
ಮುಳಬಾಗಿಲು: ನಗರದ ಹೊರವಲಯದ ಶ್ರೀನಿವಾಸಪುರ ರಸ್ತೆ ಪಕ್ಕದ ಕದ್ರೀಪುರ ಗ್ರಾಮದ ಬಳಿ ಶುಕ್ರವಾರ ಮುಸಲ್ಮಾನರ ಬೃಹತ್ ಇಜ್ತೆಮಾ (ಇಸ್ಲಾಮಿಕ್ ಸಮಾವೇಶ) ಹಮ್ಮಿಕೊಳ್ಳಲಾಯಿತು.
ಕದ್ರೀಪುರ ಬಳಿ ವಿಶಾಲವಾದ ಬಯಲಿನಲ್ಲಿ ಏರ್ಪಡಿಸಿದ್ದ ಸಮಾವೇಶದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಹಾಗೂ ಸುತ್ತಮುತ್ತಲಿನ ನಾನಾ ಜಿಲ್ಲೆಗಳಿಂದ 50 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.
ಮುಸ್ಲಿಮರು ವರ್ಷಕ್ಕೆ ಒಮ್ಮೆ ಹಮ್ಮಿಕೊಳ್ಳುವ ಈ ಸಮಾವೇಶದಲ್ಲಿ ಧಾರ್ಮಿಕ ಉಪದೇಶ, ಸಾಮೂಹಿಕ ಪ್ರಾರ್ಥನೆ, ಕುರಾನ್ ಬೋಧನೆ ಮತ್ತಿತರರ ಕಾರ್ಯಕ್ರಮಗಳು ನಡೆಯುತ್ತವೆ.
ಟ್ರಾಫಿಕ್ ನಿಯಂತ್ರಣಕ್ಕೆ ಸ್ವಯಂ ಸೇವಕರು: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭಾರಿ ಸಂಖ್ಯೆಯ ಜನರ ಸಂಚಾರದಿಂದಾಗಿ ಸಂಚಾರ ದಟ್ಟಣೆ ಉಂಟಾಗಿತ್ತು. ಇದರ ನಿಯಂತ್ರಣಕ್ಕಾಗಿ ಮುಸ್ಲಿಂ ಸ್ವಯಂ ಸೇವಕರು ರಸ್ತೆಗಿಳಿದರು.
ನಾನಾ ಕಡೆಗಳಿಂದ ಆಗಮಿಸಿದ್ದ ಧರ್ಮ ಪ್ರವರ್ತಕರು ಸಾಮೂಹಿಕ ಪ್ರಾರ್ಥನೆ ಹಾಗೂ ಉಪದೇಶಗಳನ್ನು ತಿಳಿಸಿಕೊಟ್ಟರು.
ಶುಕ್ರವಾರ ಸಂಜೆವರೆಗೆ ಕಾರ್ಯಕ್ರಮ ನಡೆಯಿತು. ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.