ADVERTISEMENT

ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ: ಶಾಸಕ ನಾಗೇಶ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2018, 17:28 IST
Last Updated 22 ಜೂನ್ 2018, 17:28 IST
ಎಚ್‌.ನಾಗೇಶ್‌
ಎಚ್‌.ನಾಗೇಶ್‌   

ಕೋಲಾರ: ‘ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದು, ಕಾಂಗ್ರೆಸ್‌ ವರಿಷ್ಠರು ನನ್ನನ್ನು ಗುರುತಿಸಿ ಸಚಿವ ಸ್ಥಾನ ಕೊಡುತ್ತಾರೆಂಬ ನಿರೀಕ್ಷೆಯಲ್ಲಿದ್ದೇನೆ’ ಎಂದು ಜಿಲ್ಲೆಯ ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಎಚ್.ನಾಗೇಶ್ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನನಗೆ ಖಂಡಿತ ಸಚಿವ ಸ್ಥಾನ ಸಿಗುತ್ತದೆ ಎಂದು ಕ್ಷೇತ್ರದ ಜನರಿಗೆ ವಿಶ್ವಾಸವಿತ್ತು. ಆದರೆ, ಸಚಿವ ಸ್ಥಾನ ನೀಡದಿರುವುದರಿಂದ ಜನ ನನ್ನನ್ನು ಕ್ಷೇತ್ರದೊಳಗೆ ಸೇರಿಸುತ್ತಿಲ್ಲ. ಹೀಗಾಗಿ ಕಾಂಗ್ರೆಸ್‌ ವರಿಷ್ಠರ ಮೇಲೆ ಒತ್ತಡ ಹೇರಿದ್ದೇನೆ’ ಎಂದರು.

‘ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿದರೂ ಮಾಜಿ ಶಾಸಕ ಕೊತ್ತೂರು ಮಂಜುನಾಥ್‌ರ ನೆರವಿನಿಂದ ಗೆದ್ದು ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದೇನೆ. ಸರ್ಕಾರ ರಚನೆ ವೇಳೆ ಬಿಜೆಪಿ ಜತೆ ಹೋಗಿ ಪುನಃ ಕಾಂಗ್ರೆಸ್‌ನತ್ತ ಬಂದವರಿಗೆ ಸಚಿವ ಸಂಪುಟದಲ್ಲಿ ಅವಕಾಶ ಸಿಕ್ಕಿದೆ. ಆದರೆ, ನಿಷ್ಠೆ ಬದಲಿಸದೆ ಕಾಂಗ್ರೆಸ್‌ ಜತೆಗಿರುವ ನನಗೆ ಅವಕಾಶ ಕೈತಪ್ಪಿರುವುದಕ್ಕೆ ಬೇಸರವಾಗಿದೆ. ವರಿಷ್ಠರು ನನ್ನ ಸಹಾಯ ಸ್ಮರಿಸಿ ಎರಡನೇ ಹಂತದಲ್ಲಿ ಅವಕಾಶ ನೀಡುತ್ತಾರೆಂಬ ನಂಬಿಕೆಯಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ರಾಜಕೀಯ ಅನುಭವಿ: ‘ನಾಗೇಶ್ ಅವರು ಮೊದಲ ಬಾರಿಗೆ ಶಾಸಕರಾಗಿರಬಹುದು. ಆದರೆ, ಅವರಿಗೆ ಕ್ಷೇತ್ರದ ಪರಿಚಯವಿದೆ. ಅವರು ರಾಜಕೀಯವಾಗಿ ಹೆಚ್ಚು ಅನುಭವಿ. ಹೀಗಾಗಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡುತ್ತಾರೆ’ ಎಂದು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು.

‘ತಾಲ್ಲೂಕಿನಲ್ಲಿ ಯಾವ ಗ್ರಾಮದಲ್ಲಿ ಏನು ಕೆಲಸ ಆಗಬೇಕೆಂದು ಶಾಸಕರಿಗೆ ಗ್ರಾಮ ಪಂಚಾಯಿತಿವಾರು ಪಟ್ಟಿ ಕೊಟ್ಟಿದ್ದೇನೆ. ಆ ಪ್ರಕಾರ ಕ್ಷೇತ್ರದಲ್ಲಿ ಕೆಲಸ ಆಗುತ್ತದೆ. ಶಾಸಕರೇ ಅಧಿಕಾರ ಚಲಾಯಿಸುತ್ತಾರೆ. ಅವರ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಮತ್ತು ಸರ್ಕಾರದ ಕಾರ್ಯಕ್ರಮದಲ್ಲೂ ಭಾಗವಹಿಸುವುದಿಲ್ಲ. ಪಂಚಾಯಿತಿ ಸಭೆಗಳಿಗೂ ಹೋಗುವುದಿಲ್ಲ. ಗ್ರಾಮವಾರು ಪ್ರವಾಸದ ಸಂದರ್ಭದಲ್ಲಿ ಶಾಸಕರ ಜತೆಗಿರುತ್ತೇನೆ’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.