ADVERTISEMENT

ಸಮಾಜದಲ್ಲಿ ನೈತಿಕ ಮೌಲ್ಯ ಕುಸಿಯುತ್ತಿವೆ

ನಾಟಕ ಪ್ರದರ್ಶನದಲ್ಲಿ ತಾ.ಪಂ ಅಧ್ಯಕ್ಷ ಆಂಜಿನಪ್ಪ ಕಳವಳ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2019, 13:25 IST
Last Updated 10 ಅಕ್ಟೋಬರ್ 2019, 13:25 IST
‘ಶ್ರೀಕೃಷ್ಣ ಸಂಧಾನ’ ಪೌರಾಣಿಕ ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ತಾ.ಪಂ ಅಧ್ಯಕ್ಷ ಎಂ.ಆಂಜಿನಪ್ಪ ಮಾತನಾಡಿದರು.
‘ಶ್ರೀಕೃಷ್ಣ ಸಂಧಾನ’ ಪೌರಾಣಿಕ ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ತಾ.ಪಂ ಅಧ್ಯಕ್ಷ ಎಂ.ಆಂಜಿನಪ್ಪ ಮಾತನಾಡಿದರು.   

ಕೋಲಾರ: ‘ವಿದ್ಯುನ್ಮಾನ ಮಾಧ್ಯಮಗಳು ಯುವಕ ಯುವತಿಯರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ವಾಹಿನಿಗಳು ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದ್ದರೂ ಪೋಷಕರು ಎಚ್ಚೆತ್ತುಕೊಳ್ಳುತ್ತಿಲ್ಲ’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ ವಿಷಾದಿಸಿದರು.

ಭಾರ್ಗವ ಕಲಾನಿಕೇತನ ಸಂಸ್ಥೆಯು ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಶ್ರೀಕೃಷ್ಣ ಸಂಧಾನ’ ಪೌರಾಣಿಕ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ‘ಸಮಾಜದ ಸ್ವಾಸ್ಥ್ಯ ಕಾಪಾಡುವ ಜವಾಬ್ದಾರಿ ಹೊತ್ತಿರುವ ವಿದ್ಯುನ್ಮಾನ ಮಾಧ್ಯಮ ಕ್ಷೇತ್ರವು ಯುವಕ ಯುವತಿಯರನ್ನು ದಾರಿ ತಪ್ಪಿಸುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಜೀವನಕ್ಕೆ ಅಗತ್ಯವಲ್ಲದ ವಿಚಾರಗಳನ್ನು ವಿದ್ಯುನ್ಮಾನ ಮಾಧ್ಯಮದಲ್ಲಿ ಹೆಚ್ಚಾಗಿ ಬಿತ್ತರಿಸಲಾಗುತ್ತಿದೆ. ಅಂತಹ ಅನಗತ್ಯ ಸರಕನ್ನೇ ಪೋಷಕರು ಮಕ್ಕಳಿಗೂ ತೋರಿಸುತ್ತಿದ್ದಾರೆ. ವಾಹಿನಿಗಳ ಹೊಣೆಗೇಡಿತನದಿಂದ ಸಮಾಜದಲ್ಲಿ ಅಪರಾಧ ಕೃತ್ಯ ಹೆಚ್ಚುತ್ತಿವೆ. ಮತ್ತೊಂದೆಡೆ ನೈತಿಕ ಮೌಲ್ಯಗಳು ಕುಸಿಯುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ರಂಗಭೂಮಿಯು ಸಮಾಜದ ಕನ್ನಡಿ ಇದ್ದಂತೆ. ಯುವಕ ಯುವತಿಯರನ್ನು ಸಂಪ್ರದಾಯ, ಕಟ್ಟುಪಾಡುಗಳ ಪರಿಧಿಯಿಂದ ಹೊರ ತರುವುದು ಸಮೂಹ ಮಾಧ್ಯಮದ ಜವಾಬ್ದಾರಿ. ಸ್ಥಳೀಯ ರಂಗ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ನಾಟಕಕಾರರು ಸಮಾಜದ ಅಭಿವೃದ್ಧಿಗೆ ಪೂರಕವಾದ ನಾಟಕ ಪ್ರದರ್ಶಿಸಬೇಕು’ ಎಂದು ಸಲಹೆ ನೀಡಿದರು.

‘ನಾಟಕ ಮತ್ತು ಜಾನಪದ ಕಲೆಗಳು ಸಮಾಜದಲ್ಲಿ ಬದಲಾವಣೆ ತರುತ್ತವೆ. ಜತೆಗೆ ಸಮಾಜ ತಿದ್ದುವ ಕೆಲಸ ಮಾಡುತ್ತವೆ. ಆದರೆ, ವಿದ್ಯುನ್ಮಾನ ಮಾಧ್ಯಮಗಳ ಭರಾಟೆಯಲ್ಲಿ ನಾಟಕಗಳು ಕೊಚ್ಚಿ ಹೋಗಿವೆ. ಟಿ.ವಿ, ಮೊಬೈಲ್, ಕಂಪ್ಯೂಟರ್‌ನ ಅತಿಯಾದ ಬಳಕೆಯಿಂದ ಜಾನಪದ ಕಲೆಗಳು ನೇಪಥ್ಯಕ್ಕೆ ಸರಿಯುತ್ತಿವೆ’ ಎಂದು ಅಭಿಪ್ರಾಯಪಟ್ಟರು.

ದೇಸಿತನ ಮೈಗೂಡಿಸಿಕೊಳ್ಳಿ: ‘ಮುಂದಿನ ಪೀಳಿಗೆಗೆ ಜಾನಪದ ಕಲೆಗಳನ್ನು ಉಳಿಸುವ ಅಗತ್ಯವಿದೆ. ವಿದ್ಯಾರ್ಥಿಗಳು ಸತ್ಯದ ಹಾದಿಯಲ್ಲಿ ನಡೆಯಬೇಕು. ಮೊಬೈಲ್‌ ಹಾಗೂ ಇಂಟರ್‌ನೆಟ್ ಸದುದ್ದೇಶಕ್ಕೆ ಬಳಸಬೇಕು. ಪಾಶ್ಚಿಮಾತ್ಯ ಸಂಸ್ಕೃತಿಯ ದಾಸರಾಗದೆ ದೇಸಿತನ ಮೈಗೂಡಿಸಿಕೊಳ್ಳಬೇಕು’ ಎಂದು ರಂಗ ಕಲಾವಿದ ವೆಂಕಟಸುಬ್ಬರಾವ್ ಕಿವಿಮಾತು ಹೇಳಿದರು.

‘ಪ್ರತಿಯೊಬ್ಬರಲೂ ಪ್ರತಿಭೆ ಇರುತ್ತದೆ. ಪ್ರತಿಭೆಯ ಅನಾವರಣಕ್ಕೆ ಸೂಕ್ತ ವೇದಿಕೆ ಕಲ್ಪಿಸುವುದು ಸಂಸ್ಥೆಗಳ ಜವಾಬ್ದಾರಿ. ನಟನೆ ಮೇಲೆ ಪ್ರೀತಿ, ಕಾಳಜಿಯಿದ್ದರೆ ಮಾತ್ರ ಕಲಾವಿದರಾಗಲು ಸಾಧ್ಯ. ಕಲೆ ಎಲ್ಲರನ್ನು ಕೈಬೀಸಿ ಕರೆಯುತ್ತದೆ. ಆದರೆ, ಕೆಲವರು ಮಾತ್ರ ಅದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅವರಿಗೆ ಪ್ರೋತ್ಸಾಹ ನೀಡಬೇಕು’ ಎಂದು ಮನವಿ ಮಾಡಿದರು.

ಅರಿವು ಮೂಡಿಸುತ್ತದೆ: ‘ರಂಗಭೂಮಿಯು ನಿಜ ಜೀವನದ ಬಗ್ಗೆ ಅರಿವು ಮೂಡಿಸುತ್ತದೆ. ಸಿನಿಮಾಗಳಲ್ಲಿ ನಿಜವನ್ನು ಸುಳ್ಳಾಗಿ ತೋರಿಸಬಹುದು. ಆದರೆ, ನಾಟಕದಲ್ಲಿ ನಿಜ ಜೀವನದ ಬಗ್ಗೆ ಪ್ರದರ್ಶನ ನಡೆಯುತ್ತದೆ. ವಿಚಾರ, ಘಟನೆಗಳ ಬಗ್ಗೆ ಆಧ್ಯಯನ ಮಾಡಿ ನಾಟಕ ರಚಿಸಲಾಗುತ್ತದೆ. ಸಂದರ್ಭಕ್ಕೆ ತಕ್ಕ ಪಾತ್ರಧಾರಿಗಳ ಪ್ರದರ್ಶನವು ಪ್ರೇಕ್ಷಕರನ್ನು ಮನರಂಜಿಸುವುದರ ಜತೆಗೆ ಎಚ್ಚರಗೊಳಿಸುವ ಕೆಲಸ ಮಾಡುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ಒಂಬುಡ್ಸ್‌ಮನ್‌ ಶ್ರೀರಾಮಯ್ಯ ಹೇಳಿದರು.

ಡಿ.ಚೇತನ್ ಪ್ರಸಾದ್ ನಿರ್ದೇಶನದ ಶ್ರೀಕೃಷ್ಣ ಸಂಧಾನ ನಾಟಕವನ್ನು ಪ್ರದರ್ಶಿಸಲಾಯಿತು. ವಕೀಲ ನಾಗೇಂದ್ರ, ಕಲಾವಿದರಾದ ಬಿ.ವಿ.ಗಿರಿ, ಸಂಜಯ್, ಕ್ರೀಡಾಪಟು ವಿ.ಮಾರಪ್ಪ, ಅಂತರಗಂಗೆ ವಿದ್ಯಾಸಂಸ್ಥೆ ಮುಖ್ಯಸ್ಥ ಶಂಕರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.