ಮುಳಬಾಗಿಲು: ಮುಳಬಾಗಿಲು ನಗರದಿಂದ ಬೇತಮಂಗಲ ಕಡೆಗೆ ಹೋಗುವ ಮುಖ್ಯ ರಸ್ತೆಯ ಕಾಶೀಪುರ ಗೇಟಿನಿಂದ ಹೊನಗಾನಹಳ್ಳಿವರೆಗಿನ ರಸ್ತೆಯು ಗುಂಡಿಮಯವಾಗಿದೆ. ಇದರಿಂದಾಗಿ ಈ ರಸ್ತೆಯಲ್ಲಿ ಸಂಚರಿಸುವ ಜನಸಾಮಾನ್ಯರು ಜೀವ ಕೈಯಲ್ಲಿಡಿದು ಸಂಚರಿಸುವ ಅನಿವಾರ್ಯತೆ ಎದುರಾಗಿದೆ.
ತಾಲ್ಲೂಕಿನ ಕಾಶೀಪುರದಿಂದ ಬಂಗಾರಪೇಟೆ ಗಡಿಗೆ ಹೊಂದಿಕೊಂಡ ಹೊನಗಾನಹಳ್ಳಿವರೆಗಿನ ರಾಜ್ಯ ಹೆದ್ದಾರಿ ರಸ್ತೆಯು ಗುಟ್ಟಹಳ್ಳಿ, ಬೇತಮಂಗಲ ಮೂಲಕ ಕೆಜಿಎಫ್ , ವಿ.ಕೋಟೆ ಮತ್ತಿತರ ಕಡೆಗೆ ಸಂಪರ್ಕ ಕಲ್ಪಿಸುತ್ತದೆ. ಹೀಗಾಗಿ ಪ್ರತಿನಿತ್ಯ ಈ ರಸ್ತೆಯಲ್ಲಿ ನೂರಾರು ವಾಹನಗಳು ಸಂಚರಿಸುತ್ತವೆ. ಆದರೆ, ಗುಂಡಿಮಯವಾದ ರಸ್ತೆಯಲ್ಲಿ ವಾಹನ ಸವಾರರು ಗುಂಡಿ ತಪ್ಪಿಸಲು ಹೋಗಿ ಅಪಘಾತಕ್ಕೆ ಸಿಲುಕಿದ ಘಟನೆಗಳೂ ನಡೆದಿವೆ.
ರಸ್ತೆಯುದ್ದಕ್ಕೂ ಪಾದಚಾರಿ ಮಾರ್ಗದಲ್ಲಿ ಗಿಡಗಂಟಿಗಳು ಬೆಳೆದು ಪಾದಚಾರಿ ರಸ್ತೆಯೇ ಮಾಯವಾದಂತಾಗಿದೆ. ರಸ್ತೆ ಉದ್ದಕ್ಕೂ ಬಿದ್ದಿರುವ ಮೊಣಕಾಲು ಉದ್ದದ ಗುಂಡಿಗಳು, ರಸ್ತೆಯ ಒಡಲಿನಿಂದ ಮೇಲಕ್ಕೆದ್ದಿರುವ ಜಲ್ಲಿ ಕಲ್ಲುಗಳು ಮತ್ತು ಹಲವೆಡೆ ರಸ್ತೆಯು ಡಾಂಬರು ಕಾಣದೆ ದೂಳುಮಯವಾಗಿದೆ.
15 ಕಿಲೊಮೀಟರ್ ಉದ್ದದ ರಸ್ತೆಯು ಬಹುತೇಕ ಸಮಸ್ಯೆಗಳನ್ನು ಹೊದ್ದು ಮಲಗಿದ್ದು, ಪ್ರತಿನಿತ್ಯ ಸಂಚರಿಸುವ ಬಸ್ಸು, ಕಾರು, ಲಾರಿ, ಶಾಲಾ ವಾಹನಗಳು, ಹಾಲಿನ ವಾಹನಗಳು, ಆ್ಯಂಬುಲೆನ್ಸ್, ಟ್ರ್ಯಾಕ್ಟರ್ ಮತ್ತಿತರ ವಾಹನಗಳ ಸಂಚಾರದಿಂದ ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೀಡುವ ಸಾಧ್ಯತೆ ಇದೆ.
ರಸ್ತೆಯ ಗುಂಡಿಗಳಿಗೆ ಡಾಂಬರು ಹಾಕುವ ಹಾಗೂ ರಸ್ತೆಯ ಇಕ್ಕೆಲಗಳಲ್ಲಿನ ಪಾದಚಾರಿ ಮಾರ್ಗದಲ್ಲಿನ ಗಿಡಗಂಟಿಗಳ ಸ್ವಚ್ಛತೆಗೆ ಸಂಬಂಧಿಸಿದ ಇಲಾಖೆಗೆ ಸೂಚಿಸಲಾಗುವುದುವಿ.ಗೀತಾ, ತಹಶಿಲ್ದಾರ್
10-15 ವರ್ಷಗಳಿಂದ ಈ ರಸ್ತೆ ಅಭಿವೃದ್ಧಿಪಡಿಸಿಲ್ಲ. ಇದರಿಂದ ಶಾಲಾ ಮಕ್ಕಳು ವಯೋ ವೃದ್ಧರು ಗರ್ಭಿಣಿಯರು ಹಾಗೂ ಬಾಣಂತಿಯರು ರಸ್ತೆಯಲ್ಲಿ ಸಂಚರಿಸಲು ಭಯ ಪಡುವಂತಾಗಿದೆ. ಹೀಗಾಗಿ ಇನ್ನಾದರೂ ಅಪಘಾತಗಳು ಸಂಭವಿಸದಂತೆ ಅಧಿಕಾರಿಗಳು ಕ್ರಮ ವಹಿಸಬೇಕುನಾಗರಾಜ್, ಬೇತಮಂಗಲ ಮಾರ್ಗದ ವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.