ADVERTISEMENT

ಮಾಲೂರು ಕ್ಷೇತ್ರದ ಮರು ಮತ ಎಣಿಕೆ: ಚುನಾವಣಾಧಿಕಾರಿಯಾಗಿ ಉಪವಿಭಾಗಾಧಿಕಾರಿ ನೇಮಕ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 4:36 IST
Last Updated 6 ನವೆಂಬರ್ 2025, 4:36 IST
ಡಾ.ಮೈತ್ರಿ
ಡಾ.ಮೈತ್ರಿ   

ಕೋಲಾರ: ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆಯ ಚುನಾವಣಾಧಿಕಾರಿಯನ್ನಾಗಿ (ಆರ್‌ಒ) ಉಪವಿಭಾಗಾಧಿಕಾರಿ ಡಾ.ಎಚ್.ಪಿ.ಎಸ್‌.ಮೈತ್ರಿ ಅವರನ್ನು ನೇಮಿಸಲಾಗಿದೆ. ಹೆಚ್ಚುವರಿ ಸಹಾಯಕ ಚುನಾವಣಾಧಿಕಾರಿಯಾಗಿ ಶ್ರೀನಿವಾಸಪುರ, ಬಂಗಾರಪೇಟೆ, ಮುಳಬಾಗಿಲು, ಕೋಲಾರ ತಹಶೀಲ್ದಾರ್‌ಗಳನ್ನು ನಿಯೋಜಿಸಲಾಗಿದೆ.

ಚುನಾವಣಾ ಆಯೋಗವು ಈ ಕ್ಷೇತ್ರದ ಮತ ಎಣಿಕೆ ವೀಕ್ಷಕರನ್ನಾಗಿ ಉತ್ತರ ಪ್ರದೇಶ ರಾಜ್ಯದ ಐಎಎಸ್‌ ಅಧಿಕಾರಿ ಪ್ರಭು ನಾರಾಯಣಸಿಂಗ್‌ ಅವರನ್ನು ನೇಮಿಸಿದೆ.

ನಗರ ಹೊರವಲಯದ ಟಮಕದಲ್ಲಿರುವ ತೋಟಗಾರಿಕೆ ಮಹಾವಿದ್ಯಾಲಯದ ಒಂದೇ ಕೊಠಡಿಯಲ್ಲಿ ಅಂಚೆ ಮತ ಹಾಗೂ ಇವಿಎ ಮತಗಳ ಎಣಿಕೆ ಕಾರ್ಯ ನ.11ರಂದು ನಡೆಯಲಿದ್ದು, ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ.

ADVERTISEMENT

1,650ಕ್ಕೂ ಅಧಿಕ ಅಂಚೆ ಮತಗಳಿದ್ದು, ಅದೇ ಕೊಠಡಿಯಲ್ಲಿ ನಾಲ್ಕು ಟೇಬಲ್‌ಗಳಲ್ಲಿ ತಲಾ 500ರಂತೆ ವಿಂಗಡಿಸಿ ಎಣಿಕೆ ಮಾಡಲಾಗುತ್ತದೆ. ಪ್ರತಿ ಟೇಬಲ್‌ಗೆ ಒಬ್ಬ ತಹಶೀಲ್ದಾರ್‌ ನಿಯೋಜಿಸಲಾಗುತ್ತದೆ.

ವಿದ್ಯುನ್ಮಾನ ಮತ ಯಂತ್ರದಲ್ಲಿನ (ಇವಿಎಂ) ಮತಗಳನ್ನು 14 ಟೇಬಲ್‌ಗಳಲ್ಲಿ ನಡೆಸಲಾಗುತ್ತದೆ. ಪ್ರತಿ ಟೇಬಲ್‌ಗೆ ಒಬ್ಬ ಕೌಂಟಿಂಗ್‌ ಸೂಪರ್‌ವೈಸರ್‌ ಹಾಗೂ ಸಹಾಯಕ ಸಿಬ್ಬಂದಿ ಇರುತ್ತಾರೆ.

ಮರು ಮತ ಎಣಿಕೆ ಸಿಬ್ಬಂದಿಗೆ ಮೊದಲನೇ ಸುತ್ತಿನ ತರಬೇತಿ ನೀಡಲಾಗಿದೆ. ಚುನಾವಣಾಧಿಕಾರಿಯು (ಆರ್‌ಒ) ಮತ್ತೊಂದು ಸುತ್ತಿನ ತರಬೇತಿ ನೀಡಲಿದ್ದಾರೆ.

2023ರಲ್ಲಿ ನಡೆದ ಮಾಲೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೆ.ವೈ.ನಂಜೇಗೌಡ 248 ಮತಗಳಿಂದ ಬಿಜೆಪಿ ಮುಖಂಡ ಕೆ.ಎಸ್‌.ಮಂಜುನಾಥ್‌ ಗೌಡ ಅವರನ್ನು ಸೋಲಿಸಿದ್ದರು.

ಮತ ಎಣಿಕೆಯಲ್ಲಿ ಲೋಪವಾಗಿದೆ ಎಂದು ಮಂಜುನಾಥ್‌ ಗೌಡ ಹೈಕೋರ್ಟ್‍ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ನಂಜೇಗೌಡ ಅವರ ಆಯ್ಕೆ ಅಸಿಂಧುಗೊಳಿಸಿದ್ದ ಹೈಕೋರ್ಟ್‌, ಮರು ಮತ ಎಣಿಕೆಗೆ ಸೂಚನೆ ನೀಡಿತ್ತು. ಈ ಆದೇಶವನ್ನು ನಂಜೇಗೌಡರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ನಂಜೇಗೌಡರ ಅಸಿಂಧು ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತ್ತಾದರೂ ಹೈಕೋರ್ಟ್‌ ಆದೇಶದಂತೆ ಮರು ಮತ ಎಣಿಕೆ ನಡೆಸಿ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಸೂಚಿಸಿತ್ತು.

2023ರಲ್ಲಿ ಚುನಾವಣೆ ನಡೆದಾಗ ಮಾಲೂರು ಕ್ಷೇತ್ರದಲ್ಲಿ ತೋಟಗಾರಿಕೆ ಇಲಾಖೆಯ ಕುಮಾರಸ್ವಾಮಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.