ADVERTISEMENT

ಮಳೆಯಲ್ಲೇ ಶಾಸಕಿ ರೂಪಕಲಾ ಧರಣಿ

ಕೆಜಿಎಫ್‌ನ ಅಶೋಕನಗರ ರಸ್ತೆ ವಿಸ್ತರಣೆಗೆ ಆಗ್ರಹ: ರಸ್ತೆತಡೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 15:35 IST
Last Updated 24 ಸೆಪ್ಟೆಂಬರ್ 2019, 15:35 IST
ಕೆಜಿಎಫ್‌ನ ಅಶೋಕನಗರ ರಸ್ತೆ ವಿಸ್ತರಣೆ ಕಾಮಗಾರಿ ಪೂರ್ಣಗೊಳಿಸಲು ಆಗ್ರಹಿಸಿ ಸಾರ್ವಜನಿಕರು ಕಾಂಗ್ರೆಸ್‌ ಶಾಸಕಿ ಎಂ.ರೂಪಕಲಾ ನೇತೃತ್ವದಲ್ಲಿ ಕೋಲಾರದಲ್ಲಿ ಮಂಗಳವಾರ ಪಿಡಬ್ಲ್ಯೂಡಿ ಕಚೇರಿ ಎದುರು ಧರಣಿ ನಡೆಸಿದರು.
ಕೆಜಿಎಫ್‌ನ ಅಶೋಕನಗರ ರಸ್ತೆ ವಿಸ್ತರಣೆ ಕಾಮಗಾರಿ ಪೂರ್ಣಗೊಳಿಸಲು ಆಗ್ರಹಿಸಿ ಸಾರ್ವಜನಿಕರು ಕಾಂಗ್ರೆಸ್‌ ಶಾಸಕಿ ಎಂ.ರೂಪಕಲಾ ನೇತೃತ್ವದಲ್ಲಿ ಕೋಲಾರದಲ್ಲಿ ಮಂಗಳವಾರ ಪಿಡಬ್ಲ್ಯೂಡಿ ಕಚೇರಿ ಎದುರು ಧರಣಿ ನಡೆಸಿದರು.   

ಕೋಲಾರ:ಕೆಜಿಎಫ್‌ನ ಅಶೋಕನಗರ ರಸ್ತೆ ವಿಸ್ತರಣೆ ಕಾಮಗಾರಿ ಪೂರ್ಣಗೊಳಿಸಲು ಆಗ್ರಹಿಸಿ ಕಾಂಗ್ರೆಸ್‌ ಶಾಸಕಿ ಎಂ.ರೂಪಕಲಾ ಹಾಗೂ ಸಾರ್ವಜನಿಕರು ಇಲ್ಲಿನ ಮೆಕ್ಕೆ ವೃತ್ತದಲ್ಲಿ ಮಂಗಳವಾರ ಸಂಜೆ ಧಾರಾಕಾರ ಮಳೆ ನಡುವೆಯೂ ರಸ್ತೆತಡೆ ಮಾಡಿ ಧರಣಿ ನಡೆಸಿದರು.

‘ಅಶೋಕನಗರ ರಸ್ತೆ ವಿಸ್ತರಣೆಗೆ 2014ರಲ್ಲೇ ಅನುದಾನ ಬಿಡುಗಡೆಯಾಗಿ ಸ್ವಲ್ಪ ಕಾಮಗಾರಿ ನಡೆದಿದೆ. ಆದರೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಬಾಕಿ ಕಾಮಗಾರಿ ಪೂರ್ಣಗೊಳಿಸಲು ವಿಳಂಬ ಮಾಡುತ್ತಿದ್ದಾರೆ. ಇದರ ಹಿಂದೆ ಕೆಲ ಪ್ರಭಾವಿಗಳ ಒತ್ತಡವಿದೆ’ ಎಂದು ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಪಿಡಬ್ಲ್ಯೂಡಿ ಕಚೇರಿ ಎದುರು ನಡೆದ ಹೋರಾಟಕ್ಕೆ ಅಧಿಕಾರಿಗಳು ಸ್ಪಂದಿಸದಿದ್ದರಿಂದ ಆಕ್ರೋಶಗೊಂಡ ಸಾರ್ವಜನಿಕರು ರೂಪಕಲಾ ನೇತೃತ್ವದಲ್ಲಿ ಮಳೆಯನ್ನೂ ಲೆಕ್ಕಿಸದೆ ಮೆಕ್ಕೆ ವೃತ್ತದಲ್ಲಿ ಧರಣಿ ಕುಳಿತರು.

ADVERTISEMENT

‘ಕೆಜಿಎಫ್‌ನ ರಾಬರ್ಟಸನ್‌ಪೇಟೆಯ ಎಂ.ಜಿ ವೃತ್ತದಿಂದ ಸ್ಕೂಲ್ ಆಫ್ ಮೈನ್ಸ್‌ವರೆಗೆ ರಸ್ತೆ ನಿರ್ಮಾಣಕ್ಕಾಗಿ ರಸ್ತೆ ಬದಿಯ ಅಂಗಡಿ ಹಾಗೂ ಮನೆ ಮಾಲೀಕರು ಸೇರಿದಂತೆ 177 ಮಂದಿಗೆ ನೋಟಿಸ್ ಜಾರಿ ಮಾಡಿ ತೆರವುಗೊಳಿಸಲಾಗಿತ್ತು. ಈ ಪೈಕಿ 15 ಮಂದಿ ನ್ಯಾಯಾಲಯದ ಮೆಟ್ಟಿಲೇರಿ ಕಾಮಗಾರಿಗೆ ಅಡ್ಡಿಪಡಿಸುತ್ತಿದ್ದಾರೆ’ ಎಂದು ರೂಪಕಲಾ ದೂರಿದರು.

‘ಎಂ.ಜಿ ವೃತ್ತದಿಂದ ಸ್ಕೂಲ್ ಆಫ್ ಮೈನ್ಸ್‌ವರೆಗೆ 1.82 ಕಿ.ಮೀ ಜೋಡಿ ರಸ್ತೆ ನಿರ್ಮಾಣಕ್ಕೆ ಸರ್ಕಾರ ₹ 9.50 ಕೋಟಿ ಮಂಜೂರು ಮಾಡಿದೆ. ಸ್ಕೂಲ್‌ ಆಫ್‌ ಮೈನ್ಸ್‌ನಿಂದ ಅಶೋಕನಗರ ಗೇಟ್‌ವರೆಗೆ ಕಾಮಗಾರಿ ನಡೆದಿದೆ. 200 ಮೀಟರ್‌ ಕಾಮಗಾರಿ ಬಾಕಿಯಿದ್ದು, ಸಾರ್ವಜನಿಕರ ಓಡಾಟಕ್ಕೆ ಹಾಗೂ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ’ ಎಂದು ಹೇಳಿದರು.

ಪಿಡಬ್ಲ್ಯೂಡಿ ನಾಟಕ: ‘ರಸ್ತೆ ವಿಸ್ತರಣೆ ಸಂಬಂಧ 15 ಮಂದಿ ಕಟ್ಟಡ ಮಾಲೀಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಬಳಿಕ ತಡೆಯಾಜ್ಞೆ ತೆರವುಗೊಳಿಸಿದ ನ್ಯಾಯಾಲಯ ಸ್ಥಳ ಪರಿಶೀಲನೆ ಮಾಡಿ ಬಾಕಿ ಕಾಮಗಾರಿ ಪೂರ್ಣಗೊಳಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದೆ. ಈ ಸಂಬಂಧ ಜಿಲ್ಲಾಧಿಕಾರಿ ಜತೆ ಚರ್ಚಿಸಿದ್ದು, ಪಿಡಬ್ಲ್ಯೂಡಿ ಅಧಿಕಾರಿಗಳು ಕಡತ ಕಳುಹಿಸಿಕೊಟ್ಟರೆ ಸಹಿ ಮಾಡುವುದಾಗಿ ಹೇಳಿದ್ದಾರೆ. ಆದರೆ, ಪಿಡಬ್ಲ್ಯೂಡಿ ಅಧಿಕಾರಿಗಳು ಕಡತ ಬಚ್ಚಿಟ್ಟು ನಾಟಕವಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ಅಧಿಕಾರಿಗಳು ಜನಪರವಾಗಿ ಕೆಲಸ ಮಾಡುವುದು ಬಿಟ್ಟು ರಾಜಕಾರಣಿಗಳು ಹಾಗೂ ಪ್ರಭಾವಿಗಳ ಪರ ಕೆಲಸ ಮಾಡುತ್ತಿದ್ದಾರೆ. ಬಾಕಿ ಕಾಮಗಾರಿ ಆರಂಭಿಸುವವರೆಗೂ ಹೋರಾಟ ಮುಂದುವರಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನಾರಾಯಣರೆಡ್ಡಿ, ಕೆಜಿಎಫ್‌ ನಗರಸಭೆ ಮಾಜಿ ಸದಸ್ಯ ನಿಜಾಮ್ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.