ಮಾಲೂರು (ಕೋಲಾರ): ತಾಲ್ಲೂಕಿನ ಟೇಕಲ್ ಹೋಬಳಿಯ ಮಾಕಾರಹಳ್ಳಿಯಲ್ಲಿ ಸೋಮವಾರ ಕಲ್ಲು ಗಣಿಗಾರಿಕೆ ವೇಳೆ ಕಲ್ಲು ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ
ಕಲ್ಲು ಕ್ವಾರಿಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಆಂಧ್ರ ಪ್ರದೇಶದ ವೆಂಕಟೇಶ್ (65) ಮೃತ ವ್ಯಕ್ತಿ. ಮಧ್ಯಪ್ರದೇಶದ ಈಶ್ವರ್ (36) ಹಾಗೂ ತಮಿಳುನಾಡಿನ ಹರೀಶ್ (32) ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೋಲಾರದ ಜಾಲಪ್ಪ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಕಾರ್ಮಿಕನ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು.
ವೆಂಕಟೇಶ್
ಈ ಭಾಗದಲ್ಲಿ ಇತ್ತೀಚಿನ ವರ್ಷಗಲಲ್ಲಿ ನಡೆದಿರುವ ಐದನೇ ಘಟನೆ ಇದಾಗಿದೆ. ಈಗಾಗಲೇ ನಾಲ್ಕು ಘಟನೆಗಳಲ್ಲೂ ಪ್ರಾಣ ಹಾನಿ ಉಂಟಾಗಿತ್ತು.
ಬೆಳಿಗ್ಗೆ 8 ಗಂಟೆ ಸುಮಾರಿಗೆ ಬಂಡೆಕಲ್ಲು ಸ್ಫೋಟ ಮಾಡಲು ಡ್ರಿಲ್ಲಿಂಗ್ ಯಂತ್ರದ ಮೂಲಕ ಕೊರೆಯುವಾಗ ಕಲ್ಲುಗಳು ಕುಸಿದು ಬಿದ್ದಿವೆ. ಬಂಡೆ ಕೆಳಗಡೆ ಇದ್ದ ವೆಂಕಟೇಶಪ್ಪ ಕಲ್ಲಿನಡಿ ಸಿಲುಕಿದರು. ಕಲ್ಲು ಬಿದ್ದಿರುವ ರಭಸಕ್ಕೆ ಡ್ರಿಲ್ಲಿಂಗ್ ಯಂತ್ರ ಕೂಡ ಕಲ್ಲಿನ ಕ್ವಾರಿಯೊಳಗೆ ಸಿಲುಕಿಕೊಂಡಿದೆ. ಸಂಜೆ ಸ್ಫೋಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು.
ಸ್ನೇಹ ಕಲ್ಲು ಕ್ವಾರಿಯಲ್ಲಿ ಕಲ್ಲು ಗಣಿಗಾರಿಕೆ ಗುತ್ತಿಗೆ ಪಡೆದವರ ಮೇಲೆ ಮಾಸ್ತಿ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ಮಾಸ್ತಿ ಸರ್ಕಲ್ ಇನ್‌ಸ್ಪೆಕ್ಟರ್ ಓಂ ಪ್ರಕಾಶ್ ಗೌಡ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
‘ಟೇಕಲ್ ಹೋಬಳಿಯಲ್ಲಿ ಕಲ್ಲು ಗಣಿಗಾರಿಕೆ ಹೆಚ್ಚಿದ್ದು, ಪದೇಪದೇ ಸಾವು ನೋವುಗಳು ಸಂಭವಿಸುತ್ತಿವೆ. ಕಲ್ಲು ಒಡೆಯಲು ಬೃಹತ್ ಯಂತ್ರಗಳು, ಸ್ಫೋಟಕ ಬಳಸಿದರೂ ಪೊಲೀಸರಾಗಲಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಾಗಲಿ ಕ್ರಮ ವಹಿಸುತ್ತಿಲ್ಲ. ಅರಣ್ಯ ಇಲಾಖೆ ನಿಯಮಗಳು, ಗಣಿ ಇಲಾಖೆ ನಿಯಮಗಳು, ಸ್ಫೋಟಕ ಬಳಕೆ ಕಾನೂನುಗಳನ್ನು ಉಲ್ಲಂಘಿಸುತ್ತಿದ್ದಾರೆ. ಸುತ್ತಲಿನ ರಸ್ತೆಗಳೂ ಹದಗೆಟ್ಟಿವೆ’ ಎಂದು ಸ್ಥಳೀಯರು ದೂರಿದ್ದಾರೆ.
ಕಳೆದ ವರ್ಷ ಜೂನ್‌ನಲ್ಲಿ ಟೇಕಲ್ ಸಮೀಪ ಹಳೇಪಾಳ್ಯಬೆಟ್ಟದಲ್ಲಿ ಕಲ್ಲು ಬಂಡೆ ಒಡೆಯುವ ಸಂದರ್ಭದಲ್ಲಿ ಹಿಟಾಚಿ ಮೇಲೆ ಬೃಹತ್ ಕಲ್ಲು ಬಂಡೆ ಬಿದ್ದು ಕೆಜಿಎಫ್ ತಾಲ್ಲೂಕಿನ ಕ್ಯಾಸಂಬಳ್ಳಿ ಗ್ರಾಮದ ಚಾಲಕ ಪ್ರವೀಣ್ (32) ಮೃತಪಟ್ಟಿದ್ದರು.
ಕಲ್ಲು ಸ್ಫೋಟ ಮಾಡಲು ಡ್ರಿಲ್ಲಿಂಗ್ ಮಾಡುತ್ತಿದ್ದರು. ಜಾಗ ಪರಿಶೀಲಿಸಿದಾಗ ಯಾವುದೇ ಸ್ಫೋಟಕ ಬಳಸಿರುವುದು ಪತ್ತೆಯಾಗಿಲ್ಲ. ಪ್ರಕರಣದ ಕುರಿತು ಇನ್‌ಸ್ಪೆಕ್ಟರ್ ಹಂತದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಗೂ ನೋಟಿಸ್ ನೀಡಿ ಘಟನೆ ಬಗ್ಗೆ ಸಮಗ್ರ ವರದಿ ಕೇಳಲಾಗಿದೆ ನಿಖಿಲ್ ಬಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.