
ಮಾಲೂರು: ಕೂರಾಂಡಹಳ್ಳಿ ಕೈಗಾರಿಕೆಗಳಿಂದ ಬರುವ ರಾಸಾಯನಿಕ ತ್ಯಾಜ್ಯ ಕೊಳವೆ ಬಾವಿಗಳ ನೀರಿನಲ್ಲಿ ಮಿಶ್ರಿತವಾಗಿ ನೊಸಗೆರೆ ಗ್ರಾ.ಪಂ.ವ್ಯಾಪ್ತಿಯ ಕೆಲವು ಗ್ರಾಮಗಳ ಜನತೆಯ ಜೀವನಕ್ಕೆ ಕಂಠಕವಾಗಿ ಪರಿಣಮಿಸಿದೆ.
ತಾಲ್ಲೂಕಿನ ಕೂರಾಂಡಹಳ್ಳಿ ಕೈಗಾರಿಕಾ ಪ್ರಾಂಗಣದಲ್ಲಿರುವ ಕೆಲವು ಕಾರ್ಖಾನೆಗಳಿಂದ ಬರುವ ರಾಸಾಯನಿಕ ತ್ಯಾಜ್ಯ ಈ ಮೊದಲು ಕೆರೆ ಕುಂಟೆಗಳಿಗೆ ಹರಿದು ಕೆರೆಯಲ್ಲಿ ನೀರು ಕಲುಷಿತಗೊಂಡು, ಜಾನುವಾರುಗಳಿಗೆ ಬಳಸದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಈಗ ಕುಡಿಯಲು ಹಾಗೂ ಕೃಷಿಗಾಗಿ ಕೊರೆಸುವ ಕೊಳವೆಬಾವಿಗಳಲ್ಲಿ ಕಾರ್ಖಾನೆಯ ರಾಸಾಯನಿಕಗಳು ತ್ಯಾಜ್ಯ ಮಿಶ್ರಿತವಾಗಿ ರೈತರ ಕೃಷಿ ಚಟುವಟಿಕೆಗಳು ನಡೆಸಲು ಸಾಧ್ಯವಾಗದಂತಾಗಿ ಪರಿಣಮಿಸಿದೆ.
ನೊಸಗೆರೆ ಗ್ರಾಪಂ.ವ್ಯಾಪ್ತಿಯ ಕೂರಂಡಹಳ್ಳಿ ಕೈಗಾರಿಕಾ ಪ್ರಾಂಗಣದಲ್ಲಿ ನೂರಾರು ಕಾರ್ಖಾನೆಗಳಿವೆ. ಕೂರಾಂಡಹಳ್ಳಿ ಕೈಗಾರಿಕಾ ಪ್ರಾಂಗಣಕ್ಕೆ ಹೊಂದಿಕೊಂಡಿರುವ ಕೂರಾಂಡಹಳ್ಳಿ, ಉಪವಾಸಪುರ, ಹುರಳಗೆರೆ, ಬ್ಯಾಲಹಳ್ಳಿ ಹಾಗೂ ಬೊಪ್ಪನಹಳ್ಳಿ ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಕುಡಿಯುವ ನೀರಿಗಾಗಿ ಕೊರೆಯಿಸಿರುವ ಕೊಳವೆಬಾವಿಗಳಲ್ಲಿ ರಾಸಾಯನಿಕ ಮಿಶ್ರಿತ ನೀರು ಬರುತ್ತಿದ್ದು, ಇಲ್ಲಿನ ಕೊಳವೆ ಬಾವಿಗಳ ನೀರು ಉಪಯೋಗಕ್ಕೆ ಬಾರದಂತಾಗಿದೆ ಎಂದು ಪಂಚಾಯಿತಿ ಅಧಿಕಾರಿಗಳು ಸರ್ಕಾರಕ್ಕೆ ದೂರು ಸಲ್ಲಿಸಿದ್ದಾರೆ.
ಕಾರ್ಖಾನೆಗಳ ರಾಸಾಯನಿಕ ಮಿಶ್ರಿತ ತ್ಯಾಜ್ಯ ನೀರು ಕೆರೆಗಳಿಗೆ: ಈ ಹಿಂದೆ ಕೂರಾಂಡಹಳ್ಳಿ ಕೈಗಾರಿಕಾ ಪ್ರಾಂಗಣದ ಕೈಗಾರಿಕೆಗಳಲ್ಲಿನ ರಾಸಾಯನಿಕ ಮಿಶ್ರಿತ ತ್ಯಾಜ್ಯವನ್ನು ಪ್ರಾಂಗಣದ ಕೊಳದಲ್ಲಿ ಶೇಖರಿಸಲಾಗುತ್ತಿತ್ತು. ಮಳೆ ಬಂದಾಗ ಮಳೆ ನೀರಿನಲ್ಲಿ ರಾಸಾಯನಿಕ ನೀರು ಕಾಲುವೆಗಳ ಮೂಲಕ ಕೆರೆಗಳಿಗೆ ಹರಿಯುತ್ತಿತ್ತು. ಹಾಗಾಗಿ ಕೆರೆ ನೀರು ಯಾವುದಕ್ಕೂ ಉಪಯೋಗಕ್ಕೆ ಬರುತ್ತಿರಲಿಲ್ಲ. ಈ ಭಾಗದ ರೈತರು ಕಾರ್ಖಾನೆಗಳ ವಿರುದ್ಧ ಹೋರಾಟ ನಡೆಸಿ ಪರಿಣಾಮ, ಕೆರೆಗಳಿಗೆ ಕೆಮಿಕಲ್ ನೀರು ಹರಿಸುವುದು ನಿಲ್ಲಿಸಲಾಯಿತು. ಆದರೆ, ಈಗ ಕೊಳವೆ ಬಾವಿಗಳಲ್ಲಿ ರಾಸಾಯನಿಕ ಮಿಶ್ರಿತ ತ್ಯಾಜ್ಯ ನೀರು ಹರಿಯುತ್ತಿದೆ. ಹಾಗಾಗಿ ಈ ನೀರು ಕೃಷಿ, ಜಾನುವಾರು ಹಾಗೂ ದಿನ ಬಳಕೆಗೂ ಬಳಸಲಾಗದ ಪರಿಸ್ಥಿತಿ ಉಂಟಾಗಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ನೊಸಗೆರೆ ಪಂಚಾಯಿತಿ ವ್ಯಾಪ್ತಿಯ ಕೂರಾಂಡಹಳ್ಳಿ, ಉಪವಾಸಪುರ, ನೊಸಗೆರೆ ಮತ್ತು ಬೊಪ್ಪನಹಳ್ಳಿ ಗ್ರಾಮದ ರೈತರು ಕೃಷಿ ಭೂಮಿಗಳಲ್ಲಿ ಅಳವಡಿಸಿರುವ ಕೊಳವೆಬಾವಿಗಳಲ್ಲಿ ರಾಸಾಯನಿಕ ಮಿಶ್ರಿತ ತ್ಯಾಜ್ಯ ನೀರು ಬರುತ್ತಿದ್ದು, ಈ ನೀರಿನಲ್ಲಿ ಯಾವುದೇ ಬೆಳೆ ಬರುತ್ತಿಲ್ಲ. ಹುರಳಿಕಾಯಿ, ಚಿಕ್ಕಡಿ, ಮೆಣಸಿನಕಾಯಿ, ಸೋರೆಕಾಯಿ, ಹಾಗಲಕಾಯಿ ಬೆಳೆ ಯಾವ ಬೆಳೆಯೂ ಕೈಗೆ ಸಿಗುತ್ತಿಲ್ಲ ಎಂಬುದು ರೈತರ ಆರೋಪವಾಗಿದೆ.
ಮಾಲೂರು ತಾಲ್ಲೂಕಿನ ಕೂರಾಂಡಹಳ್ಳಿ ಕೃಷಿ ಭೂಮಿಯಲ್ಲಿ ಸೇವಂತಿ ನಾಟಿ ಮಾಡಿದ್ದು, ರಾಸಾಯನಿಕ ಮಿಶ್ರಿತ ಕೊಳವೆಬಾವಿ ನೀರು ಹರಿಸಿದ್ದರಿಂದ ಮೊಳಕೆಯಲ್ಲೇ ಬತ್ತಿಹೋಗಿದೆ ಎಂಬುದು ರೈತ ಮುನಿರಾಜು ಅವರ ಮಾತಾಗಿದೆ.
ರಾಸಾಯನಿಕ ಮಿಶ್ರತ ನೀರು ಕೃಷಿ ಭೂಮಿಗೆ ಹರಿಸಿದ್ದರಿಂದ ಬೀನ್ಸ್ ಬಿಡದಂತಾಗಿದೆ ಎಂಬುದು ಉಪವಾಸಪುರ ಮಹಿಳೆ ರಾಮಕ್ಕ ಅವರ ಮಾತಾಗಿದೆ.
ಕೂರಾಂಡಹಳ್ಳಿ ಕೈಗಾರಿಕಾ ಪ್ರಾಂಗಣದಲ್ಲಿ ಹಲವು ಕಾರ್ಖಾನೆಗಳಿವೆ. ಕೆಲವು ಕಾರ್ಖಾನೆಗಳಲ್ಲಿ ತ್ಯಾಜ್ಯ ನಿರ್ವಹಣೆ ಘಟಕಗಳು ಸ್ಥಾಪಿಸಿಲ್ಲ. ಹಾಗಾಗಿ ಕಾರ್ಖಾನೆಗಳಲ್ಲಿ ಉತ್ಪಾದನೆಯಾಗುವ ರಾಸಾಯನಿಕ ನೀರು ಕಾಲುವೆ ಮೂಲಕ ಕೆರೆಗಳಿಗೆ ಸೇರಿದೆ. ನಂತರ ಕೊಳವೆಬಾವಿಗಳ ನೀರಿನಲ್ಲಿ ರಾಸಾಯನಿಕ ಮಿಶ್ರಿತವಾಗಿರುವುದು ನೀರಿನ ಪರೀಕ್ಷೆ ಮೂಲಕ ತಿಳಿದಿದೆ. ಯಾವ ಕಾರ್ಖಾನೆಯಿಂದ ರಾಸಾಯನಿಕ ತ್ಯಾಜ್ಯ ಬರುತ್ತಿದೆ ಎಂಬುದನ್ನು ಕಂಡು ಹಿಡಿಯಲು ಪಂಚಾಯಿತಿ ವತಿಯಿಂದ ಪರೀಕ್ಷೆಗೆ ಕಳುಹಿಸಲಾಗುವುದು. ಫಲಿತಾಂಶ ಬಂದ ನಂತರ ಕಾರ್ಖಾನೆ ಮೇಲೆ ಕ್ರಮ ಜರುಗಿಸಲು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.ಸುರೇಶ್ ಪಿಡಿಒ ನೊಸಗೆರೆ ಗ್ರಾಮ ಪಂಚಾಯಿತಿ
ಕೈಗಾರಿಕೆಗಳು ಯಾವುದೇ ರೀತಿಯ ತ್ಯಾಜ್ಯವನ್ನು ಹೊರಗಡೆ ಬಿಡಬಾರದು. ಹೊರಗಡೆ ಬಿಟ್ಟರೆ ಸಂಸ್ಕರಿಸಿ ಬಿಡಬೇಕು. ನಿಯಮ ಪಾಲಿಸದ ಕೆಲವು ಕಾರ್ಖಾನೆಗಳಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಹೀಗೆ ಮುಂದುವರೆದರೆ ಅವರ ಮೇಲೆ ಕ್ರಮ ಜರುಗಿಸಲು ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಲಾಗುವುದು.ವಿನೋದ್ ಕುಮಾರ್ ಮೇಲ್ವಿಚಾರಕ ಕೆಐಎಡಿಬಿ ಮಾಲೂರು
ಕಲುಷಿತ ನೀರಿನಿಂದ ಬರಡಾದ ಭೂಮಿ ಎರಡು ವರ್ಷದಿಂದ ಹಾಕಿದ ಬೆಳೆ ಕೈಗೆ ಸಿಗದೆ ಸಾಲ ಹೆಚ್ಚಾಗಿದೆ. ಕೊಳವೆಬಾವಿಯಿಂದ ಬರುವ ನೀರನ್ನು ಬೆಳೆಗೆ ಹರಿಸುತ್ತಿದ್ದರೆ ಬೆಳೆ ಒಣಗುತ್ತಿದೆ. ಫಲವತ್ತಾದ ಭೂಮಿ ಕಲುಷಿತ ನೀರು ಹರಿಸಿದ್ದರಿಂದ ಬರಡು ಭೂಮಿಯಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.ವೆಂಕಟೇಶ್ ಉಪವಸಪುರ ಗ್ರಾಮದ ರೈತ
ಕೂರಾಂಡಹಳ್ಳಿ ಕೈಗಾರಿಕಾ ಪ್ರಾಂಗಣ ವ್ಯಾಪ್ತಿಯ ಕೂರಂಡಹಳ್ಳಿ ಬ್ಯಾಲಹಳ್ಳಿ ಹುರಳಗೆರೆ ಉಪವಾಸಪುರ ಗ್ರಾಮದ ರೈತರ ಸ್ಥಿತಿ ಹೇಳತೀರದು. ಇರುವ ಭೂಮಿಯಲ್ಲಿ ಕೃಷಿ ಮಾಡುತ್ತಾ ಆರ್ಥಿಕವಾಗಿ ಉತ್ತಮವಾಗಿದ್ದ ರೈತರು ಕಾರ್ಖಾನೆಗಳ ರಾಸಾಯನಿಕ ತ್ಯಾಜ್ಯದ ಹಾವಳಿಯಿಂದ ರೈತರ ಕೈಗೆ ಬೆಳೆ ಸಿಗುತ್ತಿಲ್ಲ. ಹೀಗೆ ಮುಂದುವರೆದರೆ ನಾವೆಲ್ಲಾ ಗುಳೆ ಹೋಗಬೇಕಾಗುತ್ತದೆ.ಮುನಿರಾಜು ಕೂರಂಡಹಳ್ಳಿ ಗ್ರಾಮದ ರೈತ
ಮನೆ ಬಳಕೆಗೂ ನೀರು ಅನುಪಯುಕ್ತ ಕೊಳವೆಬಾವಿಗಳ ನೀರು ಮನೆ ಬಳಕೆಗೂ ಅನುಪಯುಕ್ತವಾಗಿದೆ. ಸ್ನಾನಕ್ಕೆ ಬಳಸಿದರೆ ಕೂದಲು ಉದರುತ್ತಿದೆ. ಬಟ್ಟೆ ತೊಳೆದರೆ ಹಳೆ ಬಟ್ಟೆಯಂತಾಗುತ್ತದೆ. ಹಾಗಾಗಿ ಇದರಿಂದ ನಮಗೆ ಮುಕ್ತಿ ಕೊಡಿಸಿಭಾಗ್ಯಮ್ಮ ಗೃಹಿಣಿ ಕೂರಾಂಡಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.