ADVERTISEMENT

ಸಂಸದ ಮುನಿಸ್ವಾಮಿ ಆರೋಪ ನಾಚಿಕೆಗೇಡು: ಕಾಂಗ್ರೆಸ್ ಸಂಚಾಲಕ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2019, 14:07 IST
Last Updated 22 ಡಿಸೆಂಬರ್ 2019, 14:07 IST

ಕೋಲಾರ: ‘ಸಂಸದ ಎಸ್‌.ಮುನಿಸ್ವಾಮಿ ಅವರು ಡಿಸಿಸಿ ಬ್ಯಾಂಕ್ ಹಾಗೂ ಕೋಚಿಮುಲ್‌ ಆಡಳಿತ ಮಂಡಳಿ ವಿರುದ್ಧ ಸುಳ್ಳು ಆರೋಪ ಮಾಡಿರುವುದು ನಾಚಿಕೆಗೇಡು’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಿಸಾನ್ ವಿಭಾಗದ ಮಾಜಿ ಸಂಚಾಲಕ ಅಶ್ವತ್ಥನಾರಾಯಣ ಕಿಡಿಕಾರಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಡಿಸಿಸಿ ಬ್ಯಾಂಕ್ ಮತ್ತು ಕೋಚಿಮುಲ್‌ ಅವಿಭಜಿತ ಕೋಲಾರ ಜಿಲ್ಲೆಯ ರೈತರ 2 ಕಣ್ಣುಗಳಿದ್ದಂತೆ. ನಷ್ಟದ ಕಾರಣಕ್ಕೆ ಬಾಗಿಲು ಮುಚ್ಚುವ ಸ್ಥಿತಿಗೆ ತಲುಪಿದ್ದ ಡಿಸಿಸಿ ಬ್ಯಾಂಕ್‌ಗೆ ನೂತನ ಆಡಳಿತ ಮಂಡಳಿ ಆರ್ಥಿಕ ಶಕ್ತಿ ತುಂಬಿ ಅಭಿವೃದ್ಧಿಪಡಿಸಿದೆ’ ಎಂದು ಹೇಳಿದರು.

‘ಡಿಸಿಸಿ ಬ್ಯಾಂಕ್‌ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಲಕ್ಷಾಂತರ ರೈತರು ಹಾಗೂ ಸ್ತ್ರೀಶಕ್ತಿ ಸಂಘಗಳ ಸದಸ್ಯರಿಗೆ ಸಾಲ ಕೊಟ್ಟು ಅವರ ಬದುಕು ಹಸನಾಗಿಸಿದೆ. ಅಲ್ಲದೇ, ಬ್ಯಾಂಕ್‌ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದೆ. ಇದನ್ನು ಸಹಿಸದ ಬಿಜೆಪಿ ಸಂಸದ ಮುನಿಸ್ವಾಮಿ ಅವರು ಬ್ಯಾಂಕ್‌ ವಿರುದ್ಧ ರಾಜಕೀಯ ದುರುದ್ದೇಶದಿಂದ ಸುಳ್ಳು ಆರೋಪ ಮಾಡಿದ್ದಾರೆ’ ಎಂದು ದೂರಿದರು.

ADVERTISEMENT

‘ಕೋಚಿಮುಲ್‌ ಅಧ್ಯಕ್ಷ ನಂಜೇಗೌಡರು ಗ್ರಾಮೀಣ ಭಾಗದಲ್ಲಿ ಹೈನೋದ್ಯಮ ಚಟುವಟಿಕೆ ಚುರುಕುಗೊಳಿಸಿದ್ದಾರೆ. ಕೋಚಿಮುಲ್‌ ಹಾಲಿಗೆ ವೈಜ್ಞಾನಿಕ ದರ ನೀಡಿಕೆ, ಪಶು ಆಹಾರಕ್ಕೆ ಸಹಾಯಧನ, ಹಾಲು ಉತ್ಪಾದಕರ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು, ಬೆಂಗಳೂರಿನಲ್ಲಿ ವಿದ್ಯಾರ್ಥಿನಿಲಯ ನಿರ್ಮಾಣದಂತಹ ಜನಪರ ಯೋಜನೆಗಳನ್ನು ರೂಪಿಸಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತುಟಿ ಬಿಚ್ಚಲಿಲ್ಲ: ‘ಕೇಂದ್ರ ಸರ್ಕಾರವು ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದ (ಆರ್‌ಸಿಇಪಿ) ಜಾರಿಗೆ ತರಲು ಮುಂದಾದಾಗ ಮುನಿಸ್ವಾಮಿ ಅವರು ತುಟಿ ಬಿಚ್ಚಲಿಲ್ಲ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಸಾವಿರಾರು ಕೋಟಿ ಅನುದಾನವನ್ನು ರಾಜ್ಯ ಸರ್ಕಾರ ಪ್ರವಾಹ ಪರಿಹಾರಕ್ಕೆ ಬಳಸಿಕೊಂಡಾಗ ಆ ಬಗ್ಗೆ ಮಾತನಾಡಲಿಲ್ಲ’ ಎಂದು ಟೀಕಿಸಿದರು.

‘ಮುನಿಸ್ವಾಮಿ ಅವರು ಕೋಚಿಮುಲ್‌ ಮತ್ತು ಡಿಸಿಸಿ ಬ್ಯಾಂಕ್‌ ವಿರುದ್ಧ ಆಧಾರರಹಿತ ಆರೋಪ ಮಾಡುವುದನ್ನು ನಿಲ್ಲಿಸಬೇಕು. ಅವರ ಸಂಸದ ಸ್ಥಾನದ ಘನತೆ ಅರಿತು ಜವಾಬ್ದಾರಿಯುತವಾಗಿ ಮಾತನಾಡಬೇಕು. ರೈತ ವಿರೋಧಿ ಧೋರಣೆ ಮುಂದುವರಿಸಿದರೆ ಜಿಲ್ಲೆಯ ಜನರೇ ತಕ್ಕ ಪಾಠ ಕಲಿಸುತ್ತಾರೆ’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.