ADVERTISEMENT

ಕೋಲಾರ: ಸ್ಥಳೀಯ ಸಂಸ್ಥೆ ಮೀಸಲಾತಿ ಪಟ್ಟಿ ಪ್ರಕಟ

ಮೀಸಲಾತಿ ನಿಗದಿಗೆ ಮೀನಮೇಷ: ಟೀಕೆಗೆ ಗುರಿಯಾಗಿದ್ದ ಸರ್ಕಾರದ ನಡೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2020, 16:52 IST
Last Updated 8 ಅಕ್ಟೋಬರ್ 2020, 16:52 IST

ಕೋಲಾರ: ರಾಜ್ಯ ಸರ್ಕಾರವು ಜಿಲ್ಲೆಯ 3 ನಗರಸಭೆ ಹಾಗೂ 3 ಪುರಸಭೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷಗಾದಿಯ ಮೀಸಲಾತಿ ಪಟ್ಟಿಯನ್ನು ಗುರುವಾರ ಪ್ರಕಟಿಸಿದೆ.

ಕೋಲಾರ ನಗರಸಭೆ ಅಧ್ಯಕ್ಷಗಾದಿ ಹಿಂದುಳಿದ ವರ್ಗ–ಎ (ಮಹಿಳೆ) ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ. ಮುಳಬಾಗಿಲು ನಗರಸಭೆ ಅಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗ–ಎ ಮತ್ತು ಉಪಾಧ್ಯಕ್ಷಗಾದಿಯನ್ನು ಸಾಮಾನ್ಯ ವರ್ಗಕ್ಕೆ (ಮಹಿಳೆ) ಮೀಸಲಿರಿಸಲಾಗಿದೆ. ಕೆಜಿಎಫ್‌ (ರಾಬರ್ಟ್‌ಸನ್‌ಪೇಟೆ) ನಗರಸಭೆ ಅಧ್ಯಕ್ಷಗಾದಿಯನ್ನು ಸಾಮಾನ್ಯ ವರ್ಗ ಮತ್ತು ಉಪಾಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗ–ಎ (ಮಹಿಳೆ) ಮೀಸಲಿಡಲಾಗಿದೆ.

ಈ ಮೂರೂ ನಗರಸಭೆಗಳಿಗೆ 2019ರ ನ.12ರಂದು ಚುನಾವಣೆ ನಡೆದಿತ್ತು. ಬಳಿಕ ನ.14ರಂದು ಮತ ಎಣಿಕೆ ಮಾಡಿ ಫಲಿತಾಂಶ ಘೋಷಿಸಲಾಗಿತ್ತು. ನಂತರ ಸುಮಾರು 11 ತಿಂಗಳು ಕಳೆದರೂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟಿಸಿರಲಿಲ್ಲ. ಸರ್ಕಾರದ ಈ ನಡೆ ತೀವ್ರ ಟೀಕೆಗೆ ಗುರಿಯಾಗಿತ್ತು.

ADVERTISEMENT

ಮೀಸಲಾತಿ ಸಂಬಂಧ 2020ರ ಮಾರ್ಚ್‌ 3ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಹಿಂಪಡೆದ ಸರ್ಕಾರ ಶೀಘ್ರವೇ ಮೀಸಲಾತಿ ಮರು ನಿಗದಿಪಡಿಸಿ ಹೊಸ ಅಧಿಸೂಚನೆ ಹೊರಡಿಸುವುದಾಗಿ ಹೈಕೋರ್ಟ್‌ಗೆ ತಿಳಿಸಿತ್ತು. ಅದರಂತೆ ಇದೀಗ ಮೀಸಲಾತಿ ಮರು ನಿಗದಿಪಡಿಸಿ ಆದೇಶ ಹೊರಡಿಸಿದೆ.

ಪುರಸಭೆ ಮೀಸಲಾತಿ: ಬಂಗಾರಪೇಟೆ ಪುರಸಭೆ ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ ವರ್ಗ (ಮಹಿಳೆ) ಮತ್ತು ಉಪಾಧ್ಯಕ್ಷಗಾದಿಯನ್ನು ಪರಿಶಿಷ್ಟ ಜಾತಿಗೆ (ಮಹಿಳೆ) ಮೀಸಲಿಡಲಾಗಿದೆ. ಮಾಲೂರು ಪುರಸಭೆ ಅಧ್ಯಕ್ಷಗಾದಿಯನ್ನು ಪರಿಶಿಷ್ಟ ಜಾತಿಗೆ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗ–ಎಗೆ (ಮಹಿಳೆ) ಮೀಸಲಿಡಲಾಗಿದೆ.

ಶ್ರೀನಿವಾಸಪುರ ಪುರಸಭೆ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಜಾತಿ (ಮಹಿಳೆ) ಹಾಗೂ ಉಪಾಧ್ಯಕ್ಷಗಾದಿಯನ್ನು ಸಾಮಾನ್ಯ ವರ್ಗಕ್ಕೆ (ಮಹಿಳೆ) ಮೀಸಲಿರಿಸಲಾಗಿದೆ. ಈ ಮೂರೂ ಪುರಸಭೆಗಳಿಗೆ 2019ರ ಮೇ 29ರಂದು ಚುನಾವಣೆ ನಡೆದಿತ್ತು. ನಂತರ ಮೇ 31ರಂದು ಮತ ಎಣಿಕೆ ಮಾಡಿ ಫಲಿತಾಂಶ ಘೋಷಿಸಲಾಗಿತ್ತು. ಬಳಿಕ 2020ರ ಮಾರ್ಚ್‌ 11ರಂದು ಹೊರಡಿಸಿದ ಮೀಸಲಾತಿ ಪಟ್ಟಿಯನ್ನು ಸರ್ಕಾರ ಹಿಂಪಡೆದಿತ್ತು.

ಸರ್ಕಾರ ಸಾಕಷ್ಟು ಅಳೆದು ತೂಗಿ ಬರೋಬರಿ 1 ವರ್ಷ 4 ತಿಂಗಳ ಬಳಿಕ ಇದೀಗ ಈ ಪುರಸಭೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪಟ್ಟಿ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.