ADVERTISEMENT

ಎದುರಾಳಿಗೆ 3ನೇ ಸಲ ಸೋಲು ಖಚಿತ

ಮರು ಮತ ಎಣಿಕೆಯಲ್ಲಿ ನೂರಕ್ಕೆ ನೂರರಷ್ಟು ಜಯ ನಮ್ಮದೇ: ಶಾಸಕ ನಂಜೇಗೌಡ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 3:02 IST
Last Updated 31 ಅಕ್ಟೋಬರ್ 2025, 3:02 IST
ಮಾಲೂರು ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಕೆ.ವೈ.ನಂಜೇಗೌಡ ಮಾತನಾಡಿದರು
ಮಾಲೂರು ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಕೆ.ವೈ.ನಂಜೇಗೌಡ ಮಾತನಾಡಿದರು   

ಮಾಲೂರು: ‘ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆಯಲ್ಲಿ ನೂರಕ್ಕೆ ನೂರರಷ್ಟು ಜಯ ಗಳಿಸುವುದು ನಾವೇ. ಮಾಜಿ ಶಾಸಕನಿಗೆ ಮೂರನೇ ಬಾರಿ ಸೋಲುಣಿಸುವುದು ಖಚಿತ. 2028ಕ್ಕೆ ಅವರಿಗೆ 4ನೇ ಸೋಲಾಗಲಿದೆ’ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

ನಗರದ ವೈಟ್ ಗಾರ್ಡ್‌ನಲ್ಲಿರುವ ಶ್ರೀರಂಗಂ ಕಲ್ಯಾಣ ಮಂಟಪದಲ್ಲಿ ಮಾಲೂರು ಮತ್ತು ಮಾಸ್ತಿ ಬ್ಲಾಕ್ ಕಾಂಗ್ರೆಸ್‌ನಿಂದ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಮಾಜಿ ಶಾಸಕ ಕೆ.ಎಸ್‌.ಮಂಜುನಾಥಗೌಡ ವಿರುದ್ಧ ವಾಗ್ದಾಳಿ ನಡೆಸಿದರು.

ತಾಲ್ಲೂಕಿನಲ್ಲಿ ಮಾಜಿ ಶಾಸಕ ಎ.ನಾಗರಾಜು ನಂತರ ಕಾಂಗ್ರೆಸ್ ಪಕ್ಷ ಸುಮಾರು 15 ವರ್ಷ ಅಧಿಕಾರದಿಂದ ದೂರ ಉಳಿದಿತ್ತು. ಆಗ ಕಾಂಗ್ರೆಸ್ ಪಕ್ಷ ಕಟ್ಟಲು ನಮಗೆ ಕಷ್ಟಕರವಾಗಿತ್ತು. ಆ ಸಂದರ್ಭದಲ್ಲಿ ಎಲ್ಲವನ್ನು ಮೆಟ್ಟಿ ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವ ಸಮಯದಲ್ಲಿ ಆಗಿನ ಶಾಸಕರು ನಮ್ಮ ಮೇಲೆ ಇಲ್ಲಸಲ್ಲದ ಪ್ರಕರಣ ದಾಖಲಿಸಿ ಭಯಪಡಿಸಲು ಮುಂದಾದರು. ಅದಕ್ಕೆ ಜಗ್ಗದೆ ಮುನ್ನುಗ್ಗಿದ ನಮಗೆ ತಾಲ್ಲೂಕಿನ ಜನತೆಯ ಆಶೀರ್ವಾದದಿಂದ 15 ವರ್ಷದ ನಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಜಯ ಗಳಿಸಿತು ಎಂದರು.

ADVERTISEMENT

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೇವಲ 14 ತಿಂಗಳ ಕಾಲ ಸರ್ಕಾರದ ಸಹಕಾರ ಇತ್ತು. ನಂತರ ಬಿಜೆಪಿ ಸರ್ಕಾರ ಬಂದಮೇಲೆ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಿಲ್ಲ. ಅಂತಹ ಸಂದರ್ಭದಲ್ಲೂ ತಾಲ್ಲೂಕಿನ ಜನತೆ ನನ್ನ ಮೇಲೆ ಇಟ್ಟ ವಿಶ್ವಾಸವನ್ನು ಮಾರಾಟಕ್ಕಿಡದೆ ನಿತ್ಯ ಕ್ಷೇತ್ರದ ಜನತೆಯ ಸಂಪರ್ಕದಲ್ಲಿದ್ದೆ, ಅವರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾ ನಂಬಿಕೆ ಉಳಿಸಿಕೊಂಡ ಪರಿಣಾಮ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡನೇ ಬಾರಿ ಅಲ್ಪ ಮತಗಳ ಅಂತರ ಗೆದ್ದೆ. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು, ಸರ್ಕಾರದ ಸಂಪೂರ್ಣ ಸಹಕಾರ ಪಡೆದು ತಾಲ್ಲೂಕಿನಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ತಾಲ್ಲೂಕನ್ನು ಮಾದರಿಯನ್ನಾಗಿ ರೂಪಿಸುವ ಗುರಿ ಹೊಂದಿದ್ದೇನೆ ಎಂದು ಹೇಳಿದರು.

ಆದರೂ ವಿರೋಧ ಪಕ್ಷದವರು ಎರಡೂವರೆ ವರ್ಷಗಳಿಂದ ಚುನಾವಣೆಯ ಫಲಿತಾಂಶ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದರ ಜೊತೆಗೆ ವೈಯಕ್ತಿಕವಾಗಿ ಟೀಕೆ ಮಾಡುತ್ತಾ ಒಂದಲ್ಲ ಒಂದು ರೀತಿ ತೊಂದರೆ ಕೊಟ್ಟು ಮಾನಸಿಕವಾಗಿ ಕುಗ್ಗಿಸಲು ಪ್ರಯತ್ನ ಪಡುತ್ತಿದ್ದಾರೆ. ಆದರೆ, ತಾಲ್ಲೂಕಿನ ಜನತೆ ನಮ್ಮ ಪರವಾಗಿದ್ದಾರೆ ಎಂದರು.

ಕಾರ್ಯಕರ್ತರಿಗೆ ಅಧಿಕಾರ ನೀಡುತ್ತಾ, ಎಲ್ಲರನ್ನೂ ಒಗ್ಗೂಡಿಸಿಕೊಂಡು ಸಾಮಾಜಿಕ ನ್ಯಾಯ ಒದಗಿಸುತ್ತ ಬಂದಿದ್ದೇನೆ. ಮಾಲೂರು ಪುರಸಭೆಯಲ್ಲಿ 20 ವರ್ಷಗಳ ನಂತರ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಮೇಲೆ ಸುಮಾರು ಆರು ಮಂದಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಅವಕಾಶವಿದ್ದ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯಕರ್ತರಿಗೆ ಅಧಿಕಾರ ನೀಡಲಾಗಿದೆ. ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಿದರು.

ನ್ಯಾಯಾಲಯದ ಆದೇಶದಂತೆ ಮುಂದಿನ ತಿಂಗಳು ಮರು ಎಣಿಕೆ ನಡೆಯಲಿದೆ. ಈ ಗೆಲುವನ್ನು ಪ್ರತಿ ಹಳ್ಳಿಯಲ್ಲೂ ಸಂಭ್ರಮಿಸಲು ಎಲ್ಲರೂ ಕಾಯುತ್ತಿದ್ದಾ‌ರೆ. ಫಲಿತಾಂಶದ ನಂತರ ಅವರ ಜೊತೆಯಲ್ಲಿ ಎಷ್ಟು ಜನ ಇರಲಿದ್ದಾರೆ ನಾವು ನೋಡುತ್ತೇವೆ ಎಂದು ಸವಲು ಹಾಕಿದರು.

ಅ.31ರಂದು ನಿಗದಿಪಡಿಸಿದ್ದ ಮುಖ್ಯಮಂತ್ರಿ ಮಾಲೂರು ಭೇಟಿ ಕಾರ್ಯಕ್ರಮ ಮುಂದೆ ಹೋಗಿದೆ. ನಿವೇಶನ ವಿತರಣೆ ಸಂಬಂಧ ಕೆಲವೊಂದು ಸಿದ್ಧತೆ ಮಾಡಿಕೊಳ್ಳದೆ ಮುಂದೂಡಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ ಮಾತನಾಡಿ, ‘15 ದಿನಗಳೊಳಗೆ ಮರು ಮತ ಎಣಿಕೆ ನಡೆಯುವ ಸಾಧ್ಯತೆ ಇದೆ. ಈಗಿರುವುದಕ್ಕಿಂತ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲುವ ವಿಶ್ವಾಸವಿದೆ. ವಿರೋಧ ಪಕ್ಷದವರಿಗೆ ಆತಂಕವಿದೆ’ ಎಂದರು.

ಮಾಜಿ ಶಾಸಕ ನಾಗರಾಜ, ನಗರಸಭೆ ಅಧ್ಯಕ್ಷೆ ವಿಜಯಲಕ್ಷ್ಮಿ, ಉಪಾಧ್ಯಕ್ಷೆ ವಿಜಯಲಕ್ಷ್ಮಿ ಕೃಷ್ಣಪ್ಪ, ಕೆಪಿಸಿಸಿ ಸದಸ್ಯರಾದ ಅಂಜನಿ ಸೋಮಣ್ಣ, ಪ್ರದೀಪ್ ರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಲಿಂಗಾಪುರ ಕಿಟ್ಟಿ, ಶೆಟ್ಟಿಹಳ್ಳಿ ರಾಮಮೂರ್ತಿ, ವಿಜಯನರಸಿಂಹ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಹಿಮ್ ಉಲ್ಲಾ, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಿಲ್ ನಂಜೇಗೌಡ, ತೊರಲಕ್ಕಿ ಅಶೋಕ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಪ್ಪ, ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಅಂಜನಪ್ಪ, ಜಿಲ್ಲಾ ಉಪಾಧ್ಯಕ್ಷ ಅಶ್ವತ್ ರೆಡ್ಡಿ, ಕ್ಷೇತ್ರನಹಳ್ಳಿ ವೆಂಕಟೇಶಗೌಡ, ರಮೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ವಿನೋದ್, ದಿನಹಳ್ಳಿ ರಮೇಶ್, ಸಂತೆಹಳ್ಳಿ ನಾರಾಯಣಸ್ವಾಮಿ, ಮೈಲಾಂಡಹಳ್ಳಿ ನಾರಾಯಣಸ್ವಾಮಿ, ಎಕೆ ವೆಂಕಟೇಶ್, ತನ್ವೀರ್, ನಾಗಪುರ ನವೀನ್, ಶಬ್ಬೀರ್ ಇದ್ದರು.

ಮಾಲೂರು ಕ್ಷೇತ್ರದ ಪ್ರತಿ ಹಳ್ಳಿಯಲ್ಲೂ ಮರು ಮತ ಎಣಿಕೆಯ ಫಲಿತಾಂಶವನ್ನು ಸಂಭ್ರಮಿಸಲು ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಮುಖಂಡರು ಕಾಯುತ್ತಿದ್ದಾರೆ
ಕೆ.ವೈ.ನಂಜೇಗೌಡ ಶಾಸಕ

ಜಿಲ್ಲೆಗೆ ಮಂತ್ರಿ ಸ್ಥಾನ ಬೇಕು

ಕಾಂಗ್ರೆಸ್‌ ಸರ್ಕಾರದಲ್ಲಿ ಕೋಲಾರ ಜಿಲ್ಲೆಗೆ ಮಂತ್ರಿ ಸ್ಥಾನವನ್ನು ನೀಡಿಲ್ಲ. ಹೀಗಾಗಿ ಸಚಿವ ಸಂಪುಟ ವಿಸ್ತರಣೆ ಮಾಡಿದರೆ ಜಿಲ್ಲೆಗೆ ಮಂತ್ರಿ ಸ್ಥಾನ ನೀಡಬೇಕು ಹೊಸಬರಿಗೆ ಅವಕಾಶ ಮಾಡಿ ಕೊಡಬೇಕು ಎಂದು ನಂಜೇಗೌಡ ಒತ್ತಾಯಿಸಿದರು. ಕಾಂಗ್ರೆಸ್‌ ಶಾಸಕರು ನಾಲ್ವರಿದ್ದು ನಾನು ಕೂಡ ಸಚಿವ ಸ್ಥಾನ ಆಕಾಂಕ್ಷಿ. ಹೈಕಮಾಂಡ್‌ ತೀರ್ಮಾನ ಕೈಗೊಳ್ಳಲಿದ್ದು ಸದ್ಯದಲ್ಲೇ ಸಂಪುಟ ವಿಸ್ತರಣೆ ಆಗಲಿದೆ ಎಂದರು. ಮುಖ್ಯಮಂತ್ರಿ ಬದಲಾವಣೆ ವಿಚಾರ ನಮ್ಮ ಮುಂದೆ ಇಲ್ಲ. ಈ ವಿಚಾರವನ್ನು ಹೈಕಮಾಂಡ್‌ ನೋಡಿಕೊಳ್ಳುತ್ತಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.