ಮಾಲೂರು: ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಜನದಟ್ಟಣೆ ಹೆಚ್ಚುತ್ತಿದೆ. ಇದರೊಂದಿಗೆ ವಾಹನಗಳ ಸಂಖ್ಯೆ ಏರಿಕೆಯಾಗುತ್ತಿದೆ. ಪೊಲೀಸ್ ಇಲಾಖೆ ನಿರ್ಲಕ್ಷ್ಯದಿಂದ ಸುಗಮ ಸಂಚಾರಕ್ಕೆ ತೊಂದರೆ ಆಗಿದೆ.
ಪಟ್ಟಣದ ಮುಖ್ಯ ವೃತ್ತಗಳಲ್ಲಿ ಸಂಚಾರ ದೀಪದ ವ್ಯವಸ್ಥೆ ಇಲ್ಲ. ಮಾರಿಕಾಂಬ ಸರ್ಕಲ್‌ನಲ್ಲಿರುವ ಇರುವ ಏಕೈಕ ಸಂಚಾರ ವ್ಯವಸ್ಥೆ ಕೆಟ್ಟು ನಿಂತಿದೆ. ಸಂಚಾರ ನಿಯಮ ಪಾಲನೆ ಇಲ್ಲದೆ ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆ ಮಾಡುವುದರಿಂದ ಪಾದಚಾರಿಗಳು ಪರದಾಡುವಂತಾಗಿದೆ. ಮಾರಿಕಾಂಬ ಸರ್ಕಲ್ ಬಳಿ ಖಾಸಗಿ ಕಂಪನಿಯಿಂದ ₹10ಲಕ್ಷ ವೆಚ್ಚದಲ್ಲಿ ಸಂಚಾರ ದೀಪ ಅಳವಡಿಸಲಾಗಿದೆ. ಆದರೆ, ಕೆಲವು ದಿನಗಳು ಮಾತ್ರ ಕಾರ್ಯ ನಿರ್ವಹಿಸಿ ನಂತರ ಹಾಳಾಗಿದೆ.
ವಾಹನ ನಿಲುಗಡೆ: ಸೂಕ್ತ ಜಾಗದಲ್ಲಿ ವಾಹನ ನಿಲ್ಲಿಸಲು ವ್ಯವಸ್ಥೆ ಇಲ್ಲ. ಮುಖ್ಯ ರಸ್ತೆಗಳ ಪಕ್ಕ ಹಾಗೂ ತಿರುವುಗಳಲ್ಲಿ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಸಂಚಾರ ವ್ಯವಸ್ಥೆಗೆ ತೊಂದರೆ ಆಗಿದೆ. ಪಾದಚಾರಿ ಮಾರ್ಗದಲ್ಲಿ ಅಕ್ರಮವಾಗಿ ಹೋಟಲ್, ಅಂಗಡಿಗಳು ತಲೆ ಎತ್ತುತ್ತಿದ್ದರೂ ಪುರಸಭೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಒಂದು ಕಡೆ ರಸ್ತೆ ಒತ್ತುವರಿಯಾಗಿ ಅಂಗಡಿಗಳು ಆರಂಭವಾಗುತ್ತಿವೆ.
ಅಪ್ರಾಪ್ತರ ವಾಹನ ಚಾಲನೆ: ಪಟ್ಟಣದಲ್ಲಿ 18ವರ್ಷಕ್ಕಿಂತ ಕೆಳಗಿನ ಅಪ್ರಾಪ್ತರು ವಾಹನ ಚಾಲನೆ ಮಾಡುತ್ತಿದ್ದಾರೆ. ವ್ಹೀಲೆ, ಅತಿ ವೇಗದ ಚಾಲನೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ.
ಸಂಚಾರ ಠಾಣೆ ಆರಂಭಿಸಿ: ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿ ಹೆಚ್ಚಾಗಿದೆ. ಅಲ್ಲದೆ, ಸಿಬ್ಬಂದಿ ಕೊರತೆಯೂ ಇದೆ. ಕೈಗಾರಿಕಾ ಪ್ರಾಂಗಣ ಸಂಖ್ಯೆ ಏರುತ್ತಿದೆ. ಹೆಚ್ಚಿನ ಸಿಬ್ಬಂದಿ ಅಗತ್ಯವಿದ್ದು, ಪ್ರತ್ಯೇಕ ಸಂಚಾರ ಪೊಲೀಸ್ ಠಾಣೆ ಪ್ರಾರಂಭಿಸಬೇಕೆಂಬುದು ಜನರ ಒತ್ತಾಯ.
ರಿಂಗ್ ರೋಡ್ ಕೊರತೆ: ರಾಜ್ಯ ಹೆದ್ದಾರಿ ಪಟ್ಟಣದಲ್ಲಿ ಹಾದು ಹೋಗುವುದರಿಂದ ವಾಹನ ಸಂಚಾರ ಮತ್ತು ಪಾದಚಾರಿಗಳಿಗೆ ತೊಂದರೆ ಆಗಿದೆ. ಪಟ್ಟಣದ ಮಧ್ಯ ಭಾಗದಲ್ಲಿ ರಾಜ್ಯ ಹೆದ್ದಾರಿ, ಬೆಂಗಳೂರು ಮೂಲಕ ಮಾಲೂರು ಮತ್ತು ತಮಿಳುನಾಡಿನ ಹೊಸೂರಿಗೆ ಸಂರ್ಪಕ ಕಲ್ಪಿಸುವ ರಸ್ತೆ ಹಾದು ಹೋಗಿದೆ. ಇದರಿಂದ ಹತ್ತು ಚಕ್ರಗಳ ದೊಡ್ಡ ವಾಹನ ಸಂಚಾರ ಹೆಚ್ಚಾಗಿದೆ. ಈ ಮುಖ್ಯ ರಸ್ತೆ ಅಕ್ಕಪಕ್ಕದಲ್ಲೇ ಪಟ್ಟಣದ ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪೊಲೀಸ್ ಠಾಣೆ ಮತ್ತು ಶಿಕ್ಷಣ ಇಲಾಖೆ, ತೋಟಗಾರಿಕೆ ಇಲಾಖೆ ಸೇರಿದಂತೆ ಖಾಸಗಿ ಮಾರಾಟ ಕೇಂದ್ರಗಳು ಇರುವುದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಹೆಚ್ಚಾಗಿ ಈ ರಸ್ತೆಯನ್ನೇ ಬಳಸುತ್ತಾರೆ.
ಪಟ್ಟಣದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿ ರಸ್ತೆ ಪಕ್ಕದಲ್ಲೇ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರಾಥಮಿಕ ಶಾಲೆಗಳು ಇರುವುದರಿಂದ ಶಾಲೆ ಆರಂಭ ಮತ್ತು ಬಿಡುವ ಸಂದರ್ಭದಲ್ಲಿ ಸಾವಿರಾರುವ ವಿದ್ಯಾರ್ಥಿಗಳು ಇದೇ ರಸ್ತೆ ಮೂಲಕ ಬಸ್ ನಿಲ್ದಾಣಕ್ಕೆ ಹೋಗುತ್ತಾರೆ.
ಶಿಥಿಲಾವಸ್ಥೆಯಲ್ಲಿರುವ ರೈಲೈ ಮೇಲ್ಸುತುವೆ: ಪಟ್ಟಣದ ಮಾಲೂರು-ಹೊಸೂರು ಮೇಲುತ್ಸುವೆ ಸಣ್ಣದಾಗಿ ಹಾಗೂ ಶಿಥಿಲಾವಸ್ಥೆಯಲ್ಲಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. 1973-74ರಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಾಣಗೊಂಡಿರುವ ಮೇಲ್ಸುತುವೆ 7ಮೀ ಅಗಲ ಇದೆ. 50 ವರ್ಷ ಹಳೆಯದಾದ ಹಾಗೂ ಶಿಥಿಲಗೊಂಡಿರುವ ಮೇಲ್ಸುತುವೆ ಮೇಲೆ ಹೆಚ್ಚು ಭಾರದ ವಾಹನಗಳು ಸಂಚರಿಸುತ್ತಿರುವುದರಿಂದ ವಾಹನ ಸವಾರರು ಭಯ ಭೀತರಾಗಿದ್ದಾರೆ. ಈ ವಾಹನ ದಟ್ಟಣೆಯಲ್ಲಿ ವಿದ್ಯಾರ್ಥಿಗಳು ಅಂಗೈಯಲ್ಲಿ ಜೀವ ಹಿಡಿದು ರಸ್ತೆ ದಾಟುವ ಪರಿಸ್ಥಿತಿ ಇದೆ.
ದ್ವಿಚಕ್ರ ವಾಹನದಲ್ಲಿ ಮಗಳನ್ನು ಕೂರಿಸಿಕೊಂಡು ಶಾಲೆಗೆ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಮಾರಿಕಾಂಬ ವೃತ್ತದಲ್ಲಿ ಕ್ರಾಸ್ ಮಾಡುವಾಗ 11 ವರ್ಷದ ಮಗಳು ಕೆಳಗೆ ಬಿದ್ದ ತಕ್ಷಣ ಹಿಂಬದಿಯಿಂದ ಬಂದ ಲಾರಿ ಹರಿಯಿತು. ನನ್ನ ಮಗಳು ಕಣ್ಣು ಮುಂದೆ ಸಾವಿಗೀಡಾದಳು– ಲಕ್ಷ್ಮಿದೇವಿ, ಮಾಲೂರು ಪಟ್ಟಣ ನಿವಾಸಿ
ಪಟ್ಟಣದ ಮುಖ್ಯ ವೃತ್ತಗಳಲ್ಲಿ ಸಂಚಾರ ದೀಪದ ವ್ಯವಸ್ಥೆ ಮಾಡದೆ ಇರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಪೊಲೀಸ್ ಇಲಾಖೆ ಎಚ್ಚರ ವಹಿಸಿ ಮುಖ್ಯ ರಸ್ತೆ ವೃತ್ತಗಳಲ್ಲಿ ಸಂಚಾರ ದೀಪ ಅಳವಡಿಸಬೇಕು– ದಿನೇಶ್ ಗೌಡ, ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಘಟಕದ ಅಧ್ಯಕ್ಷ
ಸುಗಮ ಸಂಚಾರಕ್ಕೆ ಅನುವು
ದೇವನಹಳ್ಳಿ– ಎಚ್.ಕ್ರಾಸ್ ವೇಮಗಲ್ ಮೂಲಕ ಮಾಲೂರು ಗಡಿ ಗ್ರಾಮ ಸಂಪಂಗೆರೆವರೆಗೂ ಮತ್ತು ಮಾಲೂರಿನಿಂದ ಹೊಸಕೋಟೆವರೆಗೂ ಕೈಗಾರಿಕಾ ಕಾರಿಡರ್ ಯೋಜನೆಯಡಿ 123 ಕಿ.ಮೀ 6 ಪಥ ರಸ್ತೆ ₹1823 ಕೋಟಿ ವೆಚ್ಚದಲ್ಲಿ ನಡೆಸಲು ಸದಸನದಲ್ಲಿ ಒಪ್ಪಿಗೆ ದೊರೆತಿದೆ.
ಎನ್ಎಚ್ ವತಿಯಿಂದ ₹30 ಕೋಟಿ ವೆಚ್ಚದಲ್ಲಿ ರೈಲ್ವೆ ಮೇಲ್ಸುತುವೆಯನ್ನು ನಾಲ್ಕುಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಇದರಿಂದ ಪಟ್ಟಣದಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಅಲ್ಲದೆ ರಿಂಗ್ ರಸ್ತೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.ಕೆ.ವೈ.ನಂಜೇಗೌಡ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.