಿ ಯಾರೋ ಹೇಳಿದ್ದನ್ನು ಕೇಳಿ ಜಿಲ್ಲಾ ಉಸ್ತುವಾರಿ ಸಚಿವರು ವಿಷಯ ತಿಳಿಯದೆ ಮನಬಂದಂತೆ ಏನೇನೋ ಮಾತನಾಡಿದ್ದಾರೆ. ಡಿಸಿಸಿ ಬ್ಯಾಂಕ್‌ ಸದಾ ಬಡವರ ಬ್ಯಾಂಕ್, ಬಡವರಿಗಾಗಿಯೇ ಕೆಲಸ ಮಾಡುತ್ತೇವೆ ಅಷ್ಟೇ’ ಎಂದು ತಿಳಿಸಿದರು.

ಅವಾಚ್ಯ ಶಬ್ದ ಬಳಸಿಲ್ಲ: ‘ಸೊಸೈಟಿಗಳ ಮೂಲಕ ಬಡ್ಡಿರಹಿತ ಸಾಲ ಕೊಡುತ್ತೇವೆ. ಗ್ರಾಮಗಳಲ್ಲಿ ಅಭಿಯಾನ ನಡೆಸಿ ರೈತರಿಗೆ ಅನುಕೂಲ ಕಲ್ಪಿಸಿ ಎಂದು ಅಧಿಕಾರಿಗಳಿಗೆ ಹಲವು ಬಾರಿ ಹೇಳಿದ್ದೆ. ಆದರೂ ಅವರು ಬದಲಾಗಿಲ್ಲ. ಹೀಗಾಗಿ ಶ್ರೀನಿವಾಸಪುರದಲ್ಲಿ ಅಧಿಕಾರಿಗಳನ್ನು ಬೈದಿದ್ದೇನೆ ಅಷ್ಟೇ. ಸಾತ್ವಿಕ ಸಿಟ್ಟು ಇದ್ದರಷ್ಟೇ ಜನರ ಕೆಲಸ ಮಾಡಬಹುದು’ ಎಂದರು.

‘ಜನಪ್ರತಿನಿಧಿಯಾಗಿ ಅಧಿಕಾರಿಗಳಿಗೆ ಅಷ್ಟನ್ನೂ ಕೇಳದಿದ್ದರೆ ಏನು ಪ್ರಯೋಜನ? ನಾನು ಹಳ್ಳಿ ಮನುಷ್ಯ, ಕೋಪದಲ್ಲಿ ಮಾತನಾಡುವುದು ಸಹಜ. ಕೆಲ ಸಂದರ್ಭದಲ್ಲಿ ಆಕ್ರೋಶಭರಿತ ಮಾತು ಬರುವುದು ಸಾಮಾನ್ಯ. ಶ್ರೀನಿವಾಸಪುರದ ಸಭೆಯಲ್ಲಿ ಆವೇಶಭರಿತನಾಗಿ ಮಾತನಾಡಿದರೂ ಅಧಿಕಾರಿಗಳ ವಿರುದ್ಧ ಅವಾಚ್ಯ ಶಬ್ದ ಬಳಸಿಲ್ಲ’ ಎಂದು ಸ್ಪಷ್ಟಪಡಿಸಿದರು.

ಹೊಂದಾಣಿಕೆ ಹೇಗೆ ಸಾಧ್ಯ?: ‘ದೇಶದ ಸಂವಿಧಾನದಲ್ಲಿ ಅವಕಾಶವಿದೆ. ಯಾರು ಯಾವ ಪಕ್ಷಕ್ಕೆ ಬೇಕಾದರೂ ಹೋಗಬಹುದು. ಕೃಪೆ ತೋರಲು ನಾನು ಈಶ್ವರನಾ? ನನ್ನಂತಹವರ ಕೃಪಾಕಟಾಕ್ಷ ಶಾಸಕ ಕೆ.ಶ್ರೀನಿವಾಸಗೌಡರಿಗೆ ಬೇಕಿಲ್ಲ. ಅವರದ್ದೇ ಆದ ಶಕ್ತಿಯಿದೆ. ನಾನು ಕಾಂಗ್ರೆಸ್‌ನಲ್ಲಿ ಇದ್ದೇನೆ, ಕೆ.ಎಚ್‌.ಮುನಿಯಪ್ಪ ಸಹ ಕಾಂಗ್ರೆಸ್‌ ಪಕ್ಷದಲ್ಲಿದ್ದಾರೆ. ಅವರ ಜತೆ ಹೊಂದಾಣಿಕೆ ಹೇಗೆ ಸಾಧ್ಯ? ಸ್ನೇಹಿತರು ಹೊಂದಾಣಿಕೆ ಮಾಡಿಕೊಂಡರೆ ಮಕ್ಕಳಾಗುತ್ತವೆಯೇ?’ ಎಂದು ಪ್ರಶ್ನಿಸಿದರು.

‘ಕೆ.ಸಿ ವ್ಯಾಲಿ ಯೋಜನೆ ವಿಚಾರದಲ್ಲಿ ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಜಿಲ್ಲೆಯ ಜನರಿಗೆ ಆಗಬೇಕಾದ ಕೆಲಸವನ್ನು ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಮಾಡಿದ್ದೇವೆ. ಯೋಜನೆಯ 2ನೇ ಹಂತದ ಕಾಮಗಾರಿಗೆ ಎಲ್ಲಾ ಸಿದ್ಧತೆ ಆಗಿದ್ದು, ಟೆಂಡರ್ ಸಹ ಪೂರ್ಣಗೊಂಡಿದೆ. ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿ ಬೇಗನೆ ಕಾಮಗಾರಿ ಆರಂಭಿಸಿದರೆ ಜಿಲ್ಲೆಯ ಮತ್ತಷ್ಟು ಕೆರೆಗಳಿಗೆ ನೀರು ಹರಿಸಬಹುದು’ ಎಂದರು.

ಶಾಸಕರಾದ ಕೆ.ಶ್ರೀನಿವಾಸಗೌಡ, ಕೃಷ್ಣಬೈರೇಗೌಡ, ವಿಧಾನ ಪರಿಷತ್‌ ಸದಸ್ಯ ನಜೀರ್‌ ಅಹಮ್ಮದ್‌, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್‌, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ, ನಿರ್ದೇಶಕರಾದ ಎಂ.ಎಲ್‌.ಅನಿಲ್‌ಕುಮಾರ್‌, ಸೋಮಣ್ಣ, ನಗರಸಭೆ ಅಧ್ಯಕ್ಷೆ ಶ್ವೇತಾ.ಆರ್.ಶಬರೀಶ್, ಉಪಾಧ್ಯಕ್ಷ ಪ್ರವೀಣ್‌ಗೌಡ, ಸದಸ್ಯರಾದ ಎಸ್‌.ಆರ್‌.ಮುರಳಿಗೌಡ, ರಾಕೇಶ್‌, ಸಂಗೀತಾ, ಮಂಜುನಾಥ್‌ ಗುಣಶೇಖರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.