ADVERTISEMENT

ನಕಲಿ ರೈತ ಮುಖಂಡರ ಆಟಾಟೋಪ: ಬಡಗಲಪುರ ನಾಗೇಂದ್ರ ಗುಡುಗು

ಹಸಿರು ಶಾಲು ಹಾಕಿಕೊಂಡು ಹಣ ವಸೂಲಿ: ಬಡಗಲಪುರ ನಾಗೇಂದ್ರ ಗುಡುಗು

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 14:42 IST
Last Updated 19 ಜನವರಿ 2021, 14:42 IST
ಕೋಲಾರದಲ್ಲಿ ಮಂಗಳವಾರ ನಡೆದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರ ಸಭೆಯಲ್ಲಿ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿದರು.
ಕೋಲಾರದಲ್ಲಿ ಮಂಗಳವಾರ ನಡೆದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರ ಸಭೆಯಲ್ಲಿ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿದರು.   

ಕೋಲಾರ: ‘ಜಿಲ್ಲೆಯಲ್ಲಿ ಹಲವರು ಹಸಿರು ಶಾಲು ಹಾಕಿಕೊಂಡು ರೈತರ ಹೆಸರು ಜಪಿಸುತ್ತಾ ಅಡ್ಡ ದಾರಿಯಲ್ಲಿ ಹಣ ವಸೂಲಿ ದಂಧೆ ನಡೆಸುತ್ತಿದ್ದಾರೆ. ಅಂತಹ ನಕಲಿ ರೈತ ಮುಖಂಡರ ಆಟಾಟೋಪಕ್ಕೆ ಕಡಿವಾಣ ಹಾಕಿ’ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ (ಪುಟ್ಟಣ್ಣಯ್ಯ ಬಣ) ಬಡಗಲಪುರ ನಾಗೇಂದ್ರ ಗುಡುಗಿದರು.

ಇಲ್ಲಿ ಮಂಗಳವಾರ ನಡೆದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ಕೆಲ ಮಂದಿ ರೈತ ಸಂಘ ಮತ್ತು ಹಸಿರು ಸೇನೆಯ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಸಹಿಸುವುದಿಲ್ಲ. ಕಪಟಿ ರೈತ ಮುಖಂಡರ ವಸೂಲಿ ದಂಧೆಗೆ ಅವಕಾಶ ನೀಡಬಾರದು’ ಎಂದರು.

‘ದೇಶ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರಕ್ಕೆ ಅಧಿಕಾರಕ್ಕೆ ಬಂದ ಮೇಲೆ ಗಣರಾಜ್ಯಕ್ಕೆ ಧಕ್ಕೆಯಾಗಿದೆ. ಸಂವಿಧಾನ ಬದಲಿಸುವ ಸಂಚು ನಡೆಯುತ್ತಿದೆ. ಜನವಿರೋಧಿ ಕಾನೂನುಗಳ ಜಾರಿಗೆ ಅವಕಾಶ ನೀಡಬಾರದು. ರೈತರ ಹೋರಾಟದ ಸ್ವರೂಪ ತೀವ್ರಗೊಳಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಕೃಷಿ ಮಸೂದೆ, ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರುದ್ಧ ದೆಹಲಿಯಲ್ಲಿ ಹೋರಾಟ ನಡೆಯುತ್ತಿದೆ. ಈ ಹೋರಾಟ ಬೆಂಬಲಿಸಿ ಬೆಂಗಳೂರಿನಲ್ಲಿ ಜ.26ರಂದು ಟ್ರಾಕ್ಟರ್ ಪರೇಡ್‌ ಹಮ್ಮಿಕೊಂಡಿದ್ದು, ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಕೋರಿದರು.

‘ಸರ್ಕಾರ ರೈತರ ಸಂಪತ್ತನ್ನು ಬಂಡವಾಳಶಾಹಿಗಳಿಗೆ ಮಾರಲು ಅನುಕೂಲಕರ ಕಾನೂನು ಜಾರಿಗೆ ತರಲು ಹೊರಟಿದೆ. ದೆಹಲಿಯ ಹೋರಾಟ ಇಡೀ ಜಗತ್ತಿನ ಗಮನ ಸೆಳೆದಿದ್ದು, ಹೋರಾಟಕ್ಕೆ ಜನಸಾಗರವೇ ಹರಿದು ಬರುತ್ತಿದೆ. ದೇಶದಲ್ಲಿ ಶೇ 68ರಷ್ಟು ರೈತರು ಇದ್ದಾರೆ. ರೈತರು ಶ್ರಮ ಜೀವಿಗಳಾಗಿದ್ದು, ಎಷ್ಟೇ ಕಷ್ಟ ಬಂದರೂ ಶ್ರಮ ಬಿಡಲ್ಲ. ರೈತರಿಗೆ ಸರ್ಕಾರಗಳು ಸಹಕರಿಸದಿರುವುದು ವಿಷಾದಕರ’ ಎಂದು ಕಳವಳ ವ್ಯಕ್ತಪಡಿಸಿದರು.

ದಬ್ಬಾಳಿಕೆ: ‘ರೈತರ ಮೇಲೆ ಹಿಂದಿನಿಂದಲೂ ದಬ್ಬಾಳಿಕೆ ನಡೆಯುತ್ತಿದೆ. ಬಂಡವಾಳಶಾಹಿಗಳು ದೇಶ ಲೂಟಿ ಮಾಡುತ್ತಿದ್ದಾರೆ. ಇದರ ವಿರುದ್ಧ ನಡೆಯುತ್ತಿರುವ ಚಳವಳಿಗೆ ಬಿಜೆಪಿ ಅಂಗ ಸಂಸ್ಥೆಗಳಿಂದ ಮತ್ತು ವಿದೇಶದಿಂದ ಬೆಂಬಲ ವ್ಯಕ್ತವಾಗಿದೆ. ನಿವೃತ್ತ ಸೈನಿಕರು, ನಿವೃತ್ತ ಐಎಎಸ್ ಅಧಿಕಾರಿಗಳು ಜನವಿರೋಧಿ ಕಾನೂನುಗಳ ಪರಿಣಾಮ ಬಗ್ಗೆ ಪತ್ರದ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಆದರೂ ಸರ್ಕಾರ ಉದಾಸೀನ ತೋರುತ್ತಿದೆ’ ಎಂದು ಆರೋಪಿಸಿದರು.

‘ಜನ ಪ್ರಯತ್ನ ಮಾಡದಿದ್ದರೆ ಯಾವ ಕೆಲಸವೂ ಆಗಲ್ಲ. ಸರ್ಕಾರವು ದೇಶದಲ್ಲಿ ಕರಾಳ ಕಾನೂನುಗಳನ್ನು ಜಾರಿಗೆ ತರಲು ಮುಂದಾಗಿದೆ. ಇದರ ವಿರುದ್ಧ ಸಂಘಟಿತರ ಹೋರಾಟ ನಡೆಸಿದರೆ ಮಾತ್ರ ರೈತರಿಗೆ ನ್ಯಾಯ ದೊರಕಿಸಲು ಸಾಧ್ಯ’ ಎಂದು ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶಂಕರ್ ಕಿವಿಮಾತು ಹೇಳಿದರು.

ಪದಾಧಿಕಾರಿಗಳ ಆಯ್ಕೆ: ಸಭೆಯಲ್ಲಿ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಮರಗಲ್ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿಯಾಗಿ ನಾಗರಾಜ್, ಉಪಾಧ್ಯಕ್ಷರಾಗಿ ನಾಗರಾಜ್, ಸಂಚಾಲಕರಾಗಿ ಉದಯ್‌ಕುಮಾರ್, ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಹರಿಕುಮಾರ್, ಕಾರ್ಯದರ್ಶಿಯಾಗಿ ಯಲ್ಲಪ್ಪ, ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿ ಶಿವಚರಣ್ ಕುಮಾರ್, ಕಾನೂನು ಸಲಹೆಗಾರರಾಗಿ ಸತೀಶ್ ಆಯ್ಕೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.