ADVERTISEMENT

ಮರು ಮತ ಎಣಿಕೆಯಲ್ಲಿ ಸೋತರೆ ರಾಜಕೀಯ ನಿವೃತ್ತಿ: ನಂಜೇಗೌಡ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 13:00 IST
Last Updated 17 ಸೆಪ್ಟೆಂಬರ್ 2025, 13:00 IST
   

ಕೋಲಾರ: ಹೈಕೋರ್ಟ್‌ ಆದೇಶದಂತೆ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ನಡೆದು ಪ್ರತಿಸ್ಪರ್ಧಿ ಕೆ.ಎಸ್‌.ಮಂಜುನಾಥಗೌಡ ಗೆದ್ದರೆ ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಕಾಂಗ್ರೆಸ್‌ ಶಾಸಕ ಕೆ.ವೈ.ನಂಜೇಗೌಡ ಸವಾಲು ಹಾಕಿದರು.

ತಾಲ್ಲೂಕಿನ ರಾಮಸಂದ್ರ ಗಡಿಭಾಗದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆತನನ್ನು ನಾನೇ ಹೊಸಕೋಟೆಯಿಂದ ಕರೆದುಕೊಂಡು ಬಂದು ಮಾಲೂರು ಕ್ಷೇತ್ರದಲ್ಲಿ ಗೆಲ್ಲಿಸಿದ್ದೆ. ಆದರೆ, ಈಗ ಆತನಿಗೆ ಹುಚ್ಚು ಹಿಡಿದಿದ್ದು, ತಿಕ್ಲನ ರೀತಿ ಆಡುತ್ತಾ ಶಾಸಕನಾದ ಭ್ರಮೆಯಲ್ಲಿದ್ದಾನೆ. ಅವನ ಕಡೆಯ ಕೆಲವರು ಹಗಲು ಕನಸು ಕಾಣುತ್ತಾ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ’ ಎಂದು ಹರಿಹಾಯ್ದರು.

‘ಮರು ಮತ ಎಣಿಕೆ ನಡೆಯಲಿ ಅಥವಾ ಹೊಸದಾಗಿ ಚುನಾವಣೆ ನಡೆಯಲಿ ಆತನಿಗೆ ಮತ್ತೊಮ್ಮೆ ಸೋಲು ಕಟ್ಟಿಟ್ಟ ಬುತ್ತಿ’ ಎಂದರು.

ADVERTISEMENT

‘ಹೈಕೋರ್ಟ್‌ ನನ್ನ ಶಾಸಕ ಸ್ಥಾನವನ್ನು ಅಸಿಂಧುಗೊಳಿಸಿದೆ. ಹೀಗಾಗಿ, ನಾನು ಸುಪ್ರೀಂ ಕೋರ್ಟ್‌ ಮೊರೆ ಹೋಗುತ್ತಿದ್ದೇನೆ. ಬರೀ ಮರು ಮತ ಎಣಿಕೆಗೆ ಸೂಚಿಸಿದ್ದರೆ ಸುಮ್ಮನಿರುತ್ತಿದೆ. ಈಗ ಇಡೀ ಆದೇಶದ ಮೇಲೆ ಮೇಲ್ಮನವಿ ಸಲ್ಲಿಸುತ್ತೇನೆ’ ಎಂದು ಹೇಳಿದರು.

ಮಾಲೂರಿನಲ್ಲಿ ಮತ ಕಳ್ಳತನ ನಡೆದಿದೆ ಎಂದು ಮಂಜುನಾಥಗೌಡ ಆರೋಪಿಸಿರುವ ಕುರಿತು, ‘2023ರಲ್ಲಿ ವಿಧಾನಸಭೆ ಚುನಾವಣೆ ನಡೆಯುವಾಗ ರಾಜ್ಯದಲ್ಲಿ ಇದ್ದದ್ದು ಬಿಜೆಪಿ ಸರ್ಕಾರ. ಅವರದ್ದೇ ಅಧಿಕಾರಿಗಳು ಹಾಗೂ ಪೊಲೀಸರು ಇದ್ದರು. ನಾನು ಮತ ಎಣಿಕೆ ದಿನ ಮನೆಯಲ್ಲಿ ಟಿ.ವಿ ನೋಡುತ್ತಾ ಕುಳಿತಿದ್ದೆ. ಕೊನೆಯಲ್ಲಿ ಆತನ ಮನವಿ ಮೇರೆಗೆ ಜಿಲ್ಲಾ ಚುನಾವಣಾಧಿಕಾರಿಗಳು ವಿ.ವಿ ಪ್ಯಾಟ್ ತಾಳೆ ಮಾಡಲು ಲಾಟರಿ ಎತ್ತಿ ನಂತರ ಫಲಿತಾಂಶ ಘೋಷಿಸಿದರು. ಈಗ ಆತ ಏನೇನೋ ಮಾತನಾಡುತ್ತಿದ್ದಾನೆ’ ಎಂದರು.

‘ನಾನ್ಯಾಕೆ ವಿಡಿಯೊ ಕಳ್ಳತನ ಮಾಡಲಿ. ಅದನ್ನು ಸರಿಯಾಗಿ ಸಂಗ್ರಹಿಸಿಡುವುದು ಅಧಿಕಾರಿಗಳ ಜಬಾಬ್ದಾರಿ‌. ಅಧಿಕಾರಿಗಳೇನು ನನ್ನ ಸಂಬಂಧಿಕರೇ’ ಎಂದು ಪ್ರಶ್ನಿಸಿದರು.

ಮಾಲೂರು ಕ್ಷೇತ್ರಕ್ಕೆ ಈಗ ಶಾಸಕರು ಇಲ್ಲ, ತಬ್ಬಲಿಯಾಗಿದೆ ಎಂಬ ಮಂಜುನಾಥಗೌಡ ಹೇಳಿಕೆಗೆ, ‘ಹೈಕೋರ್ಟ್‌ ತನ್ನ ಆದೇಶಕ್ಕೆ 30 ದಿನಗಳ ತಡೆಯಾಜ್ಞೆ ನೀಡಿದೆ. ನಾನು ಈಗಲೂ ಶಾಸಕನೇ. ಅವರಂತೆ ಮಾಜಿ ಶಾಸಕ ಅಲ್ಲ’ ಎಂದು ತಿರುಗೇಟು ನೀಡಿದರು.

‘ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಸೇರಿದಂತೆ ಅನೇಕರು ನನ್ನ ಜೊತೆ ಮಾತನಾಡಿದ್ದಾರೆ. ಈ ಪ್ರಕರಣದಿಂದ ಜನರಲ್ಲಿ ನನ್ನ ಬಗ್ಗೆ ಕನಿಕರ ಬಂದಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.