ADVERTISEMENT

ಉಪವಾಸ ವ್ರತಾಚರಣೆ: ಕೋಲಾರ ಜಿಲ್ಲೆಯಲ್ಲಿ ಕಳೆಗಟ್ಟಿದ ಶಿವರಾತ್ರಿ ಸಂಭ್ರಮ

ದೇವಾಲಯಗಳಿಗೆ ಹರಿದು ಬಂದ ಭಕ್ತ ಸಾಗರ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2021, 16:19 IST
Last Updated 11 ಮಾರ್ಚ್ 2021, 16:19 IST
ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ಕೋಲಾರದ ಸೋಮೇಶ್ವರ ದೇವಸ್ಥಾನದಲ್ಲಿ ಭಕ್ತರು ಗುರುವಾರ ದೇವರ ದರ್ಶನಕ್ಕೆ ಸಾಲುಗಟ್ಟಿ ನಿಂತಿದ್ದರು.
ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ಕೋಲಾರದ ಸೋಮೇಶ್ವರ ದೇವಸ್ಥಾನದಲ್ಲಿ ಭಕ್ತರು ಗುರುವಾರ ದೇವರ ದರ್ಶನಕ್ಕೆ ಸಾಲುಗಟ್ಟಿ ನಿಂತಿದ್ದರು.   

ಕೋಲಾರ: ಜಿಲ್ಲೆಯಾದ್ಯಂತ ಗುರುವಾರ ಮಹಾ ಶಿವರಾತ್ರಿ ಹಬ್ಬದ ಸಂಭ್ರಮ ಕಳೆಗಟ್ಟಿತು. ನಗರ ಸೇರಿದಂತೆ ಎಲ್ಲೆಡೆ ಶ್ರದ್ಧಾ ಭಕ್ತಿಯಿಂದ ಹಬ್ಬ ಆಚರಿಸಲಾಯಿತು.

ಮಹಿಳೆಯರು ಮನೆ ಮುಂದೆ ನಸುಕಿನಲ್ಲೇ ಬಣ್ಣ ಬಣ್ಣದ ರಂಗೋಲಿ ಬಿಡಿಸಿ ಅಂಗಳವನ್ನು ಚಿತ್ತಾರಗೊಳಿಸಿದ್ದರು. ಮನೆಯ ಬಾಗಿಲಿಗೆ ತಳಿರು ತೋರಣ ಕಟ್ಟಿ ಹೂವುಗಳಿಂದ ಸಿಂಗರಿಸಲಾಗಿತ್ತು.

ಶಿವಾಲಯಗಳಲ್ಲಿ ಇಡೀ ದಿನ ಶಿವನಾಮ ಸ್ಮರಣೆ, ಅಖಂಡ ಭಜನೆ ನಡೆಯಿತು. ಅಲ್ಲದೇ, ವಿಶೇಷ ಪೂಜೆ, ರುದ್ರಾಭಿಷೇಕ, ಸಹಸ್ರ ನಾಮಾರ್ಚನೆ, ಬಿಲ್ವಾರ್ಚನೆ ನಡೆದವು. ದೇವಾಲಯಗಳನ್ನು ತೋರಣದಿಂದ ಸಿಂಗರಿಸಿ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು. ದೇವರ ಮೂರ್ತಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.

ADVERTISEMENT

ಕೋಟೆ ಬಡಾವಣೆಯಲ್ಲಿನ ಇತಿಹಾಸ ಪ್ರಸಿದ್ಧ ಸೋಮೇಶ್ವರ ದೇವಾಲಯಕ್ಕೆ ಭಕ್ತ ಸಾಗರವೇ ಹರಿದು ಬಂದಿತು. ದೇವಾಲಯ ಆವರಣದ ನಂದಿ ವಿಗ್ರಹದ ಮುಂಭಾಗದಲ್ಲಿ ಭಕ್ತರು ದೀಪ ಬೆಳಗಿ ಹಣ್ಣು ಕಾಯಿ ಇಟ್ಟು ಭಕ್ತಿಯಿಂದ ಪೂಜೆ ಸಲ್ಲಿಸಿದರು. ಬಳಿಕ ಶಿವಲಿಂಗ ದರ್ಶನದೊಂದಿಗೆ ತೀರ್ಥ ಪ್ರಸಾದ ಸ್ವೀಕರಿಸಿ ಪುನೀತರಾದರು.

ಕಾಳಮ್ಮಗುಡಿ ಬೀದಿಯಲ್ಲಿನ ಕಾಳಿಕಾಂಭ ಕಮಟೇಶ್ವರ ದೇವಾಲಯ, ಗೌರಿಪೇಟೆಯ ಬಯಲು ಬಸವೇಶ್ವರ ದೇವಾಲಯ, ಅರಳೆಪೇಟೆಯ ಬಸವೇಶ್ವರ ದೇವಾಲಯ, ಚಂದ್ರಮೌಳೇಶ್ವರ ದೇವಾಲಯದಲ್ಲೂ ವಿಶೇಷ ಪೂಜೆ, ಬಿಲ್ವಾರ್ಚನೆ ನೆರವೇರಿತು. ಮನೆಗಳಲ್ಲಿ ಹಿರಿಯರು ಉಪವಾಸ ವ್ರತ ಆಚರಿಸಿ ದೇವರಿಗೆ ರಾಗಿ, ಜೋಳ ಹಾಗೂ ಸಾಮೆ ಪುರಿಯಿಂದ ಸಿದ್ಧಪಡಿಸಿದ ಉಂಡೆಗಳನ್ನು ನೈವೇದ್ಯ ಇಟ್ಟು ಪೂಜೆ ಸಲ್ಲಿಸಿದರು.

ನಗರದ ಹೊರವಲಯದ ಶತಶೃಂಗ ಪರ್ವತ ಶ್ರೇಣಿಯ ಅಂತರಗಂಗೆ ಬೆಟ್ಟದ ಕಾಶಿ ವಿಶ್ವೇಶ್ವರಸ್ವಾಮಿ ದೇವಾಲಯದಲ್ಲಿ ಭಕ್ತರು ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಬಸವ ಮೂರ್ತಿಯ ಬಾಯಿಂದ ಬರುವ ಪವಿತ್ರ ಗಂಗೆಗೆ ಭಕ್ತರು ಮುಗಿಬಿದ್ದರು. ದೇವಸ್ಥಾನಗಳ ಬಳಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ಮಾರ್ಗಸೂಚಿ ಪಾಲನೆ: ಕೊರೊನಾ ಸೋಂಕಿನ ಆತಂಕದ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿ ಕೋವಿಡ್‌ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಲಾಯಿತು. ಬಹುಪಾಲು ಭಕ್ತರು ಮಾಸ್ಕ್‌ ಧರಿಸಿ ದೇವಸ್ಥಾನಕ್ಕೆ ಬಂದಿದ್ದರು. ದೇವಸ್ಥಾನಗಳ ಪ್ರವೇಶ ದ್ವಾರದಲ್ಲಿ ಭಕ್ತರಿಗೆ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಲು ಸ್ಯಾನಿಟೈಸರ್‌ನ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ಅಂತರ ಕಾಯ್ದುಕೊಂಡು ದೇವರ ದರ್ಶನ ಪಡೆದರು. ಹಲವು ದೇವಸ್ಥಾನಗಳಲ್ಲಿ ಭಕ್ತರಿಗೆ ಪ್ರಸಾದ ಮತ್ತು ತಂಪು ಪಾನೀಯ ವಿತರಿಸಲಾಯಿತು.

ಶಿವರಾತ್ರಿಯ ಮಾರನೇ ದಿನವಾದ ಪಾರಣೆಯಂದು ಸೂರ್ಯ ಕಿರಣಗಳು ಅಂತರಗಂಗೆ ಬೆಟ್ಟದಲ್ಲಿನ ಕಾಶಿ ವಿಶ್ವೇಶ್ವರಸ್ವಾಮಿ ದೇವರ ಮೂರ್ತಿಯನ್ನು ಸ್ಪರ್ಶಿಸಲಿದ್ದು, ಈ ಚಮತ್ಕಾರದ ವೀಕ್ಷಣೆಗೆ ದೇವಾಲಯದಲ್ಲಿ ಸಿದ್ಧತೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.