ADVERTISEMENT

ಯಾವ ಲೆಕ್ಕಾಚಾರದಲ್ಲಿ ಸರ್ಕಾರ ಪತನವಾಗಲಿದೆ: ಮುನಿಸ್ವಾಮಿಗೆ ಕೊತ್ತೂರು ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2023, 13:52 IST
Last Updated 1 ಡಿಸೆಂಬರ್ 2023, 13:52 IST
<div class="paragraphs"><p>ಶಾಸಕ ಕೊತ್ತೂರು ಮಂಜುನಾಥ್‌  </p></div>

ಶಾಸಕ ಕೊತ್ತೂರು ಮಂಜುನಾಥ್‌

   

ಕೋಲಾರ: ‘ನಾವು 136 ಸದಸ್ಯರು ಇದ್ದೇವೆ. ಯಾವ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ಸರ್ಕಾರ ಮೂರು ತಿಂಗಳಲ್ಲಿ ಬಿದ್ದು ಹೋಗುತ್ತದೆ ಹೇಳಿ? ಏನು ನಮ್ಮ ಶಾಸಕರನ್ನು ಎಳೆದುಕೊಳ್ಳುತ್ತಾರೆಯೇ? ಸಂಸದ ಮುನಿಸ್ವಾಮಿ ಜನರಿಗೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಸರ್ಕಾರ ಮೂರು ತಿಂಗಳಲ್ಲಿ ಬೀಳಲಿದೆ, ಆರು ತಿಂಗಳಲ್ಲಿ ಬೀಳಲಿದೆ ಎಂಬ ಕನಸನ್ನು ಅವರು ಕಾಣುತ್ತಲೇ ಇರಲಿ’ ಎಂದು ಶಾಸಕ ಕೊತ್ತೂರು ಮಂಜುನಾಥ್‌ ಹೇಳಿದರು.

ನಗರದ ತಮ್ಮ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಮಗೂ ಹಿಂದೆ ಏಟು ಬಿದ್ದ ಅನುಭವ ಇದೆ. ಹೀಗಾಗಿ, ಹುಷಾರಾಗಿದ್ದೇವೆ. ಬಿಜೆಪಿಯಲ್ಲೇ ಕಿತ್ತಾಟ ಶುರುವಾಗಿದ್ದು, ಕೆಲವರು ಬೆಳಗಾವಿ ಅಧಿವೇಶನಕ್ಕೆ ಬರುವುದೇ ಅನುಮಾನ’ ಎಂದರು.

ADVERTISEMENT

‘ಡಿ.4ರಂದು ಬೆಳಗಾವಿಯಲ್ಲಿ ಆರಂಭವಾಗಲಿರುವ ಬಜೆಟ್‌ನಲ್ಲಿ ಕುಡಿಯುವ ನೀರಿನ ಯೋಜನೆಗಳ ಬಗ್ಗೆ ಪ್ರಸ್ತಾಪ ಮಾಡಲಿದ್ದೇನೆ. ಎತ್ತಿನಹೊಳೆ ಯೋಜನೆ, ಕೋಲಾರ ರಿಂಗ್‌ ರಸ್ತೆ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಅಭಿವೃದ್ಧಿ, ರಸ್ತೆ ಅಭಿವೃದ್ಧಿ, ಯುಜಿಡಿ ವ್ಯವಸ್ಥೆ, ರಸ್ತೆ ಸಂಪರ್ಕ ಕಲ್ಪಿಸುವ ಸಂಬಂಧ ಮಾತನಾಡುತ್ತೇನೆ. ನಗರ ಹೊರವಲಯಲ್ಲಿ ಎರಡು ಟ್ಯಾಂಕ್‌ ಹೆಚ್ಚುವರಿಯಾಗಿ ನಿರ್ಮಿಸಬೇಕಿದೆ’ ಎಂದು ವಿವರಿಸಿದರು.

‘ಕೋಲಾರದಲ್ಲಿ ಬರ ನಿರ್ವಹಣೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ. ಒಂದು ವಾಟ್ಸ್‌ಆ್ಯಪ್‌ ಗ್ರೂಪ್‌ ಮಾಡಿಕೊಂಡು ಮಾಹಿತಿ ತರಿಸಿಕೊಳ್ಳುತ್ತಿದ್ದೇನೆ. ನೀರಿನ ಸಮಸ್ಯೆ ತಿಳಿದುಕೊಂಡು ಪರಿಹಾರ ಒದಗಿಸಲಾಗುತ್ತಿದೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಸಂಬಂಧ ಹಣ ಜಿಲ್ಲಾಧಿಕಾರಿ ಖಾತೆಯಲ್ಲಿದೆ. ಬೆಳೆ ನಷ್ಟಕ್ಕೆ ಒಳಗಾದ ರೈತರಿಗೆ ಹೆಚ್ಚು ಪರಿಹಾರ ಸಿಗಬೇಕೆಂಬುದು ನನ್ನ ವಾದವಾಗಿದೆ. ಆದರೆ, ಕೇಂದ್ರದಿಂದ ಇನ್ನೂ ಅನುದಾನ ಬಂದಿಲ್ಲ. ಬಿಜೆಪಿ ಸಂಸದರು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ’ ಎಂದು ತಿಳಿಸಿದರು.

‘ಜಲಜೀವನ ಮಿಷನ್‌ (ಜೆಜೆಎಂ) ಯೋಜನೆಗೆ ಕೇಂದ್ರದಿಂದ ಹಣ ಬಿಡುಗಡೆ ಆಗಿಲ್ಲ. ಹಣ ಬಿಡುಗಡೆಯಾಗಿದ್ದರೆ ದಾಖಲೆ ತೋರಿಸಲಿ. ರಾಜ್ಯದಿಂದ ಹಣ ಬಿಡುಗಡೆಯಾಗಿರುವುದಕ್ಕೆ ದಾಖಲೆ ತೋರಿಸುತ್ತೇವೆ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.