ADVERTISEMENT

ಮಾವಿಗೆ ಬೆಂಬಲ ಬೆಲೆಗೆ ಆಗ್ರಹ: ರಾಷ್ಟ್ರೀಯ ಹೆದ್ದಾರಿಗೆ ಮಾವು ಸುರಿದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 7:16 IST
Last Updated 24 ಜೂನ್ 2025, 7:16 IST
   

ಕೋಲಾರ: ಮಾವಿನ ಧಾರಣೆ‌ ಕುಸಿದು ರೈತರು ಸಂಕಷ್ಟಕ್ಕೆ ಸಿಲುಕಿದ್ದರೂ ಸ್ಪಂದಿಸದ ರಾಜ್ಯ ಸರ್ಕಾರದ ವಿರುದ್ಧ ಮಾವು ಬೆಳೆಗಾರರು, ಹೋರಾಟಗಾರರು ಮಂಗಳವಾರ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾವು ಸುರಿದು ಪ್ರತಿಭಟನೆ ನಡೆಸಿದರು.

ಕೋಲಾರ ಹೊರವಲಯದ ಕೊಂಡರಾಜನಹಳ್ಳಿ ಬಳಿ ಹೆದ್ದಾರಿಯಲ್ಲಿ (ಎನ್ ಎಚ್- 75) ಟ್ರ್ಯಾಕ್ಟರ್'ನಲ್ಲಿ ತಂದು ಮಾವು ಸುರಿದರು. ಇದರಿಂದ ಸುಮಾರು ಅರ್ಧ ತಾಸು ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಆಂಧ್ರ ಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧೆಡೆ ತೆರಳಬೇಕಿದ್ದ ವಾಹನಗಳಿಗೆ‌ ಅಡಚಣೆ ಉಂಟಾಯಿತು. ನೂರಾರು ಸಂಖ್ಯೆಯಲ್ಲಿ ಪೊಲೀಸರು ಬಂದು ಪ್ರತಿಭಟನಕಾರರನ್ನು ಸ್ಥಳದಿಂದ ತೆರವುಗೊಳಿಸಲು ಪರದಾಡಿದರು.

ಪ್ರತಿಭಟನಕಾರರು ಮಾತನಾಡಿ, 'ಮಾವಿನ ಬೆಂಬಲ ಬೆಲೆಗಾಗಿ 20 ದಿನಗಳಿಂದ ಹೋರಾಟ ನಡೆಸಿದ್ದರೂ ರಾಜ್ಯ ಸರ್ಕಾರ ಸ್ಪಂದಿಸಿಲ್ಲ. ಮಾವಿನ ಸುಗ್ಗಿ ಮುಗಿಯುತ್ತಾ ಬರುತ್ತಿದ್ದರೂ ಬೆಂಬಲ ಬೆಲೆ ಘೋಷಿಸಿಲ್ಲ. ಧಾರಣೆ ಇಲ್ಲದೆ ಮಾವಿನ ಕಾಯಿಯನ್ನು ತೋಟದಲ್ಲೇ ಬಿಡಲಾಗಿದೆ. ಅದೀಗ ಕೊಳೆಯಲು ಆರಂಭಿಸಿದೆ. ರೈತರು ಬೀದಿಗೆ ಬಿದ್ದಿದ್ದಾರೆ' ಎಂದರು.

ADVERTISEMENT

ಆಂಧ್ರಪ್ರದೇಶ ಮಾದರಿಯಲ್ಲಿ ರಾಜ್ಯ ಸರ್ಕಾರ ಈ ಕೂಡಲೇ ಬೆಂಬಲ ಘೋಷಿಸಬೇಕು. ಇಲ್ಲದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆ ಬಂದ್ ಮಾಡುತ್ತೇವೆ. ವಿಧಾನಸೌಧ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದರು.

ಹೆದ್ದಾರಿ ತಡೆದಿದ್ದ ಕಾರಣ ಸಂಚಾರ ದಟ್ಟಣೆ ಉಂಟಾಗಿ ಒಂದು ಕಿ.ಮೀ ದೂರದವರೆಗೆ ವಾಹನಗಳು ನಿಂತಿದ್ದವು.

ಪ್ರತಿಭಟನೆಯಲ್ಲಿ ಜಿಲ್ಲಾ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನೀಲಟೂರು ಚಿನ್ನಪ್ಪ ರೆಡ್ಡಿ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಪಿ.ಆರ್.ಸೂರ್ಯನಾರಾಯಣ, ವಿ.ಗೀತಾ, ಪಾತಕೋಟೆ ನವೀನ್ ಕುಮಾರ್, ಮಾವು ಬೆಳೆಗಾರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.