ADVERTISEMENT

ಜಂಟಿ ಸಭೆ ಕರೆಯಲು ಕೋಮುಲ್‌ಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಪತ್ರ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2020, 15:01 IST
Last Updated 17 ಫೆಬ್ರುವರಿ 2020, 15:01 IST

ಕೋಲಾರ: ‘ಇತ್ತೀಚಿನ ದಿನಗಳಲ್ಲಿ ಹಾಲು ಉತ್ಪಾದನೆ ಕುಸಿಯುತ್ತಿದ್ದು, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಡಿಸಿಸಿ ಬ್ಯಾಂಕ್ ಮತ್ತು ಕೋಚಿಮುಲ್ ಜಂಟಿ ಸಭೆ ಕರೆಯಲಾಗುವುದು‘ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.

ಇಲ್ಲಿನ ಡಿಸಿಸಿ ಬ್ಯಾಂಕ್ ಕಚೇರಿಯಲ್ಲಿ ಸೋಮವಾರ ಸುದ್ದಿಗಾರೊಂದಿಗೆ ಮಾತನಾಡಿ, ‘ಹಾಲಿ ಉತ್ಪಾದನೆ ಹೆಚ್ಚಿಸಲು ಹಸು ಖರೀದಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಕಲ್ಪಿಸಲು ಯೋಜನೆ ರೂಪಿಸಲಾಗಿದ್ದು, ಇದರ ಸಾಧಕ ಬಾಧಕಗಳನ್ನು ಚರ್ಚಿಸಲಾಗುವುದು’ ಎಂದರು.

‘ಎರಡೂ ಜಿಲ್ಲೆಗಳಿಂದ ಒಕ್ಕೂಟಕ್ಕೆ ಸಂಗ್ರಹವಾಗುತ್ತಿದ್ದ ಪ್ರತಿ ದಿನದ ಹಾಲಿನ ಪ್ರಮಾಣ ೧೧ ಲಕ್ಷದಿಂದ ೭.೭೦ ಲಕ್ಷ ಸಾವಿರ ಲೀಟರ್‌ಗೆ ಇಳಿದಿರುವುದು ವಿಷಾದದ ಸಂಗತಿಯಾಗಿದೆ. ರೈತರ ಜೀವಾಳವಾಗಿರುವ ಹೈನೋದ್ಯಮಕ್ಕೆ ಕುತ್ತು ಬಂದರೆ ಇಡೀ ಜಿಲ್ಲೆಯ ಆರ್ಥಿಕ ಪರಿಸ್ಥಿತಿಯ ಮೇಲೂ ಪರಿಣಾಮ ಬೀರುತ್ತದೆ’ ಎಂದು ಹೇಳಿದರು.

ADVERTISEMENT

‘ಮಿಶ್ರ ತಳಿ ಹಸು ಖರೀದಿಗಾಗಿ ರೈತರಿಗೆ ₨ ೭೦ ಸಾವಿರದಿಂದ ₨ ೮೦ ಸಾಲವನ್ನು ಶೂನ್ಯ ಬಡ್ಡಿದರದ ಕಲ್ಪಿಸಲಾಗುವುದು. ಹಾಲು ಒಕ್ಕೂಟದ ಸಹಯೋಗದೊಂದಿಗೆ ಮಧ್ಯಮವಾವಧಿ ಸಾಲವನ್ನು ಪ್ರತಿ ತಾಲ್ಲೂಕಿಗೆ ೫೦೦ ರಿಂದ ೧ ಸಾವಿರ ಮಿಶ್ರ ತಳಿ ಹಸು ಖರೀದಿಗಾಗಿ ನೀಡಲು ಬ್ಯಾಂಕ್ ಉದ್ದೇಶಿಸಿದೆ. ಈ ಯೋಜನೆಯನ್ನು ಕೋಚಿಮುಲ್, ಡಿಸಿಸಿ ಬ್ಯಾಂಕ್ ಜಂಟಿಯಾಗಿ ಕ್ರಿಯಾಯೋಜನೆ ರೂಪಿಸಿ ಹಸುಗಳನ್ನು ಖರೀದಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಜಂಟಿ ಸಭೆಗೆ ಬ್ಯಾಂಕಿನ ನಿರ್ದೇಶಕರು, ವ್ಯವಸ್ಥಾಪಕರು ಆಗಮಿಸುತ್ತಾರೆ. ಅದೇ ರೀತಿ ಕೋಚಿಮುಲ್ ಆಡಳಿತಮಂಡಳಿಯವರನ್ನು ಸಹ ಆಹ್ವಾನಿಸಲಾಗುವುದು. ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಜಂಟಿ ಸಭೆ ಕರೆಯಲು ಕೋಮುಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.