ಮಾಲೂರು: ತಾಲ್ಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಚಿಕ್ಕತಿರುಪತಿ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಮಂಗಳವಾರ ಹುಂಡಿ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಹುಂಡಿಯಲ್ಲಿ ಯುವತಿಯೊಬ್ಬಳ ಹರಕೆ ಪತ್ರ ಆಶ್ಚರ್ಯ ಹುಟ್ಟಿಸಿದೆ.
‘ವೆಂಕಟರಮಣ ಸ್ವಾಮಿ, ತಿರುಪತಿ ತಿಮ್ಮಪ್ಪ...
ನಾನು ನಿನ್ನ ಸನ್ನಿಧಿಗೆ ಬಂದು ತಲೆ ಮುಡಿ ಕೊಡುತ್ತೇನೆ. ದಯವಿಟ್ಟು ನಾನು, ಪ್ರದೀಪ ಒಂದಾಗುವಂತೆ ಮಾಡು. ಅವನು ನನ್ನ ಬಿಟ್ಟು ಇರದಂತೆ ಮಾಡು, ನನ್ನನ್ನೇ ಜಾಸ್ತಿ ಪ್ರೀತಿಸುವಂತೆ ಮಾಡು. ಆದಷ್ಟು ಬೇಗ ನಾವಿಬ್ಬರೂ ಒಂದಾಗಬೇಕು. ಆಫೀಸಿನಲ್ಲಿ ನನ್ನನ್ನೆ ನೋಡಬೇಕು. ನನಗೆ ಅವನ ಮೇಲೆ ಇರುವ ಭಾವನೆ ಅವನಿಗೂ ನನ್ನ ಮೇಲೆ ಬರಬೇಕು’ ಎಂದು ಯುವತಿ ಶ್ರೀನಿವಾಸನಿಗೆ ಹರಕೆ ಪತ್ರ ಬರೆದಿದ್ದಾರೆ.
ಉಳಿದಂತೆ ಕಳೆದ ಮೂರೂವರೆ ತಿಂಗಳ ಅವಧಿಯಲ್ಲಿ ₹50 ಸಾವಿರ ಹಾಗೂ 35ಗ್ರಾಂ ಚಿನ್ನ, 184ಗ್ರಾಂ ಬೆಳ್ಳಿ ಹಾಗೂ ವಿದೇಶಿ ನೋಟುಗಳು ಸಂಗ್ರಹವಾಗಿವೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಸೆಲ್ವಮಣಿ ಹೇಳಿದರು.
ದೇವಸ್ಥಾನದ ಅನ್ನದಾಸೋಹ ಆವರಣದಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯವು ಬೆಳಗ್ಗೆ ಆರಂಭವಾಗಿ ಸಂಜೆವರೆಗೂ ನಡೆಯಿತು. ತಾಲ್ಲೂಕಿನ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಕೆನರಾ ಬ್ಯಾಂಕ್ ಸಿಬ್ಬಂದಿ ಹುಂಡಿ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು.
ತಹಶೀಲ್ದಾರ್ ರೂಪಾ, ಮುಜರಾಯಿ ತಹಶೀಲ್ದಾರ್ ಶ್ರೀನಿವಾಸ್ ರೆಡ್ಡಿ, ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕರಾದ ಶ್ರೀಪತಿ, ಅರುಣ್ ಕುಮಾರ್, ಚಿಕ್ಕತಿರುಪತಿ ಗ್ರಾಮ ಆಡಳಿತ ಅಧಿಕಾರಿ ರೂಪೇಂದ್ರ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೃಷ್ಣಮೂರ್ತಿ, ಆಲಂಬಾಡಿ ಗೋಪಾಲ್, ಶ್ರೀನಿವಾಸನ್, ಶ್ರೀನಿವಾಸಯ್ಯ, ಭಾಗ್ಯಶ್ರೀ, ತಿಮ್ಮರಾಯಪ್ಪ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಟಿ ಆರ್ ವೆಂಕಟೇಶ್ ಗೌಡ, ಪೇದ ವೆಂಕೋಬರಾವ್, ದೇವಾಲಯದ ಪೇಷ್ಕಾರ್ ಚಲುವಸ್ವಾಮಿ, ವೆಂಕಟೇಶ್, ಕೇಶವ್ ಮೂರ್ತಿ, ಕೆನರಾ ಬ್ಯಾಂಕ್ ನ ರಾಮಮೂರ್ತಿ ಸೇರಿದಂತೆ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.