ADVERTISEMENT

ಕರ್ತವ್ಯಕ್ಕೆ ನಿಯೋಜಿಸಲು ಲಂಚ: ಹೋಂ ಗಾರ್ಡ್‌ ಬಂಧನ, ಇನ್‌ಸ್ಪೆಕ್ಟರ್‌ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 18:34 IST
Last Updated 28 ಫೆಬ್ರುವರಿ 2026, 18:34 IST
<div class="paragraphs"><p>ಬಂಧನ (ಸಾಂದರ್ಭಿಕ ಚಿತ್ರ)</p></div>

ಬಂಧನ (ಸಾಂದರ್ಭಿಕ ಚಿತ್ರ)

   

ಕೋಲಾರ: ಹೋಂ ಗಾರ್ಡ್‌ಗಳನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲು ಲಂಚ ಪಡೆಯುತ್ತಿದ್ದ ಮಧ್ಯವರ್ತಿ ಹೋಂ ಗಾರ್ಡ್‌ ಮಂಜುನಾಥ್‌ ಎಂಬುವರನ್ನು ಲೋಕಾಯುಕ್ತ ಪೊಲೀಸರು ಶನಿವಾರ ರಾತ್ರಿ ಬಂಧಿಸಿದ್ದಾರೆ.

ಮತ್ತೊಬ್ಬ ಮಧ್ಯವರ್ತಿ ನಿವೃತ್ತ ಹೋಂ ಗಾರ್ಡ್‌ ಮುನಿಯಪ್ಪ ಹಾಗೂ ಇನ್‌ಸ್ಪೆಕ್ಟರ್‌ ಮಹೇಶ್‌ ಅವರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ADVERTISEMENT

ಲೋಕಾಯುಕ್ತ ಜಿಲ್ಲಾ ಅಧೀಕ್ಷಕ ಆ್ಯಂಟೋನಿ ಜಾನ್‌ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಹೋಂ ಗಾರ್ಡ್‌ ಆಗಿರುವ ದೂರುದಾರ ಮುರಳಿ ನೀಡಿದ ದೂರಿನ ಮೇರೆಗೆ ಬಂಗಾರಪೇಟೆ ತಾಲ್ಲೂಕಿನಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

ಮುರಳಿ ಅವರನ್ನು ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಪೊಲೀಸ್‌ ಠಾಣೆಗೆ ಕರ್ತವ್ಯಕ್ಕೆ ನಿಯೋಜಿಸಲು ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣ ಇದಾಗಿದೆ. ಈ ಹಿಂದೆ ಕೆಜಿಎಫ್‌ನ ಆ್ಯಂಡರ್ಸನ್‌ಪೇಟೆ ಪೊಲೀಸ್‌ ಠಾಣೆಗೆ ನಿಯೋಜಿಸಲು ಕೂಡ ಲಂಚಕ್ಕೆ ಬೇಡಿಕೆ ಇಡಲಾಗಿತ್ತು. ಎರಡೂ ಸೇರಿ ಒಟ್ಟು ₹ 6 ಸಾವಿರಕ್ಕೆ ಬೇಡಿಕೆ ಇಡಲಾಗಿತ್ತು.

ಅದರಂತೆ ಮುರಳಿ ಅವರು ಮಧ್ಯವರ್ತಿ ಹೋಂ ಗಾರ್ಡ್‌ ಮಂಜುನಾಥ್‌ ಎಂಬುವರಿಗೆ ಫೋನ್‌ಪೇ ಮೂಲಕ ₹ 5 ಸಾವಿರ ನೀಡಿದ್ದಾರೆ. ನಂತರ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ. ಉಳಿದ ₹ 1 ಸಾವಿರ ಪಡೆಯುತ್ತಿದ್ದ ಮಂಜುನಾಥ್‌ ಅವರನ್ನು ಲೋಕಾಯುಕ್ತ ಪೊಲೀಸರು ಟ್ರ್ಯಾಪ್‌ ಮಾಡಿದ್ದಾರೆ.

ಮಂಜುನಾಥ್‌ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ನಿವೃತ್ತ ಹೋಂ ಗಾರ್ಡ್ ಮುನಿಯಪ್ಪ ಕೂಡ ಈ ಪ್ರಕರಣದಲ್ಲಿ ಮಧ್ಯವರ್ತಿಯಾಗಿ ಲಂಚ ಪಡೆಯುತ್ತಿರುವುದು ಗೊತ್ತಾಗಿದೆ. ಹೀಗಾಗಿ, ಮುನಿಯಪ್ಪ ಅವರನ್ನು ವಶಕ್ಕೆ ಪಡೆದು ವಿಚಾರಿಸಿದ್ದಾರೆ. ಈ ಸಂದರ್ಭದಲ್ಲಿ ಇನ್‌ಸ್ಪೆಕ್ಟರ್‌ ಮಹೇಶ್‌ ಅವರಿಗೆ ಹಣ ರವಾನೆ ಆಗುವ ವಿಚಾರ ಪ್ರಸ್ತಾಪವಾಗಿದೆ. ಮಹೇಶ್‌ ಅವರು ಹೋಂ ಗಾರ್ಡ್‌ಗಳನ್ನು ವಿವಿಧ ಠಾಣೆಗಳಿಗೆ ನಿಯೋಜನೆ ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ.

‘ಮಧ್ಯವರ್ತಿ ಹೋಂ ಗಾರ್ಡ್‌ ಮಂಜುನಾಥ್‌ ಅವರನ್ನು ಬಂಧಿಸಲಾಗಿದೆ. ನಿವೃತ್ತ ಹೋಂ ಗಾರ್ಡ್‌ ಮುನಿಯಪ್ಪ ಹಾಗೂ ಇನ್‌ಸ್ಪೆಕ್ಟರ್‌ ಮಹೇಶ್‌ ಅವರನ್ನು ತನಿಖೆಗೆ ಒಳಪಡಿಸಿದ್ದು, ಅಗತ್ಯಬಿದ್ದರೆ ಬಂಧಿಸುತ್ತೇವೆ’ ಎಂದು ಆ್ಯಂಟೋನಿ ಜಾನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಫೋನ್‌ಪೇನಲ್ಲಿ ಹಣ ರವಾನೆ ಆಗಿರುವ ಮಾಹಿತಿ ಸಿಕ್ಕಿದೆ. ಈ ಸಂಬಂಧ ದಾಖಲೆಗಳು ಲಭಿಸಿವೆ. ಟ್ರ್ಯಾಪ್‌ ವೇಳೆ ಲಭಿಸಿದ ₹ 1 ಸಾವಿರವನ್ನು ವಶಕ್ಕೆ ಪಡೆದಿದ್ದೇವೆ’ ಎಂದರು.

‘ಈ ಪ್ರಕರಣವನ್ನು ಬಹಳ ದಿನಗಳಿಂದ ಬೆನ್ನು ಹತ್ತಿ ತನಿಖೆ ನಡೆಸುತ್ತಿದ್ದೇವೆ. ಇನ್ನೂ ಕೆಲ ಹೋಂ ಗಾರ್ಡ್‌ಗಳ ಕರ್ತವ್ಯ ನಿಯೋಜನೆಗೆ ಲಂಚ ಪಡೆಯುತ್ತಿರುವ ವಿಚಾರ ಗೊತ್ತಾಗಿದೆ. ವಸೂಲಿಗೆಂದು ಕೆಲ ಹೋಂ ಗಾರ್ಡ್‌ಗಳನ್ನು ನಿಯೋಜನೆ ಮಾಡಿಕೊಂಡಿದ್ದಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.