ADVERTISEMENT

ಮಾಲೂರು ವಿಧಾನಸಭಾ ಕ್ಷೇತ್ರ: ಇಂದು ಮರು ಮತ ಎಣಿಕೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 0:30 IST
Last Updated 11 ನವೆಂಬರ್ 2025, 0:30 IST
<div class="paragraphs"><p>ಮತ ಎಣಿಕೆ</p></div>

ಮತ ಎಣಿಕೆ

   

– ಪ್ರಜಾವಾಣಿ ಚಿತ್ರ

ಕೋಲಾರ: ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಮಾಲೂರು ವಿಧಾನಸಭಾ ಕ್ಷೇತ್ರದ ಮತಗಳ ಮರುಎಣಿಕೆ ಮಂಗಳವಾರ (ನ.11) ನಡೆಯಲಿದೆ.

ADVERTISEMENT

ನಗರ ಹೊರವಲಯದ ತೋಟಗಾರಿಕೆ ಮಹಾವಿದ್ಯಾಲಯದ ಒಂದೇ ಕೊಠಡಿಯಲ್ಲಿ ಅಂಚೆ ಮತ ಹಾಗೂ ಎಲೆಕ್ಟ್ರಾನಿಕ್‌ ಮತಯಂತ್ರ (ಇವಿಎಂ) ಮತಗಳ ಎಣಿಕೆ ಬೆಳಗ್ಗೆ 8ಕ್ಕೆ ಆರಂಭವಾಗಲಿದೆ.

ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಲ್ಲ ಅಭ್ಯರ್ಥಿಗಳ ಸಮ್ಮುಖದಲ್ಲಿ ಸೋಮವಾರ ಭದ್ರತಾ ಕೊಠಡಿ (ಸ್ಟ್ರಾಂಗ್‌ ರೂಂ) ಬಾಗಿಲು ತೆರೆದು ಬಿಗಿ ಭದ್ರತೆಯಲ್ಲಿ ಎವಿಎಂ, ಇತರ ಸಾಮಗ್ರಿಗಳನ್ನು ಎಣಿಕೆ ಕೇಂದ್ರಕ್ಕೆ ಸಾಗಿಸಲಾಯಿತು.

ಉಪವಿಭಾಗಾಧಿಕಾರಿ ಡಾ.ಎಚ್.ಪಿ.ಎಸ್‌.ಮೈತ್ರಿ ಚುನಾವಣಾಧಿಕಾರಿ ಆಗಿದ್ದಾರೆ. ಉತ್ತರ ಪ್ರದೇಶದ ಐಎಎಸ್‌ ಅಧಿಕಾರಿ ಪ್ರಭು ನಾರಾಯಣಸಿಂಗ್‌ ಚುನಾವಣಾ ಆಯೋಗವು ವೀಕ್ಷಕರನ್ನಾಗಿ ಅವರನ್ನು ನೇಮಿಸಿದೆ.

ಶಾಸಕ, ಕಾಂಗ್ರೆಸ್‌ನ ಕೆ.ವೈ.ನಂಜೇಗೌಡರ ಸ್ಥಾನ ಅಬಾಧಿತವೊ, ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಕೆ.ಎಸ್‌. ಮಂಜುನಾಥಗೌಡರಿಗೆ ಅದೃಷ್ಟ ಒಲಿಯಲಿದೆಯೇ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಮೂಡಿದೆ.

2023ರ ಚುನಾವಣೆಯಲ್ಲಿ ನಂಜೇಗೌಡ 248 ಮತಗಳಿಂದ ಗೆದ್ದಿದ್ದರು. ಮತ ಎಣಿಕೆಯಲ್ಲಿ ಲೋಪವಾಗಿದೆ ಎಂದು ಮಂಜುನಾಥಗೌಡ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ನಂಜೇಗೌಡರ ಆಯ್ಕೆ ಅಸಿಂಧುಗೊಳಿಸಿದ್ದ ಹೈಕೋರ್ಟ್‌ ಮರುಎಣಿಕೆಗೆ ಸೂಚಿಸಿತ್ತು. ಇದನ್ನು ನಂಜೇಗೌಡ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಮುಚ್ಚಿದ ಲಕೋಟೆಯಲ್ಲಿ ಫಲಿತಾಂಶ ರವಾನೆ

ಮರು ಮತ ಎಣಿಕೆ‌ಯ ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್‌ಗೆ ರವಾನಿಸಲಾಗುತ್ತದೆ. ಸಾರ್ವಜನಿಕವಾಗಿ ಫಲಿತಾಂಶ ಪ್ರಕಟಿಸದಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಈಗಾಗಲೇ ನಿರ್ದೇಶನ ನೀಡಿದೆ. ಹೀಗಾಗಿ ಚುನಾವಣಾಧಿಕಾರಿಯು ಫಲಿತಾಂಶ ಪ್ರಕಟಿಸುವುದಿಲ್ಲ. ಆದರೆ ಮತ ಎಣಿಕೆ ವೇಳೆ ಅಭ್ಯರ್ಥಿಗಳ ಏಜೆಂಟರು ಇರಲಿದ್ದು ಅವರಿಗೆ ಫಲಿತಾಂಶ ಏನೆಂದು ಗೊತ್ತಾಗಲಿದೆ. ಗೆದ್ದವರು ಸಂಭ್ರಮಿಸಲು ಸಿದ್ಧತೆ ಕೂಡ ಮಾಡಿಕೊಂಡಿದ್ದಾರೆ. ಎಣಿಕೆ ಕೇಂದ್ರಕ್ಕೆ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ಪಾರದರ್ಶಕವಾಗಿ ಎಣಿಕೆಗೆ ಬಿಜೆಪಿ ಆಗ್ರಹ

ಭದ್ರತಾ ಕೊಠಡಿಯಲ್ಲಿರುವ ಚುನಾವಣಾ ಸಾಮಗ್ರಿ ದಾಖಲೆಗಳಿಗೆ ಸಂಬಂಧಿಸಿದಂತೆ ಹಲವಾರು ನ್ಯೂನತೆ ಕಂಡುಬಂದಿವೆ. ಅಂಚೆ ಮತಗಳು ಇರುವ ಪೆಟ್ಟಿಗೆಯ ಸೀಲ್ ತೆರೆದುಕೊಂಡಿದೆ. ಕೆಲ ಇವಿಎಂ ವಿವಿ ಪ್ಯಾಟ್‌ಗಳನ್ನು ಕೂಡ ಕ್ರಮವಾಗಿ ಇಟ್ಟಿಲ್ಲ. ಎಲ್ಲಾ ಮತಗಟ್ಟೆಗಳ ವಿವಿ ಪ್ಯಾಟ್‌ ಚೀಟಿಗಳನ್ನು ತಾಳೆ ಮಾಡಿ ನೋಡಬೇಕು.‌ ಸಂಪೂರ್ಣ ವಿಡಿಯೊ ಚಿತ್ರೀಕರಣ ಮಾಡಬೇಕು ಎಂದು ಪರಾಜಿತ ಅಭ್ಯರ್ಥಿ ಕೆ.ಎಸ್‌.ಮಂಜುನಾಥಗೌಡ ಆಗ್ರಹಿಸಿದ್ದಾರೆ.

ಸುಪ್ರೀಂ ಕೋರ್ಟ್‌ ನಿರ್ದೇಶನ ಹಾಗೂ ಚುನಾವಣಾ ಆಯೋಗದ ಸೂಚನೆಗಳಂತೆ ಪಾರದರ್ಶಕವಾಗಿ ಮರು ಮತ ಎಣಿಕೆ ನಡೆಸಬೇಕು ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಸದಸ್ಯ ಕೇಶವ ಪ್ರಸಾದ್ ನೇತೃತ್ವದ ಬಿಜೆಪಿ ನಿಯೋಗ ಜಿಲ್ಲಾಧಿಕಾರಿ ಎಂ.ಆರ್‌.ರವಿ ಅವರಿಗೆ ಸೋಮವಾರ ಮನವಿ ಸಲ್ಲಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.