
ಕೋಲಾರ: ಮಾಲೂರು ವಿಧಾನಸಭಾ ಕ್ಷೇತ್ರಕ್ಕೆ ಮರು ಚುನಾವಣೆ ನಡೆಯುತ್ತದೆ ಎಂಬುದಾಗಿ ಮಾಜಿ ಶಾಸಕ ಕೆ.ಎಸ್.ಮಂಜುನಾಥಗೌಡ ತಿರುಕನ ಕನಸು ಕಾಣುತ್ತಿದ್ದಾರೆ. ಕ್ಷೇತ್ರದ ಜನರನ್ನು ಯಾಮಾರಿಸಲು ನೋಡುತ್ತಿದ್ದಾರೆ ಎಂದು ಶಾಸಕ ಕೆ.ವೈ.ನಂಜೇಗೌಡ ವಾಗ್ದಾಳಿ ನಡೆಸಿದರು.
ನಗರದ ಹೊರವಲಯದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎದುರಾಳಿಯು ಮನಸ್ಸಿಗೆ ಬಂದಂತೆ ಮಾತನಾಡಿ ಜನರನ್ನು ಗೊಂದಲಕ್ಕೆ ಸಿಲುಕಿಸುತ್ತಿದ್ದಾರೆ. ಮರು ಮತ ಎಣಿಕೆಗೆ ಅವರು ಕೋರಿದ್ದರು. ಅದರಂತೆ ಆದೇಶ ಆಗಿದೆ. ಮರು ಮತ ಎಣಿಕೆ ನಡೆಯುವವರೆಗೆ ಕಾಯಬೇಕಲ್ಲವೇ? ಮರು ಚುನಾವಣೆ ನಡೆಯುತ್ತದೆ ಎಂದು ಹೇಳಲು ನಾವೇನು ಸುಪ್ರೀಂ ಕೋರ್ಟ್ ನ್ಯಾಯಾಧೀಶರೇ? ನ್ಯಾಯಾಲಯದಲ್ಲಿ ಇನ್ನೂ ಪ್ರಕರಣ ನಡೆಯುತ್ತಿದೆ. ಮರು ಮತ ಎಣಿಕೆ ಮಾಡಿ ಅದನ್ನು ಘೋಷಿಸದೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಬೇಕು’ ಎಂದರು.
ಆದಷ್ಟು ಬೇಗ ಮರು ಮತ ಎಣಿಕೆ ನಡೆಯಬೇಕೆಂಬು ಎಂಬುದಷ್ಟೇ ನಮ್ಮ ಮನವಿ. ಈಗಾಗಲೇ ಅಧಿಕಾರಿಗಳು ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ. ನ್ಯಾಯಾಲಯದ ಆದೇಶ, ಚುನಾವಣಾ ಆಯೋಗದ ಪ್ರಕಾರವೇ ಅಧಿಕಾರಿಗಳು ಪ್ರಕ್ರಿಯೆ ನಡೆಸಲಿ. ನನಗಂತೂ ಗೆಲುವಿನ ವಿಶ್ವಾಸ ಶೇ 200ರಷ್ಟಿದೆ ಎಂದು ಎಂದು ಹೇಳಿದರು.
ಚುನಾವಣಾ ಸಾಮಗ್ರಿಗಳನ್ನು ಭದ್ರತಾ ಕೊಠಡಿಯಲ್ಲಿ ಇಡದೆ ಮಾಲೂರು ತಾಲ್ಲೂಕು ಕಚೇರಿಯಲ್ಲಿ ಇಟ್ಟು ನಿಯಮ ಉಲ್ಲಂಘಿಸಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ‘ಈಗಾಗಲೇ ಈ ಸಂಬಂಧ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ವಾದ ನಡೆದ ಮೇಲೆ ಅಲ್ಲವೇ ಮರು ಮತ ಎಣಿಕೆಗೆ ಆದೇಶ ಬಂದಿರುವುದು? ಭದ್ರತಾ ಕೊಠಡಿಯಲ್ಲಿ ಏನಿರುತ್ತದೆ, ಮಾಲೂರು ಕಚೇರಿಯಲ್ಲಿ ಏನಿರುತ್ತದೆ ಎಂಬ ವಿಚಾರ ಅವರಿಗೆ ಗೊತ್ತಿಲ್ಲವೇ? ಆ ಸಂಬಂಧಪಟ್ಟವರು ಆದನ್ನು ನೋಡಿಕೊಳ್ಳುತ್ತಾರೆ. ಎದುರಾಳಿಯ ಎರಡೂವರೆ ವರ್ಷಗಳಿಂದ ಕ್ಷೇತ್ರದ ಜನರನ್ನು ಯಾಮಾರಿಕೊಂಡು ಬರುತ್ತಿದ್ದಾರೆ’ ಎಂದು ಹರಿಹಾಯ್ದರು.
ಅಧಿಕಾರಿಗಳು ನನ್ನ ಪರವಾಗಿ ಬರೆದು ಹಾಕಲು ಆಗುತ್ತದೆಯೇ? ಇವಿಎಂ ತಿದ್ದಲು ಸಾಧ್ಯವೇ? ಅದರೊಳಗೆ ಏನಿದೆಯೋ ಅದು ಆಗುತ್ತದೆ. ಇವಿಎಂ ಕೆಟ್ಟು ಹೋಗಿರುತ್ತದೆ, ಮರು ಚುನಾವಣೆ ಬರುತ್ತದೆ ಎಂದೆಲ್ಲಾ ತಿರುಕನ ಕನಸು ಕಾಣುವುದು ಬೇಡ ಎಂದರು.
ಮಾಲೂರಿಗೆ ಮುಖ್ಯಮಂತ್ರಿ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿ, ‘ಈಗಾಗಲೇ ನಿಗದಿ ಮಾಡಿದ ಭೇಟಿಯನ್ನು ಮುಂದೂಡಲಾಗಿದೆ. ಮತ್ತೆ ದಿನಾಂಕ ನಿಗದಿಪಡಿಸಿ ದೊಡ್ಡ ಕಾರ್ಯಕ್ರಮ ನಡೆಸಬೇಕು’ ಎಂದು ಹೇಳಿದರು.
ರಸ್ತೆ ಗುಂಡಿ ವಿಚಾರವಾಗಿ ಮಾತನಾಡಿ, ‘ಮಾಲೂರು ಕ್ಷೇತ್ರದಲ್ಲಿ ಹೊಸೂರು ರಸ್ತೆ ಬಿಟ್ಟರೆ ಬೇರೆ ಎಲ್ಲಾ ರಸ್ತೆಗಳು ಚೆನ್ನಾಗಿವೆ. ₹ 2 ಕೋಟಿ ವೆಚ್ಚದಲ್ಲಿ ಗುಂಡಿ ಮುಚ್ಚುವ ಕೆಲಸ ನಡೆಯುತ್ತಿದೆ. ಅಲ್ಲದೇ, ದೇವನಹಳ್ಳಿಯಿಂದ ಹೊಸೂರು ಗಡಿವರೆಗೆ ನಾಲ್ಕುಪಥದ ಹೆದ್ದಾರಿ ನಿರ್ಮಿಸಲಾಗುತ್ತದೆ. ಮಾಲೂರಿನಿಂದ ಹೊಸಕೋಟೆವರೆಗೆ ಕಾಂಕ್ರೀಟ್ ರಸ್ತೆಯಾಗಲಿದೆ. ಮಾಸ್ತಿ ರಸ್ತೆಯ ಕಾಮಗಾರಿ ನಡೆಯುತ್ತಿದೆ. ವಿವಿಧ ಯೋಜನೆಗಳಡಿ ಹಳ್ಳಿಗಳಲ್ಲಿ 120 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲಾಗಿದೆ’ ಎಂದರು.
ಮಾಲೂರು ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಿದೆ. ಮಾಲೂರು ಅಭಿವೃದ್ಧಿ ಪ್ರಾಧಿಕಾರದಿಂದ 4 ಕಿ.ಮೀ ರಿಂಗ್ ರಸ್ತೆ ನಿರ್ಮಾಣ ಯೋಜನೆ ಇದೆ. ಕೆಲವೇ ದಿನಗಳಲ್ಲಿ ಭೂಮಿಪೂಜೆ ನಡೆಯಲಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಅಶ್ವತ್ಥರೆಡ್ಡಿ ಹಾಗೂ ಮುಖಂಡರು ಇದ್ದರು.
ಮರು ಮತ ಎಣಿಕೆ ನಡೆಯುವವರೆಗೆ ಎದುರಾಳಿಯ ಆರಾಮವಾಗಿರಬೇಕು. ಯಾವುದೇ ರೀತಿಯ ಫಲಿತಾಂಶ ಬಂದರೂ ನಾನು ಸ್ವಾಗತಿಸುತ್ತೇನೆ. ಎದುರಾಳಿಯೂ ಅದನ್ನು ಸ್ವಾಗತಿಸಬೇಕು.– ಕೆ.ವೈ.ನಂಜೇಗೌಡ, ಶಾಸಕ
ಹೊಸಬರಿಗೆ ಸಚಿವ ಸ್ಥಾನ ಬೇಕು
ಮುಖ್ಯಮಂತ್ರಿ ಬದಲಾವಣೆ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ. ಎಲ್ಲವನ್ನೂ ಹೈಕಮಾಂಡ್ ನೋಡಿಕೊಳ್ಳುತ್ತದೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಪರಸ್ಪರ ಚೆನ್ನಾಗಿದ್ದಾರೆ. ಅವರ ನಡುವಿನ ಒಪ್ಪಂದ ಏನಿದೆಯೋ ಯಾರಿಗೊತ್ತು? ಎಂದು ನಂಜೇಗೌಡ ತಿಳಿಸಿದರು.
ಸಚಿವ ಸಂಪುಟ ವಿಸ್ತರಿಸಿ ಹೊಸಬರಿಗೆ ಅವಕಾಶ ಮಾಡಿಕೊಡಬೇಕು ಎಂಬುದನ್ನು ನಾನು ನೇರವಾಗಿ ಹೇಳುತ್ತೇನೆ. ಹೊಸಬರಿಗೆ ಅವಕಾಶ ಮಾಡಿಕೊಟ್ಟರೆ 2028ರ ಚುನಾವಣೆ ಗೆಲ್ಲಲು ಬಲ ಬರುತ್ತದೆ. ಕೋಲಾರಕ್ಕೂ ಸಚಿವ ಸ್ಥಾನ ಕೊಡಬೇಕು. ನಾಲ್ವರು ಶಾಸಕರಲ್ಲಿ ಯಾರಿಗಾದರೂ ಕೊಡಲಿ. ನಾನೇನೂ ಹೊಟ್ಟೆಕಿಚ್ಚುಪಡುವುದಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.