ADVERTISEMENT

ಅಸ್ಪೃಶ್ಯತೆ ಅಳಿಸಿ ಮುಕ್ತ ಪ್ರವೇಶ ನೀಡಿ: ಹಿಂದೂ ಸಮಾಜ್ಯೋತ್ಸವದಲ್ಲಿ ಮುಖಂಡರ ಆಶಯ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 7:00 IST
Last Updated 19 ಜನವರಿ 2026, 7:00 IST
ಮಾಲೂರಿನಲ್ಲಿ ಭಾನುವಾರ ನಡೆದ ಹಿಂದೂ ಸಮಾಜೋತ್ಸವದಲ್ಲಿ ಸ್ವಾಮೀಜಿಗಳು, ಮುಖಂಡರು ಪಾಲ್ಗೊಂಡಿದ್ದರು
ಮಾಲೂರಿನಲ್ಲಿ ಭಾನುವಾರ ನಡೆದ ಹಿಂದೂ ಸಮಾಜೋತ್ಸವದಲ್ಲಿ ಸ್ವಾಮೀಜಿಗಳು, ಮುಖಂಡರು ಪಾಲ್ಗೊಂಡಿದ್ದರು   

ಮಾಲೂರು‌: ಅಸ್ಪೃಶ್ಯತೆ ಅಳಿಸಿ ಹಾಕುವ‌ ನಿಟ್ಟಿನಲ್ಲಿ ಹಿಂದೂ ಸಮಾಜ ಜಾಗೃತವಾಗಬೇಕಿದೆ. ನಮ್ಮ ಗ್ರಾಮ, ಮನೆ, ದೇವಾಲಯಗಳಿಗೆ ಮುಕ್ತ ಪ್ರವೇಶಾವಕಾಶ ಎಂದು ಹೇಳಬೇಕು. ಪ್ರತಿ ಮನೆ ಮನೆಯಲ್ಲೂ, ಹಿಂದೂ ಪೀಳಿಗೆಗೆ ಜಾಗೃತಿ ಮೂಡಿಸಬೇಕಿದೆ ಎಂದು ಆರ್‌ಎಸ್‌ಎಸ್‌ ಮುಖಂಡ ನಾ.ತಿಪ್ಪೇಸ್ವಾಮಿ ತಿಳಿಸಿದರು.

ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಆಟದ ಮೈದಾನದಲ್ಲಿ (ಹೋಂಡಾ ಸ್ಟೇಡಿಯಂ) ಭಾನುವಾರ ಹಮ್ಮಿಕೊಂಡಿದ್ದ ಹಿಂದೂ ಸಮಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.

ಈ ಹಿಂದೆಯೂ ಭಾರತ ವಿಶ್ವ ಗುರು ಆಗಿತ್ತು. ವಸುಧೈವ ಕುಟುಂಬಕಂ ಎಂದೇ ವಿಶ್ವದಲ್ಲಿ ಭಾರತವನ್ನು ಕರೆಯಲಾಗುತ್ತದೆ. ಖಗೋಳದಲ್ಲಿ ಜಗತ್ತು ಅಂಬೆಗಾಲು ಇಡುವ ಸಮಯದಲ್ಲಿ ಹಿಂದೂ ಸಮಾಜ ಉಚ್ಚ್ರಾಯ ಸ್ಥಿತಿಯಲ್ಲಿ ಇತ್ತು. ಭಾರತವು ಜಗತ್ತಿಗೆ ಚೈತನ್ಯ, ವೀರತ್ವ ಹಾಗೂ ಭವ್ಯ ನಾಗರಿಕತೆಯನ್ನು ನೀಡಿದೆ. ಹಿಂದೂ ಎಂದಾಗ ರಕ್ತ ಸಂಚಾರ ಆದಾಗ ಮಾತ್ರ ದಾಸ್ಯದಿಂದ ಮೇಲೆದ್ದು ಬರಲು ಸಾಧ್ಯ ಎಂದರು.

ADVERTISEMENT

ಈ ಹಿಂದೆ ಹಿಂದೂ ಎನ್ನಲು ಸಂಕುಚಿತ‌ ಮನೋಭಾವ ಇತ್ತು. ಆದರೆ, ಇಂದು ಅಂತಹ ಪರಿಸ್ಥಿತಿ ಇಲ್ಲ, ಧೈರ್ಯವಾಗಿ ಹಿಂದೂ ಎನ್ನುವ ವಾತಾವರಣ ಇದೆ. ಹಿಂದೂ ಸಂಘಟಿತನಾಗಲಾರ ಎನ್ನುವ ಮಾತು ಇತ್ತು. ಹಿಂದೂಗಳು ಸಂಘಟಿತರಾದರೆ ಮಾತ್ರ ಸಮಸ್ಯೆಗಳಿಗೆ ಪರಿಹಾರ. ಹಿಂದೂ ಸಮಾಜ ಇಂದು ಸಂಘಟಿತವಾಗಿದೆ ಎಂದು ಹೇಳಿದರು.

ಗುರು-ಹಿರಿಯರನ್ನು ಗೌರವಿಸುವುದು ನಮ್ಮ ಸಂಸ್ಕೃತಿ. ಮೊದಲಿನಿಂದಲೂ ಪರಸ್ಪರ ಪ್ರೀತಿ, ವಾತ್ಸಲ್ಯಗಳಿಂದ ಬದುಕುತ್ತಿದ್ದೇವೆ. ಸೀರಿಯಲ್‌ ಸಂಸ್ಕೃತಿಯಿಂದ, ಅತ್ತೆ ಸೊಸೆ ಕಥೆಗಳಿಂದ ಮನೆಗಳು ಹಾಳಾಗುತ್ತಿವೆ. ವ್ಯಸನಿಗಳನ್ನ ಮಾಡುವ‌ ಮೂಲಕ ಯುವ ಸಮುದಾಯದ ಹಾದಿ ತಪ್ಪುಸುತ್ತಿವೆ. ಹಿಂದೂ ಸಮಾಜ, ಸಂಸ್ಕೃತಿಯನ್ನು ಹಾಳು ಮಾಡುವ ಸಂಚು ನಡೆಯುತ್ತಿದ್ದು ಎಚ್ಚರಿಂದ ಇರಬೇಕು ಎಂದರು.

ನಾಗಲಾಪುರ ಮಠದ ತೇಜೇಶಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ದೇಶ ವಿದೇಶಗಳಿಗೆ ಹಿಂದೂ ಧರ್ಮದ ಆಧ್ಯಾತ್ಮಿಕ ವಿಗ್ರಹಗಳನ್ನ ಕೊಟ್ಟ ಕೀರ್ತಿ ಮಾಲೂರು ನಗರಕ್ಕೆ ಸಲ್ಲುತ್ತದೆ. ಹಿಂದೂಗಳು ಜಾಗೃತರಾಗಬೇಕು, ಪರಂಪರೆಯನ್ನ ಬೆಳೆಸಬೇಕು ಎನ್ನುವುದು ಇದರ ಉದ್ದೇಶ. ಕೇವಲ ಅರ್‌ಎಸ್‌ಎಸ್‌ ಅಥವಾ ಹಿಂದೂ ಪರಿಷತ್ ಮಾತ್ರವಲ್ಲ; ಹಿಂದೂ ಧರ್ಮದ ಪ್ರತಿಯೊಬ್ಬರಲ್ಲೂ ಸ್ವ ಧರ್ಮದ ವ್ಯಾಮೋಹ ಬೆಳೆಯಬೇಕು. ಮನೆ, ಗ್ರಾಮಗಳಲ್ಲಿ ಜಾಗೃತರಾದಾಗ ಧರ್ಮ ಜಾಗೃತವಾಗುತ್ತದೆ’ ಎಂದು ತಿಳಿಸಿದರು.

ಹಿಂದೂ ಸಮಾಜೋತ್ಸವ ಹಿನ್ನೆಲೆಯಲ್ಲಿ ಮಾಲೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ನಗರದ ಮುಖ್ಯ ರಸ್ತೆಯಲ್ಲಿ ಕೇಸರಿ ಬಾವುಟಗಳು ಹಾಗೂ ಬಂಟಿಂಗ್ಸ್, ಫ್ಲೆಕ್ಸ್ ಬ್ಯಾನರ್‌ ಅಳವಡಿಸುವ ಮೂಲಕ ಸಂಪೂರ್ಣ ಕೇಸರಿಮಯ ಮಾಡಲಾಗಿತ್ತು. ನಗರದ ಮುಖ್ಯ ರಸ್ತೆಯಲ್ಲಿ ಕೇಸರಿ ಬಾವುಟಗಳು, ಬಂಟಿಂಗ್ಸ್, ಹಿಂದೂ ಧರ್ಮದ ಸಂತರ ಭಾವಚಿತ್ರಗಳುಳ್ಳ ಫ್ಲೆಕ್ಸ್, ಬ್ಯಾನರ್‌ಗಳು ಅಳವಡಿಸಲಾಗಿತ್ತು.

ಮಹಂತ ಶಿವಾಚಾರ್ಯ ಸ್ವಾಮೀಜಿ, ಪ್ರಣಾವನಂದ ಸ್ವಾಮೀಜಿ, ಹಿಂದೂ ಸಮಾಜ್ಯೋತ್ಸವ ಸಮಿತಿ ಅಧ್ಯಕ್ಷ ಎಸ್‌.ಎನ್.ರಘುನಾಥ್, ಗೌರವಾಧ್ಯಕ್ಷ ನಾಗರಾಜ್, ತಬಲಾ ನಾರಾಯಣಪ್ಪ, ನಾ.ಮುನಿರಾಜು, ಸಂಸದ ಎಂ.ಮಲ್ಲೇಶ್ ಬಾಬು, ಮಾಜಿ ಸಂಸದ ಎಸ್‌.ಮುನಿಸ್ವಾಮಿ, ಮಾಜಿ ಶಾಸಕ ಕೆ.ಎಸ್. ಮಂಜುನಾಥಗೌಡ, ಮುಖಂಡರಾದ ಜೆ.ಇ.ರಾಮೇಗೌಡ, ಹೂಡಿ ವಿಜಯಕುಮಾರ್‍, ಆರ್‍.ಪ್ರಭಾಕರ್‍, ಹರೀಶ್, ರಾಮೇಗೌಡ ಸೇರಿದಂತೆ ಹಾಗೂ ಕಾರ್ಯಕರ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.