ಕೋಲಾರ: ಮುಳಬಾಗಿಲು ತಾಲ್ಲೂಕಿನಲ್ಲಿರುವ ಐತಿಹಾಸಿಕ ದೇವಾಲಯಗಳು, ರಸ್ತೆ ಮಾರ್ಗಗಳು ಸೇರಿದಂತೆ ಇನ್ನು ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರದಲ್ಲೇ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಭರವಸೆ ನೀಡಿದರು.
ಜಿಲ್ಲಾಡಳಿತ ಭವನದಲ್ಲಿ ಬುಧವಾರ ನಡೆದ ಮುಳಬಾಗಿಲಿನ ನಾಗರಿಕ ವೇದಿಕೆ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಮುಳಬಾಗಿಲು ತಾಲ್ಲೂಕಿನ 8 ಐತಿಹಾಸಿಕ ದೇವಾಲಯಗಳನ್ನು ಅಭಿವೃದ್ಧಿಪಡಿಸಬೇಕು, ದೇವಾಲಯಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ವೇದಿಕೆಯ ಸದಸ್ಯರು ಮನವಿ ಮಾಡಿದರು.
ಆಗ ಜಿಲ್ಲಾಧಿಕಾರಿಯು, ಮುಜುರಾಯಿ ತಹಶೀಲ್ದಾರ್ ಜೊತೆ ಚರ್ಚಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದರು.
ಕೊಲದೇವಿ ಗರುಡ ದೇವಸ್ಥಾನ ಸೇರಿದಂತೆ ಇನ್ನಿತರ ದೇವಾಲಯಗಳಲ್ಲಿ ಅಭಿವೃದ್ಧಿ ನಿಟ್ಟಿನಲ್ಲಿ ವ್ಯವಸ್ಥಾಪನ ಸಮಿತಿ ರಚಿಸಲು ಸೂಚಿಸಿದರು.
ಸದಸ್ಯರು ಮಾತನಾಡಿ, ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಸುಸಜ್ಜಿತ ಆಸ್ಪತ್ರೆಗಳ ನಿರ್ಮಾಣವಾಗಬೇಕಾಗಿದೆ. ಮುಳಬಾಗಿಲು ಎಪಿಎಂಸಿ ಮಾರುಕಟ್ಟೆ ಒತ್ತುವರಿಯಾಗುತ್ತಿದ್ದು, ಆವರಣವನ್ನು ಸರ್ವೇ ನಡೆಸಿ ಕಾಂಪೌಂಡ್ ನಿರ್ಮಿಸಬೇಕೆಂದು ಕೋರಿದರು.
ಮುಳಬಾಗಿಲು ನಗರದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದ್ದು, ಬಸ್ ನಿಲ್ದಾಣದ ಬಳಿ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮುಳಬಾಗಿಲು ತಾಲ್ಲೂಕಿನಲ್ಲಿ ಕೆಲಸಕ್ಕಾಗಿ ಅನೇಕ ವಿದ್ಯಾವಂತ ಯುವಕ ಯುವತಿಯರು ದೂರದ ಬೆಂಗಳೂರಿಗೆ ಹೋಗುತ್ತಿರುತ್ತಾರೆ. ಆದ್ದರಿಂದ ತಾಲ್ಲೂಕಿನಲ್ಲಿ ಕೈಗಾರಿಕೆ ಪ್ರಾರಂಭಿಸಲು ಮನವಿ ಮಾಡಿದರು. ನಗರದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಪ್ರಮುಖ ಸ್ಥಳಗಳ ಮಾಹಿತಿಯನ್ನು ದೊಡ್ಡ ಫಲಕಗಳಲ್ಲಿ ಅಳವಡಿಸಬೇಕೆಂದರು.
ಕಸಾಯಿಖಾನೆ ತ್ಯಾಜ್ಯವನ್ನು ನಗರದ ವಿವಿಧ ಭಾಗಗಳಲ್ಲಿ ಚೀಲಗಳಿಗೆ ತುಂಬಿಸಿ ಎಸೆದಿರುತ್ತಾರೆ ಎಂದು ದೂರಿದ್ದಕ್ಕೆ ಜಿಲ್ಲಾಧಿಕಾರಿಯು, ನಗರಸಭೆಯ ಅಧಿಕಾರಿಗಳು ಕಸಾಯಿಖಾನೆಗಳ ವಿರುದ್ಧ ದೂರು ದಾಖಲಿಸಿ ಪರವಾನಿಗೆ ರದ್ದುಪಡಿಸಲು ಸೂಚಿಸಿದರು.
ಕಸ ವಿಲೇವಾರಿ ಕುರಿತು ಸಾರ್ವಜನಿಕರಿಗೆ ಹೆಚ್ಚಿನ ರೀತಿಯಲ್ಲಿ ನಗರಸಭೆಯವರು ಅರಿವು ಮೂಡಿಸಬೇಕೆಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ಜಿಲ್ಲಾ ನಗರಾಭಿವೃದ್ಧಿ ಕೋಶದ ನಿರ್ದೇಶಕಿ ಅಂಬಿಕಾ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶ್ರೀನಿವಾಸ್, ತಹಶೀಲ್ದಾರ್ ಗೀತಾ, ಮುಳಬಾಗಿಲಿನ ನಾಗರಿಕ ವೇದಿಕೆಯ ಸದಸ್ಯರು ಹಾಗೂ ಮಾಜಿ ಅಧಿಕಾರಿಗಳಾದ ಶ್ರೀನಿವಾಸಚಾರಿ, ಬಿ.ಎನ್.ಕೃಷ್ಣಯ್ಯ, ರಾಮಕೃಷ್ಣಪ್ಪ, ಪ್ರೊ.ಜಯರಾಂ, ನಿರಂಜನ್ ಇದ್ದರು.
ಐತಿಹಾಸಿಕ ದೇವಾಲಯಗಳನ್ನು ಅಭಿವೃದ್ಧಿಪಡಿಸಲು ಮನವಿ ಎಪಿಎಂಸಿ ಮಾರುಕಟ್ಟೆ ಒತ್ತುವರಿ ತಪ್ಪಿಸಿ ತಾಲ್ಲೂಕಿನಲ್ಲಿ ಕೈಗಾರಿಕೆ ಪ್ರಾರಂಭಿಸಲು ಕೋರಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.