ADVERTISEMENT

ವೈದ್ಯರೇ ಇಲ್ಲದ ಆಯುಷ್ ಆಸ್ಪತ್ರೆ

ಸಕಲ ಸೌಲಭ್ಯಗಳು ಇದ್ದರೂ ಸೇವೆಗೆ ಲಭ್ಯವಿಲ್ಲ ಅಂಬ್ಲಿಕಲ್ ಗ್ರಾಮದ ಚಿಕಿತ್ಸಾಲಯ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2020, 12:40 IST
Last Updated 10 ಏಪ್ರಿಲ್ 2020, 12:40 IST
ಅಂಬ್ಲಿಕಲ್ ಗ್ರಾಮದಲ್ಲಿನ ಆಯುರ್ವೇದ ಚಿಕಿತ್ಸಾಲಯ
ಅಂಬ್ಲಿಕಲ್ ಗ್ರಾಮದಲ್ಲಿನ ಆಯುರ್ವೇದ ಚಿಕಿತ್ಸಾಲಯ   

ನಂಗಲಿ: ಗ್ರಾಮೀಣ ಜನರ ಆರೋಗ್ಯ ಸಧಾರಣೆಗಾಗಿ ಹಾಗೂ ದೂರದ ಮುಳಬಾಗಿಲು ನಗರಕ್ಕೆ ಚಿಕಿತ್ಸೆಗಾಗಿ ಹೋಗುವುದನ್ನು ತಪ್ಪಿಸಲು ಪ್ರಾರಂಭಿಸಲಾದ ಅಂಬ್ಲಿಕಲ್ ಆಯುಷ್ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲ.

ವೈದ್ಯರ ಸೇವೆಯಿಲ್ಲದೆ, ಜನರು ಚಿಕಿತ್ಸೆಗಾಗಿ ಈ ಲಾಕ್‌ಡೌನ್‌ ಸಮಯದಲ್ಲಿ ಪರದಾಡುವಂತಾಗಿದೆ.

ಕೊತ್ತೂರು ಜಿ.ಮಂಜುನಾಥ್ ಅವರು ಶಾಸಕರಾಗಿದ್ದಾಗ ಜಿಲ್ಲಾ ಪಂಚಾಯಿತಿ ₹3 ಲಕ್ಷ ಅನುದಾನದಲ್ಲಿ ಈ ಆಸ್ಪತ್ರೆ ನಿರ್ಮಾಣ ಮಾಡಿದ್ದರು.

ADVERTISEMENT

ಆಸ್ಪತ್ರೆಯ ಕಟ್ಟಡ ಸುಸಜ್ಜಿತವಾಗಿದೆ. ಕಾಂಪೌಂಡ್‌ ಸಹ ಇದೆ. ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ, ರೋಗಿಗಳಿಗೆ ಹಾಸಿಗೆಗಳ ವ್ಯವಸ್ಥೆ, ವೈದ್ಯರ ಕೊಠಡಿ, ಔಷಧಿಗಳ ದಾಸ್ತಾನು ಕೊಠಡಿ ಹೀಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಹೊಂದಿದೆ.

13 ದಿವಸಗಳಿಂದ ವೈದ್ಯರೇ ಇಲ್ಲದೆ ಇರುವುದರಿಂದ ಆಸ್ಪತ್ರೆಯ ಸಹಾಯಕರೇ(ಕಾಂಪೌಂಡರ್‌) ವೈದ್ಯರಾಗಿ ರೋಗಿಗಳಿಗೆ ಔಷಧಿ ನೀಡುತ್ತಿದ್ದಾರೆ. ದಾಸ್ತಾನು ಕೊಠಡಿಯಲ್ಲಿ ಔಷಧಿಗಳು ದೂಳು ಹಿಡಿಯುತ್ತಿವೆ.

ಇಲ್ಲಿಂದ ಮುಳಬಾಗಿಲು ತಾಲ್ಲೂಕು ಕೇಂದ್ರದ ಆಸ್ಪತ್ರೆ ಸುಮಾರು 11 ಕಿ.ಮೀ., ನಂಗಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸುಮಾರು 10 ಕಿ.ಮೀ., ಗುಡಿಪಲ್ಲಿ ಹಾಗೂ ಬೈರಕೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳೂ ನಾಲ್ಕೈದು ಕಿ.ಮೀ. ದೂರ ಇವೆ. ನಿತ್ಯ ಬರುವ ರೋಗಿಗಳು ವೈದ್ಯಕೀಯ ಸೇವೆ ಇಲ್ಲದೆ ಹಿಂದಿರುಗುತ್ತಿದ್ದಾರೆ.

ವೈದ್ಯರ ನೇಮಿಸಲು ಕ್ರಮ

ಅಂಬ್ಲಿಕಲ್ ಗ್ರಾಮದಲ್ಲಿ ಇರುವ ಆಯುಷ್ ಆಸ್ಪತ್ರೆಗೆ ವಾರದಲ್ಲಿ ದಿನಕ್ಕೆ ಒಬ್ಬರಂತೆ ವೈದ್ಯರು ಬರುತ್ತಿದ್ದಾರೆ ಎಂದು ಗೊತ್ತಾಗಿದೆ. ಆಯುಷ್ ಇಲಾಖೆಯ ಜಿಲ್ಲಾ ಅಧಿಕಾರಿಗಳ ಜೊತೆ ಮಾತನಾಡಿ ಆಸ್ಪತ್ರೆಗೆ ಕಾಯಂ ವೈದ್ಯರನ್ನು ನೇಮಿಸಲು ಕ್ರಮಕೈಗೊಳ್ಳುತ್ತೇನೆ

ಸಿ.ಎಸ್.ವೆಂಕಟೇಶ್, ಕೋಲಾರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.