ಕೋಲಾರ: ಎತ್ತಿನಹೊಳೆ ಯೋಜನೆಯಡಿ ಕೋಲಾರ ಜಿಲ್ಲೆಗೆ ಅಗತ್ಯವಿರುವ 2.8 ಟಿಎಂಸಿ ಅಡಿ ಕುಡಿಯುವ ನೀರನ್ನು ಒದಗಿಸುವಂತೆ ಜಿಲ್ಲಾಧಿಕಾರಿ ಎಂ.ಆರ್.ರವಿ, ಕರ್ನಾಟಕ ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿಯನ್ನು ಒತ್ತಾಯಿಸಿದರು.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಮಿತಿ ಸಭೆಯಲ್ಲಿ ಅವರು ಈ ಬೇಡಿಕೆ ಮಂಡಿಸಿದರು.
ಸಮಿತಿಯ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಮತ್ತು ಸದಸ್ಯರ ತಂಡ ಜಲಸಂಪನ್ಮೂಲ ಹಾಗೂ ಸಹಕಾರ ಇಲಾಖೆಗಳ ಭರವಸೆಗಳ ಕುರಿತು ಚರ್ಚೆ ನಡೆಸಲು ಕೋಲಾರಕ್ಕೆ ಭೇಟಿ ನೀಡಿತ್ತು.
ಪೂರ್ವ ನಿಗದಿಯಂತೆ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ಮತ್ತು ಕೃಷಿ ಮಾರುಕಟ್ಟೆ ಪ್ರಾಂಗಣಕ್ಕೆ ನಿವೇಶನ ಮಂಜೂರು ಮಾಡುವ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.
‘ಜಿಲ್ಲೆಯಲ್ಲಿ ಯಾವುದೇ ನೈಸರ್ಗಿಕ ಹರಿಯುವ ಜಲಮೂಲಗಳಿಲ್ಲ. ಮೂರು ಸಾವಿರಕ್ಕೂ ಹೆಚ್ಚು ಕೆರೆಗಳಲ್ಲಿ ಸಂಗ್ರಹವಾಗುವ ನೀರನ್ನೇ ಕೃಷಿ ಮತ್ತು ಜೀವನಕ್ಕೆ ಅವಲಂಬಿಸಲಾಗಿದೆ. ಪ್ರಸ್ತುತ ಕೆ.ಸಿ ವ್ಯಾಲಿ ಯೋಜನೆಯಡಿ ಕೆರೆಗಳನ್ನು ತುಂಬಿಸಲಾಗುತ್ತಿದೆಯಾದರೂ ಅಂತರ್ಜಲ ವೃದ್ಧಿಗೆ ಸಹಾಯಕವಾಗಿದೆ. ಕುಡಿಯುವ ನೀರಿನ ಸಮಸ್ಯೆ ಹಾಗೆಯೇ ಉಳಿದಿದೆ. ಜಿಲ್ಲೆಯಾದ್ಯಂತ ಕುಡಿಯುವ ನೀರು ಒದಗಿಸಲು ಕನಿಷ್ಠ 2.8 ಟಿಎಂಸಿ ಅಡಿ ನೀರಿನ ಅಗತ್ಯವಿದ್ದು, ಎತ್ತಿನಹೊಳೆ ಯೋಜನೆಯಡಿ ನೀರು ಒದಗಿಸಿ’ ಎಂದು ಕೋರಿದರು.
ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಯು ಎತ್ತಿನಹೊಳೆ ಯೋಜನೆಯ ಪ್ರಗತಿ ಕುರಿತು ಮಾಹಿತಿ ನೀಡಿದರು.
2014ರಲ್ಲಿ ಪ್ರಾರಂಭವಾದ ಈ ಯೋಜನೆ ಒಟ್ಟು ₹ 24 ಸಾವಿರ ಕೋಟಿ ವೆಚ್ಚದ್ದಾಗಿದೆ. ಜಲಾಶಯದಲ್ಲಿ ಗರಿಷ್ಠ 24 ಟಿಎಂಸಿ ಅಡಿ ನೀರು ಸಂಗ್ರಹವಾಗುವ ನಿರೀಕ್ಷೆ ಇದ್ದು, ಅದರಲ್ಲಿ 18 ಟಿಎಂಸಿ ಅಡಿ ನೀರನ್ನು ಕುಡಿಯುವ ಉದ್ದೇಶಕ್ಕೆ ಮೀಸಲಿಡಲು ಚಿಂತಿಸಲಾಗಿದೆ. ಉಳಿದ 10 ಟಿಎಂಸಿ ಅಡಿ ನೀರನ್ನು ಏಳು ಜಿಲ್ಲೆಗಳ ಕೆರೆಗಳನ್ನು ತುಂಬಿಸಲು ಬಳಸಲಾಗುವುದು ಎಂದು ತಿಳಿಸಿದರು.
ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದರೆ 2027ರ ಅಕ್ಟೋಬರ್ ವೇಳೆಗೆ ಕೋಲಾರಕ್ಕೆ ಕುಡಿಯುವ ನೀರು ಪೂರೈಕೆ ಸಾಧ್ಯವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಸಮಿತಿ ಸದಸ್ಯರಾದ ನಿರಾಣಿ ಹಣಮಂತ ರುದ್ರಪ್ಪ, ಕೆ.ಪ್ರತಾಪಾಸಿಂಹ ನಾಯಕ್, ಕೆ.ಎಸ್.ನವೀನ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎಂ.ಮಂಗಳಾ, ಉಪವಿಭಾಗಾಧಿಕಾರಿ ಡಾ.ಮೈತ್ರಿ. ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಸ್ಥಾಪಕ ನಿರ್ದೇಶಕ ಶಿವಾನಂದ್, ಮುಖ್ಯ ಎಂಜಿನಿಯರ್ ಆನಂದ್ ಇದ್ದರು.
ಕುಡಿಯುವ ನೀರಿನ ಬವಣೆ: ಡಿ.ಸಿ ಮನವಿ ಯೋಜನೆ ಪ್ರಗತಿ: 2027ಕ್ಕೆ ನೀರು ಪೂರೈಕೆ ನಿರೀಕ್ಷೆ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ನೇತೃತ್ವದ ಸಮಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.