ADVERTISEMENT

ಬೈರಕೂರು: ಪ್ರತಿಭಾ ಕಾರಂಜಿ: ವಿವಿಧ ವೇಷ ತೊಟ್ಟು ಮಿಂಚಿದ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2024, 13:21 IST
Last Updated 4 ಸೆಪ್ಟೆಂಬರ್ 2024, 13:21 IST
ಮುಳಬಾಗಿಲು ತಾಲ್ಲೂಕಿನ ಬೈರಕೂರು ಗ್ರಾಮದಲ್ಲಿ ಬುಧವಾರ ನಡೆದ ಪ್ರತಿಭಾ ಕಾರಂಜಿಯಲ್ಲಿ ವಿದ್ಯಾರ್ಥಿಗಳು ನಾನಾ ವೇಷಗಳನ್ನು ತೊಟ್ಟು ಮಿಂಚಿದರು
ಮುಳಬಾಗಿಲು ತಾಲ್ಲೂಕಿನ ಬೈರಕೂರು ಗ್ರಾಮದಲ್ಲಿ ಬುಧವಾರ ನಡೆದ ಪ್ರತಿಭಾ ಕಾರಂಜಿಯಲ್ಲಿ ವಿದ್ಯಾರ್ಥಿಗಳು ನಾನಾ ವೇಷಗಳನ್ನು ತೊಟ್ಟು ಮಿಂಚಿದರು   

ಮುಳಬಾಗಿಲು: ಪೋಷಕರು ಹಾಗೂ ಶಿಕ್ಷಕರಿಂದ ಉತ್ತಮ ನೈತಿಕ ಮೌಲ್ಯಗಳನ್ನು ಕಲಿತು ಜೀವನದಲ್ಲಿ ರೂಡಿಸಿಕೊಂಡರೆ ಭವಿಷ್ಯದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಬಹುದು ಎಂದು ಗ್ರಾಮ ಪಂಚಾಯತಿ ಸರ್ವ ಸದಸ್ಯರ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಪೆತ್ತಾಂಡ್ಲಹಳ್ಳಿ ಪಿ.ವಿ.ಶಂಕರ್ ಹೇಳಿದರು.

ತಾಲ್ಲೂಕಿನ ಬೈರಕೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬುಧವಾರ ನಡೆದ ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಆಟ, ಪಾಠ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸದೃಡಗೊಳ್ಳಲಿದೆ ಎಂದು ತಿಳಿಸಿದರು.

ADVERTISEMENT

ಮಕ್ಕಳು ಯಾವುದೇ ಕಾರಣಕ್ಕೂ ಮೊಬೈಲ್ ಬಳಸಬಾರದು. ಮೊಬೈಲಿಂದ ನಿಮ್ಮ ಓದಿಗೆ ಆಡಚಣೆ ಉಂಟಾಗಿ ವಿದ್ಯಾಭ್ಯಾಸ ಕುಂಠಿತವಾಗಲಿದೆ. ಈ ಹಿಂದೆ ಮಕ್ಕಳು ದೂರದರ್ಶನ ನೋಡಲೂ ಸಹ ಪೋಷಕರು ಬಿಡುತ್ತಿರಲಿಲ್ಲ.ಆದರೆ ಇಂದು ಮಕ್ಕಳು ಮೊಬೈಲು ಕೊಡದೆ ಇದ್ದರೆ ಊಟಾನೂ ಮಾಡಲ್ಲ ಅಂತಹ ಕ್ಲಿಷ್ಟ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಪೋಷಕರು ಹಾಗೂ ಶಿಕ್ಷಕರು ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನು ಗುರುತಿಸಿ ಸಮಾಜದ ಮುಖ್ಯ ವಾಹಿನಿಗೆ ತರುವುದು ಮುಖ್ಯ ಕರ್ತವ್ಯ ಆಗಬೇಕು. ಶಾಲಾ ಹಂತದಿಂದಲೇ

ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸುವ ಕೆಲಸ ನಡೆಯಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ವಿವಿಧ ಬಗೆಯ ವೇಷ ಭೂಷಣಗಳನ್ನು ತೊಟ್ಟು ರಂಜಿಸಿದರು.

ಪಿ.ಎನ್.ಲಕ್ಷ್ಮೀನಾರಾಯಣ ಚಾರಿ, ಸಿಆರ್‌ಪಿ ವರದರಾಜು, ಗ್ರಾಮ ಪಂಚಾಯತಿ ಸದಸ್ಯ ಸುರೇಂದ್ರಬಾಬು ನಾಯ್ಡು, ಸುಮಲತಾ ಸುಬ್ರಮಣಿ, ಬೈರಕೂರು ಕ್ಲಸ್ಟರ್ ವ್ಯಾಪ್ತಿಯ ಎಲ್ಲಾ ಶಾಲೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.