ADVERTISEMENT

ಮಾಲೂರು | ಕೆರೆಗೆ ರಾಸಾಯನಿಕ ತ್ಯಾಜ್ಯ: ಆತಂಕ

ವಿ.ರಾಜಗೋಪಾಲ್
Published 23 ಫೆಬ್ರುವರಿ 2025, 6:53 IST
Last Updated 23 ಫೆಬ್ರುವರಿ 2025, 6:53 IST
ಮಾಲೂರಿನ ಉಪವಾಸಪುರ ಗ್ರಾಮದ ನೋಟ
ಮಾಲೂರಿನ ಉಪವಾಸಪುರ ಗ್ರಾಮದ ನೋಟ   

ಮಾಲೂರು: ತಾಲ್ಲೂಕಿನ ಉಪವಾಸಪುರ ಗ್ರಾಮದ ಕೆರೆಗೆ ಕಾರ್ಖಾನೆಗಳಿಂದ ಹರಿಯುವ ವಿಷಪೂರಿತ ರಾಸಾಯನಿಕ ತ್ಯಾಜ್ಯವನದನು ಹರಿಸಲಾಗುದೆ. ಇದರಿಂದ ಗ್ರಾಮದ ವಾತಾವರಣ ಹಾಗೂ ಗ್ರಾಮಸ್ಥರ ಆರೋಗ್ಯಕ್ಕೆ ಕುತ್ತು ಎದುರಾಗಿದೆ ಎಂದು ಗ್ರಾಮಸ್ಥರು ಆತಂಕ ಹೊರಹಾಕಿದ್ದಾರೆ.

ತಾಲ್ಲೂಕಿನ ಕೂರಂಡಹಳ್ಳಿ ಕೈಗಾರಿಕಾ ಪ್ರಾಂಗಣಕ್ಕೆ ಹೊಂದಿಕೊಂಡಂತೆ ಇರುವ ಉಪವಾಸಪುರ ಗ್ರಾಮಸ್ಥರಿಗೆ ಕಾರ್ಖಾನೆಗಳಿಂದ ಅನುಕೂಲಕ್ಕಿಂತ ಅನಾನುಕೂಲವೆ ಹೆಚ್ಚಾಗಿದೆ. ಉಪವಾಸಪುರ ಗ್ರಾಮ ಕೈಗಾರಿಕಾ ಪ್ರದೇಶಕ್ಕಿಂತ ತಗ್ಗು ಪ್ರದೇಶದಲ್ಲಿರುವುದರಿಂದ ಕೆಲವು ಕಾರ್ಖಾನೆಗಳಿಂದ ಹೊರ ಬರುವ ವಿಷಯುಕ್ತ ರಾಸಾಯನಿಕ ತ್ಯಾಜ್ಯ ಚರಂಡಿಗಳ ಮೂಲಕ ಕೆರೆಗೆ ಹರಿಯುತ್ತಿದೆ. ಇದರಿಂದ ನೀರು ಮಲಿನವಾಗಿ ನಿರುಪಯುಕ್ತವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಕಾರ್ಖಾನೆಗಳಿಂದ ಹರಿಯುವ ವಿಷಪೂರಿತ ರಾಸಾಯನಿಕ ತ್ಯಾಜ್ಯ ಕೆರೆಯ ನೀರಿನಲ್ಲಿ ಮಿಶ್ರಣವಾಗುತ್ತಿರುವ ಬಗ್ಗೆ ವಿರೋಧ ವ್ಯಕ್ತಪಡಿಸಿದ ಪಾಂಚಾಯಿತಿ ಹಾಗೂ ಗ್ರಾಮಸ್ಥರ ಒತ್ತಡಕ್ಕೆ ಮಣಿದು ಕೆಲವು ಕಾರ್ಖಾನೆಗಳ ಮಾಲೀಕರು ಉಪವಾಸಪುರ ಗ್ರಾಮಸ್ಥರಿಗೆ ಕುಡಿಯುವ ನೀರು ಸರಬರಾಜಿಗಾಗಿ ಗ್ರಾಮದ ಹೊರಭಾಗದಲ್ಲಿ ಕೊಳವೆ ಬಾವಿ ಕೊರೆಯಿಸಿದ್ದಾರೆ. ಆದರೆ, ಕಾರ್ಖಾನೆಗಳಿಂದ ಹರಿಯುವ ರಾಸಾಯನಿಕ ತ್ಯಾಜ್ಯ ಕೆರೆಯ ನೀರಿನಲ್ಲಿ ಮಿಶ್ರಣವಾಗಿರುವುದರಿಂದ ಕೊಳವೆ ಬಾವಿಯಲ್ಲಿನ ನೀರು ಸಹ ಕಲುಷಿತಗೊಂಡಿರುವ ಬೀತಿ ಗ್ರಾಮದ ನಿವಾಸಿಗಳಲ್ಲಿ ಆವರಿಸಿದ್ದು, ಆತಂಕ ಹೆಚ್ಚಾಗಿದೆ.

ADVERTISEMENT

ಸುಮಾರು 80 ಕುಟುಂಬಗಳಿರುವ ತಾಲ್ಲೂಕಿನ ನೊಸಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಪವಾಸಪುರ ಗ್ರಾಮದಲ್ಲಿ 272 ಮತದಾರರು ಇದ್ದಾರೆ. ಆದರೆ, ಈ ಗ್ರಾಮದಲ್ಲಿ ಚರಂಡಿ ವ್ಯವಸ್ಥೆಯೂ ಸರಿಯಿಲ್ಲ. ಇರುವ ಚರಂಡಿಗಳು ಹದಗೆಟ್ಟಿವೆ. ಮನೆಮಂದೆಯೇ ಹರಿಯುವ ಚರಂಡಿಗಳಿಂದ ರೋಗ ರುಜಿನಗಳ ಆತಂಕವೂ ಹೆಚ್ಚಿದೆ. ಹಾಗೆಯೇ ಕಸ ವಿಲೇವಾರಿ ಕೂಡ ಸೂಕ್ತ ರೀತಿಯಲ್ಲಿ ನಡೆಯುತ್ತಿಲ್ಲ. ಎಲ್ಲಂದೆರಲ್ಲಿ ಕಸದ ರಾಶಿ ಕಣ್ಣಿಗೆ ರಾಚುತ್ತದೆ. ಇಲ್ಲಿನ ಜನ ದುರ್ನಾತದೊಂದಿಗೆ ಬದುಕು ಸಾಗಿಸುತ್ತಿದ್ದಾರೆ. 

ಗ್ರಾಮದ ಮದ್ಯದಲ್ಲಿರುವ ಇರುವ ತಗ್ಗು ಪ್ರದೇಶದಲ್ಲಿ ಮಳೆ ನೀರು ಶೇಖರಣೆಯಾಗುವುದರಿಂದ ಮಳೆ ಬಂದರೆ ಸಾಕು ನೀರು ಮನೆಗಳಿಗೇ ನುಗ್ಗುವ ಭೀತಿ ಇದೆ. ಮಳೆಗಾಲದಲ್ಲಿ ಕೆಲವು ಮನೆಗಳಿಗೆ ಚರಂಡಿ ನೀರು ಆವರಿಸುವುದರಿಂದ ರಸ್ತೆ ಸಂಪರ್ಕ ಇಲ್ಲದೇ ಮನೆಗಳ ಸಂದಿಗಳಿಂದ ಮುಖ್ಯ ರಸ್ತೆಗೆ ಹೋಗುವ ಪರಸ್ಥಿತಿ ಇದೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಗ್ರಾಮದ ಸಮಸ್ಯೆಗಳಿಗೆ ಕಿವಿಗೊಡಬೇಕು ಎನ್ನುವುದು ಗ್ರಾಮಸ್ಥರ ಆಗ್ರಹ.

ಕಾರ್ಖಾನೆಗಳ ಮಾಲೀಕರಿಗೆ ಪಂಚಾಯಿತಿಯಿಂದ ನೋಟಿಸ್ ನೀಡಲಾಗಿದೆ. ಮೂರ್‍ನಾಲ್ಕು ತಿಂಗಳಿಗೊಮ್ಮೆ ಕೊಳವೆ ಬಾವಿಗಳಲ್ಲಿನ ನೀರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಕುಡಿಯುವ ನೀರಿನಲ್ಲಿ ಯಾವುದೇ ರೀತಿಯ ಸಮಸ್ಯೆ ಇಲ್ಲ. 
ರಮೇಶ್, ನೊಸಗೆರೆ ಗ್ರಾ.ಪಂ ಪಿಡಿಒ 
ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಹದಗೆಟ್ಟಿದೆ. ಮಳೆಗಾಲದಲ್ಲಿ ಹಳ್ಳದಲ್ಲಿ ನೀರು ತುಂಬಿಕೊಂಡು, ಚರಂಡಿ ನೀರಿನ ಜೊತೆ ಸೇರಿ ಮನೆಗಳಿಗೆ ನುಗ್ಗುತ್ತದೆ. ಹಳ್ಳದಲ್ಲಿ ನೀರು ಖಾಲಿಯಾಗುವರೆಗೂ ಮನೆಗಳಿಗೆ ರಸ್ತೆ ಸೌಕರ್ಯ ಇಲ್ಲದಂತಾಗುತ್ತದೆ. ಬದುಕು ದುಸ್ಥರವಾಗಿದೆ
ನಾರಾಯಣಪ್ಪ, ಉಪವಾಸಪುರ ನಿವಾಸಿ 
ಕಾರ್ಖಾನೆಗಳಿಂದ ಹರಿಯುವ ರಾಸಾಯನಿಕ ತ್ಯಾಜ್ಯ ಅಂತರ್ಜಲವನ್ನೂ ಕಲುಷಿತಗೊಳಿಸಿದೆ. ಕೊಳವೆ ಬಾವಿಯಲ್ಲಿನ ನೀರು ಸಹ ಕಲುಷಿತವಾಗಿದೆ. ಕೆರೆಯ ಬಳಿ ಇರುವ ಖಾಸಗಿ ಕೊಳವೆ ಬಾವಿಗಳಿಂದ ಬೆಳೆಗಳಿಗೆ ನೀರನ್ನು ಹರಿಸುತ್ತಿದ್ದು, ಬೆಳೆಗಳು ಸಹ ಕೈಗೆಟುಕುತ್ತಿಲ್ಲ
ವೆಂಕಟೇಶಪ್ಪ, ಗ್ರಾಮದ ರೈತ 
ಕೊಳವೆ ಬಾವಿಯಲ್ಲಿನ ಕಲುಷಿತ ನೀರು ಕುಡಿಯುವುದರಿಂದ ಗ್ರಾಮದಲ್ಲಿನ ಬಹತೇಕರು ಮೊಣಕಾಲು ನೋವಿನಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ. ಪಂಚಾಯಿತಿಯಿಂದ ಅನುದಾನ ಪಡೆದು ಅಭಿವೃದ್ಧಿ ಕಾರ್ಯ ಮಾಡಲಾಗುವುದು.
ರತ್ನಮ್ಮ ನಾರಾಯಣಪ್ಪ, ಗ್ರಾ.ಪಂ.ಸದಸ್ಯೆ
ಚರಂಡಿಗಳಲ್ಲಿ ಕೊಳಚೆ ನೀರು ನಿಂತಿದ್ದು ದುರ್ವಾಸನೆ ಬೀರುತ್ತಿದೆ
ಕಾರ್ಖಾನೆಯ ಮಲಿನ ನೀರು ಕೆರೆಗೆ ಹರಿದು ನೀರು ಮಲಿನವಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.