ADVERTISEMENT

ಮಾಲೂರು–ಹೊಸಕೋಟೆ ಚತುಷ್ಪಥ ರಸ್ತೆ ನಿರ್ಮಾಣ ಶೀಘ್ರವೇ ಆರಂಭ: ಶಾಸಕ ನಂಜೇಗೌಡ

​ಪ್ರಜಾವಾಣಿ ವಾರ್ತೆ
Published 31 ಮೇ 2023, 15:38 IST
Last Updated 31 ಮೇ 2023, 15:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಾಲೂರು: ಮಾಲೂರು ಪಟ್ಟಣದಿಂದ ಹೊಸಕೋಟೆಯವರೆಗೆ ನಾಲ್ಕು ಪಥದ ರಸ್ತೆ ನಿರ್ಮಿಸುವ ಅತ್ಯಂತ ದೊಡ್ಡ ಯೋಜನೆಗೆ ಜೂನ್ 2ರಂದು ನಡೆಯುವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳು ಅನುಮೋದಿಸಲಿದ್ದಾರೆ ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.

ಎಪಿಎಂಸಿ ಆವರಣದಲ್ಲಿ ₹5.20 ಕೋಟಿ ವೆಚ್ಚದಲ್ಲಿ ಕಾಂಕ್ರೆಟ್ ರಸ್ತೆ, ಚರಂಡಿ ಮತ್ತು ಮಳಿಗೆ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದರು.

ಅಲ್ಲದೆ 70ವರ್ಷದ ಹಳೆಯದಾದ ರೈಲ್ವೆ ಸೇತುವೆ ಶೀಥಿಲಗೊಂಡಿದ್ದು, ಕಳೆದ ಅಧಿವೇಶನದಲ್ಲಿ ರೈಲ್ವೆ ಸೇತುವೆಯನ್ನು ದುರಸ್ತಿಗಾಗಿ ಪ್ರಸ್ತಾಪಿಸಲಾಗಿತ್ತು. ರಾಜ್ಯಮಟ್ಟದ ಅಧಿಕಾರಿಗಳು ಆಗಮಿಸಿ ರೈಲ್ವೆ ಸೇತುವೆಯನ್ನು ವೀಕ್ಷಣೆ ಮಾಡಿದ್ದರು. ಅಧಿಕಾರಿಗಳು ಸರ್ಕಾರದ ಗಮನಕ್ಕೆ ತಂದಿದ್ದು, ರಾಜ್ಯ ಸರ್ಕಾರ ಸಿಆರ್‌ಎಫ್ ಯೋಜನೆ ಅಡಿ ನಾಲ್ಕು ಪಥದ ರಸ್ತೆ ನಿರ್ಮಿಸಲು ₹30 ಕೋಟಿ ನೀಡಲಿದೆ. ರಾಷ್ಟ್ರೀಯ ರಸ್ತೆ ಅಭಿವೃದ್ಧಿ ಪ್ರಾಧಿಕಾರವು ರಸ್ತೆ ಅಭಿವೃದ್ಧಿ ಪ್ರಾರಂಭಿಸಲಿದೆ ಎಂದು ತಿಳಿಸಿದರು.

ADVERTISEMENT

ಎಪಿಎಂಸಿ ಮಾರುಕಟ್ಟೆಯನ್ನು ವಿಶೇಷ ಅಭಿವೃದ್ಧಿ ಮಾಡಿ ಸೂಕ್ತ ಮಾರುಕಟ್ಟೆ ಒದಗಿಸಿದರೆ, ಬೇರೆ ಕಡೆಯಿಂದ ತರಕಾರಿ ಖರೀದಿಸಲು ವ್ಯಾಪಾರಸ್ಥರು ಬರುತ್ತಾರೆ. ಇದರಿಂದ ಸ್ಥಳೀಯ ಮಾರುಕಟ್ಟೆ ಅಭಿವೃದ್ಧಿ ಆಗುತ್ತದೆ ಎಂದರು.

ತಾಲೂಕಿನ ಅಭಿವೃದ್ಧಿಗೆ ಬಿಜೆಪಿ ಸರ್ಕಾರದಲ್ಲಿ ಹೆಚ್ಚಿನ ಸಹಕಾರ ಸಿಗಲಿಲ್ಲ. ರಸ್ತೆಗಳ ಗುಂಡಿಗಳು ಮುಚ್ಚಲು ಅಡ್ಡಿಪಡಿಸಿದ್ದರು. ಹೊಸ ರಸ್ತೆಗಳಿಗೆ ಅವಕಾಶವೇ ಸಿಗಲಿಲ್ಲ. ನನಗೆ ಮತ್ತೆ ಅವಕಾಶ ಸಿಕ್ಕಿದೆ. ಸರ್ಕಾರದಿಂದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತಂದು ಎಪಿಎಂಸಿ ಮಾರುಕಟ್ಟೆಯ ಜೊತೆಗೆ ತಾಲೂಕಿನ ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿದರು.

ತಹಶೀಲ್ದಾರ್‌ ಕೆ. ರಮೇಶ್, ಎಪಿಎಂಸಿ ಸದಸ್ಯ ಕಾರ್ಯದರ್ಶಿ ಮಂಜುನಾಥ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಎಚ್.ಚನ್ನರಾಯಪ್ಪ, ಕೃಷಿಕ ಸಮಾಜದ ಅಧ್ಯಕ್ಷ ಹನುಮಂತಪ್ಪ, ಪುರಸಭೆ ಸದಸ್ಯರಾದ ಎ.ರಾಜಪ್ಪ, ಪರಮೇಶ್, ಭಾರತಮ್ಮ ಕೆಪಿಸಿಸಿ ಸದಸ್ಯ ಅಂಜನಿ ಸೋಮಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಜಿ.ಮಧುಸೂದನ್, ಎಚ್.ಎಂ.ವಿಜಯನರಸಿಂಹ, ವರ್ತಕ ಸೂರಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣಕುಮಾರ್, ಶ್ರೀನಿವಾಸ್ ರೆಡ್ಡಿ, ಗೋವಿಂದರಾಜ ರೆಡ್ಡಿ, ಮಾಜಿ ಉಪಾಧ್ಯಕ್ಷ ಮುನಿರಾಜು, ವಕೀಲ ರಮೇಶ್, ಸಿಡಿಸಿ ಕಾರ್ಯಾಧ್ಯಕ್ಷೆ ಶೈಲಜಾ, ಮುಖಂಡರಾದ ದಿನೇಶ್ ಗೌಡ, ಸತೀಶ್, ಶಬೀರ್, ತನ್ವೀರ್ ಅಹ್ಮದ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.