ADVERTISEMENT

ಅದಾಲತ್‌: 28,482 ಪ್ರಕರಣ ಗುರುತು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2020, 17:05 IST
Last Updated 19 ಡಿಸೆಂಬರ್ 2020, 17:05 IST

ಕೋಲಾರ: ‘ಜಿಲ್ಲೆಯಲ್ಲಿ 41,794 ಪ್ರಕರಣಗಳ ಪೈಕಿ 28,482 ಪ್ರಕರಣಗಳನ್ನು ಲೋಕ್ ಅದಾಲತ್‌ನಲ್ಲಿ ರಾಜಿ ಮಾಡಿಸಲು ಗುರುತಿಸಲಾಗಿದೆ’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಎಂ.ಎಲ್‌.ರಘುನಾಥ್ ತಿಳಿಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಈಗಾಗಲೇ ಸುಮಾರು 4,500 ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ಇತ್ಯರ್ಥವಾಗಿವೆ. ಜಿಲ್ಲೆಯಲ್ಲಿ ಲೋಕ ಅದಾಲತ್ ಯಶಸ್ವಿಯಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

‘400 ಸಿವಿಲ್ ಪ್ರಕರಣ, 500 ಕ್ರಿಮಿನಲ್ ಪ್ರಕರಣ ಹಾಗೂ 40 ಮೋಟಾರು ಪ್ರಕರಣಗಳಲ್ಲಿ ₹ 1.17 ಕೋಟಿಯನ್ನು ವಿಮಾ ಕಂಪನಿಗಳಿಂದ ಕೊಡಿಸಲಾಗಿದೆ. ಚೆಕ್‌ಬೌನ್ಸ್ ಪ್ರಕರಣಗಳನ್ನು ಸಹ ಇತ್ಯರ್ಥಪಡಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಸಂಚಾರ ನಿಯಮ ಉಲ್ಲಂಘನೆ ಸಂಬಂಧ ಪೊಲೀಸ್ ಕಾಯ್ದೆಯಡಿ ಬರುವ ಸಣ್ಣ ಪುಟ್ಟ 2,800 ಪ್ರಕರಣಗಳನ್ನು ಬಗೆಹರಿಸಲಾಗಿದೆ. ಹಣ ವಸೂಲಿ, ಬ್ಯಾಂಕ್, ವಿದ್ಯುತ್, ವೈವಾಹಿಕ ಪ್ರಕರಣಗಳು ಹಾಗೂ 50 ಮರಳು ದಂಧೆ ಪ್ರಕರಣಗಳಲ್ಲಿ ₹ 33 ಲಕ್ಷ ದಂಡ ವಿಧಿಸಲಾಗಿದೆ’ ಎಂದು ವಿವರಿಸಿದರು.

‘ಲೋಕ ಅದಾಲತ್‌ಗೆ ಜಿಲ್ಲಾಡಳಿತದ ಅಧಿಕಾರಿಗಳು, ಸ್ಥಳೀಯ ವಕೀಲರ ಸಂಘ, ತಾಲ್ಲೂಕುಗಳ ವಕೀಲರ ಸಂಘ, ಗಣಿ ಇಲಾಖೆ, ವಿಮಾ ಕಂಪನಿ ಅಧಿಕಾರಿಗಳು, ಕಂಪನಿಯ ವಕೀಲರು, ತಾಲ್ಲೂಕು ನ್ಯಾಯಾಧೀಶರು ಹಾಗೂ ನ್ಯಾಯಾಲಯ ಸಿಬ್ಬಂದಿ ಸಹಕಾರ ನೀಡಿದ್ದಾರೆ’ ಎಂದು ಸ್ಮರಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್‌.ಗಂಗಾಧರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶ್ರೀಧರ್, ವಕೀಲ ವಿ.ಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.