ADVERTISEMENT

ಕೋಲಾರ: ಸಮ ಸಮಾಜದ ಸಂಕಲ್ಪ ಮಾಡಿ -ಜಿಲ್ಲಾಧಿಕಾರಿ ಆರ್.ಸೆಲ್ವಮಣಿ

ಕಾಯಕ ಶರಣರ ಜಯಂತಿಯಲ್ಲಿ ಜಿಲ್ಲಾಧಿಕಾರಿ ಸೆಲ್ವಮಣಿ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2021, 14:37 IST
Last Updated 11 ಮಾರ್ಚ್ 2021, 14:37 IST
ಕೋಲಾರದಲ್ಲಿ ಗುರುವಾರ ನಡೆದ ಕಾಯಕ ಶರಣರ ಜಯಂತಿಯಲ್ಲಿ ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಶರಣರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದರು.
ಕೋಲಾರದಲ್ಲಿ ಗುರುವಾರ ನಡೆದ ಕಾಯಕ ಶರಣರ ಜಯಂತಿಯಲ್ಲಿ ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಶರಣರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದರು.   

ಕೋಲಾರ: ‘ವಚನಕಾರರಲ್ಲಿ ಬೇಧ ಭಾವವಿರಲಿಲ್ಲ. ವಚನಕಾರರು ಸಮಾಜದ ಒಳಿತಿಗೆ ಹೋರಾಡಿದರು. ವಚನಕಾರರ ಹಾದಿಯಲ್ಲಿ ಸಮಾಜ ಮುನ್ನಡೆಯಬೇಕು’ ಎಂದು ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾಯಕ ಶರಣರ ಜಯಂತಿಯಲ್ಲಿ ಮಾತನಾಡಿ, ‘ಕಾಯಕದಿಂದ ಗಳಿಸಿದ ಸಂಪತ್ತನ್ನು ದಾಸೋಹದ ಮೂಲಕ ಸಮಾಜಕ್ಕೆ ನೀಡುವ ಪರಿಕಲ್ಪನೆ ಸಾರಿದ ಕಾಯಕ ಶರಣರು ಅತ್ಯಂತ ಮಹತ್ವ ಪಡೆದಿದ್ದಾರೆ’ ಎಂದರು.

‘ಸಂಪತ್ತು ಗಳಿಸುವ ಮಾರ್ಗಗಳು ಎಲ್ಲರಿಗೂ ತಿಳಿದಿದೆ. ಆದರೆ, ಧರ್ಮದ ಮಾರ್ಗದಿಂದ ಕಾಯಕ ಮಾಡಿ ಸಂಪತ್ತು ಗಳಿಸುವುದನ್ನು ಅರಿಯುವುದು ಮುಖ್ಯ. ಕಾಯಕ ಶರಣರು ಧರ್ಮ ಮಾರ್ಗದಲ್ಲಿ ಕೆಲಸ ಮಾಡಿ ಅದರಿಂದ ಬಂದ ಸಂಪತ್ತನ್ನು ಸಮಾಜಕ್ಕೆ ವಾಪಸ್‌ ನೀಡುತ್ತಿದ್ದರು. ಬಡತನ, ಸೋಮಾರಿತನ ನಿರ್ಮೂಲನೆಯಾಗಿ ಕಾಯಕ ಮತ್ತು ದಾಸೋಹದ ಪರಿಕಲ್ಪನೆಯಿಂದ ವ್ಯಕ್ತಿ ಮುಕ್ತಿ ಹೊಂದುತ್ತಾನೆ ಎಂದು ಕಾಯಕ ಶರಣರು ನಂಬಿದ್ದರು’ ಎಂದು ತಿಳಿಸಿದರು.

ADVERTISEMENT

‘ಜ್ಞಾನ ದಾಸೋಹ ಎಲ್ಲಾ ದಾಸೋಹಗಳಿಗಿಂತ ಮುಖ್ಯ. 12ನೇ ಶತಮಾನದಲ್ಲಿದ್ದ ತಾರತಮ್ಯ, ಅಸಮಾನತೆ, ಲಿಂಗ, ಜಾತಿಭೇದದಂತಹ ಸಮಾಜದ ಪಿಡುಗುಗಳ ವಿರುದ್ಧ ಹೋರಾಡಿದ ಮಹಾನ್‌ ಶರಣರು ಈ ಕಾಯಕ ಶರಣರಾಗಿದ್ದಾರೆ. ಇವರು ಸಮಾಜಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ವಚನಕಾರರು ಹೇಳಿರುವಂತೆ ಎಲ್ಲರೂ ಕೂಡಿ ಬಾಳೋಣ. ಎಲ್ಲರಲ್ಲಿ ಸಮಾನತೆ ಕಾಣುವ ಒಳ್ಳೆಯ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

‘ಕಲ್ಯಾಣದ ಕ್ರಾಂತಿಯಲ್ಲಿ ಶರಣರ ಹೋರಾಟವಿದೆ. ಕಲ್ಯಾಣ ಕ್ರಾಂತಿ ಸಮಯದಲ್ಲಿ ಸೈನ್ಯ ಕಟ್ಟಿಕೊಂಡು ಹೋರಾಡಿದ ಕಾಯಕ ಶರಣರಲ್ಲಿ ಸಮಗಾರ ಹರಳಯ್ಯ ಮಹತ್ವದ ಪಾತ್ರ ವಹಿಸುತ್ತಾರೆ. ಎಲ್ಲರಿಗೂ ಒಳ್ಳೆಯದು ಬಯಸಿ ಸಮುದಾಯಕ್ಕೆ ಒಳ್ಳೆಯದನ್ನು ಮಾಡೋಣ. ಸಮ ಸಮಾಜ ನಿರ್ಮಾಣದ ಸಂಕಲ್ಪ ಮಾಡೋಣ’ ಎಂದು ಕಿವಿಮಾತು ಹೇಳಿದರು.

ತತ್ವಾದರ್ಶ ಅನುಕರಣೀಯ: ‘ಜಾತಿ ಪದ್ಧತಿ, ಮೂಢನಂಬಿಕೆಗಳ ವಿರುದ್ಧ ಶರಣರು 12ನೇ ಶತಮಾನದಲ್ಲೇ ಸಮರ ಸಾರಿದ್ದರು. ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ ಶರಣರ ತತ್ವಾದರ್ಶ ಅನುಕರಣೀಯ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಾನಂದ ಕೆಂಪರಾಜು ಅಭಿಪ್ರಾಯಪಟ್ಟರು.

‘ಕಾಯಕ ಶರಣರು, ಬಸವಣ್ಣ, ಅಕ್ಕಮಹಾದೇವಿ ಸೇರಿದಂತೆ ನೂರಾರು ಶರಣರು 12ನೇ ಶತಮಾನದಲ್ಲಿ ಬಂದು ಹೋಗಿದ್ದಾರೆ. ಹೀಗಾಗಿ 12ನೇ ಶತಮಾನವು ಮಹತ್ವದ ಕಾಲಘಟ್ಟ. ಹಿಂದಿನ ಕಾಲದಲ್ಲಿ ಶೋಷಣೆ ನಡೆದಾಗ ಸಣ್ಣ ಪ್ರಮಾಣದಲ್ಲಿ ಹೋರಾಟ ಆರಂಭವಾಯಿತು. ಆಗ ವಚನಕಾರರ ವಚನಗಳು ಜನರಿಗೆ ಪ್ರೇರಣೆಯಾದವು. ವಚನಕಾರರು ವಚನಗಳ ಮೂಲಕ ಸಾಮಾಜಿಕ ಬದಲಾವಣೆಗೆ ಶ್ರಮಿಸಿದರು’ ಎಂದು ವಿವರಿಸಿದರು.

‘ಜನರೆಲ್ಲರೂ ಒಂದೇ ಎಂದು ಭೇದಭಾವವಿಲ್ಲದೆ ನೋಡುವುದೇ ವಚನಗಳ ಸಾರ. ಒಳ್ಳೆಯ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಉತ್ತಮ, ಕೆಟ್ಟ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ನೀಚತನ ಎಂದು ಮಾದರ ಚನ್ನಯ್ಯ ಹೇಳಿದ್ದಾರೆ. ವಚನಗಳು ಸಾರ್ವಕಾಲಿಕ. ಪಠ್ಯದಲ್ಲಿ ಶರಣರ ತತ್ವ ಅಳವಡಿಸಬೇಕು’ ಎಂದು ಸಲಹೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಾಲಾಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ದಲಿತ ಮುಖಂಡರಾದ ಎಸ್.ನಾರಾಯಣಸ್ವಾಮಿ, ಚಂದ್ರಶೇಖರ್, ಮುನಿರಾಜು, ಪಂಡಿತ್ ಮುನಿವೆಂಕಟಪ್ಪ, ಟಿ.ವಿಜಯ್‌ಕುಮಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ನಿಕಟಪೂರ್ವ ಅಧ್ಯಕ್ಷ ಜೆ.ಜಿ.ನಾಗರಾಜ್‌ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.