ADVERTISEMENT

19 ಶಾಸಕರ ಭವಿಷ್ಯನಾ? ಪ್ರಜ್ವಲ್, ರೇವಣ್ಣನಾ?- ಶಾಸಕ ಸಮೃದ್ಧಿ ಮಂಜುನಾಥ್‌ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2024, 15:03 IST
Last Updated 29 ಏಪ್ರಿಲ್ 2024, 15:03 IST
ಸಮೃದ್ಧಿ ಮಂಜುನಾಥ್‌
ಸಮೃದ್ಧಿ ಮಂಜುನಾಥ್‌   

ಕೋಲಾರ: 'ಜೆಡಿಎಸ್‌ನ 19 ಶಾಸಕರ ಭವಿಷ್ಯ ಮುಖ್ಯವೇ ಅಥವಾ ನಿಮ್ಮ ಕುಟುಂಬದ ರೇವಣ್ಣ ಹಾಗೂ ಪ್ರಜ್ವಲ್ ಭವಿಷ್ಯ ಮುಖ್ಯವೋ ತೀರ್ಮಾನಿಸಿ' ಎಂದು ಮುಳಬಾಗಿಲು ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಸೋಮವಾರ ಪಕ್ಷದ ವರಿಷ್ಠರಾದ ಎಚ್‌.ಡಿ.ದೇವೇಗೌಡ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದ್ದಾರೆ.

ರಾಜ್ಯದ ಜನತೆಯ ಮುಂದೆ ತಲೆ ತಗ್ಗಿಸುವಂಥ ಕೆಲಸ ಮಾಡಿದವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಪಕ್ಷದ ಘನತೆ ಉಳಿಸಬೇಕು  ಎಂದು ಒತ್ತಾಯಿಸಿರುವ ಪೋಸ್ಟ್‌ ಅನ್ನು ಫೇಸ್‌ ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಪ್ರಜ್ವಲಿಸುತ್ತಿರುವ 'ಹಾಸನ ಲೀಲೆಗಳು' ವರದಿಗಳಿಂದ ಪಕ್ಷದ ಸಾಮಾನ್ಯ ಕಾರ್ಯಕರ್ತರು ಮುಜುಗರಕ್ಕೆ ಒಳಗಾಗಿದ್ದಾರೆ. ಪಕ್ಷದ ಹೆಸರು ಹೇಳಲೂ ಹೇಸಿಗೆ ಎನಿಸುವಂಥ ಸ್ಥಿತಿ ಬಂದಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

'ಮಾಧ್ಯಮದವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾಗದ ದಯನೀಯ ಪರಿಸ್ಥಿತಿ ಮೊದಲ ಬಾರಿ ಶಾಸಕನಾಗಿರುವ ನನಗೆ ಬಂದಿದೆ. ಈ ಕಷ್ಟಕರ ಸನ್ನಿವೇಶ ಎದುರಿಸುವ ಸಾಮಾನ್ಯ ಕಾರ್ಯಕರ್ತರ ಪರಿಸ್ಥಿತಿ ಬಗ್ಗೆ ಸ್ವಲ್ಪ ಯೋಚಿಸಿ' ಎಂದು ಅವರು ಕೇಳಿದ್ದಾರೆ.

ಪಕ್ಷದ ವರಿಷ್ಠ, ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ರಾಜ್ಯ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕಾದ ಸಮಯ ಇದಾಗಿದೆ ಎಂದು ಸಮೃದ್ಧಿ ಮಂಜುನಾಥ್‌ ಅಭಿಪ್ರಾಯಪಟ್ಟಿದ್ದಾರೆ.

‘ಆರೋಪಿಗಳ ಸ್ಥಾನದಲ್ಲಿರುವ ರೇವಣ್ಣ ಮತ್ತು ಪ್ರಜ್ವಲ್ ಅವರನ್ನು ಪಕ್ಷದಿಂದ ಉಚ್ಚಾಟಿಸಿ ಪಕ್ಷದ ಸಿದ್ಧಾಂತಗಳನ್ನು ಉಳಿಸಿ ಕಾರ್ಯಕರ್ತರು ಮತ್ತು ನಮ್ಮನ್ನು ಮುಜುಗರದಿಂದ ಪಾರು ಮಾಡಿ’ ಎಂದು ಅವರು ಕೋರಿದ್ದಾರೆ. 

‘ನಿಮ್ಮ ತೀರ್ಮಾನದ ಮೇಲೆ ಪಕ್ಷದ ಮುಂದಿನ ಭವಿಷ್ಯ ನಿಂತಿದೆ ಎಂಬುದನ್ನು ಮತ್ತೊಮ್ಮೆ ತಿಳಿಸಲು ಬಯಸುತ್ತೇನೆ’ ಎಂದು ಅವರು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.