ADVERTISEMENT

ಮುಳಬಾಗಿಲು ತಾಲೂಕಿಗೂ ಬೇಕು ರೈಲು ಸಂಪರ್ಕ

​ಪ್ರಜಾವಾಣಿ ವಾರ್ತೆ
Published 15 ಜನವರಿ 2024, 6:32 IST
Last Updated 15 ಜನವರಿ 2024, 6:32 IST
ಸೊಣ್ಣವಾಡಿ ಬಳಿ ರೈಲ್ವೆ ಸರ್ವೆ ನಡೆಸಿ ಹಾಕಲಾಗಿದ್ದ ಕಲ್ಲಿನ ಗುರುತು ಗಿಡಗಂಟಿಗಳಲ್ಲಿ ಮುಚ್ಚಿ ಹೋಗಿರುವುದು
ಸೊಣ್ಣವಾಡಿ ಬಳಿ ರೈಲ್ವೆ ಸರ್ವೆ ನಡೆಸಿ ಹಾಕಲಾಗಿದ್ದ ಕಲ್ಲಿನ ಗುರುತು ಗಿಡಗಂಟಿಗಳಲ್ಲಿ ಮುಚ್ಚಿ ಹೋಗಿರುವುದು    

ಮುಳಬಾಗಿಲು: ತಾಲ್ಲೂಕಿನ ಮೂಲಕ ನೆರೆಯ ರಾಜ್ಯಗಳಿಗೆ ಸಂಚರಿಸಲು ಯಾವುದೇ ರೈಲು ಸಂ‍ಪರ್ಕ ಇಲ್ಲ. ಜನರ ದಶಕಗಳ ಕೂಗಿಗೂ ಬೆಲೆ ಇಲ್ಲದಂತಾಗಿದೆ.

ಈ ಹಿಂದೆ ಕೋಲಾರ ಸಂಸದರಾಗಿದ್ದ ಕೆ.ಎಚ್.ಮುನಿಯಪ್ಪ ಅವರು ಯುಪಿಎ ಸರ್ಕಾರದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಜಿಲ್ಲೆಯ ಬಂಗಾರಪೇಟೆ ಮಾರ್ಗವಾಗಿ ಮುಳಬಾಗಿಲು ನಂತರ ನೆರೆಯ ಆಂಧ್ರಪ್ರದೇಶದ ಮದನಪಲ್ಲಿ ಮೂಲಕ ತಿರುಪತಿಗೆ ಸಂಪರ್ಕ ಕಲ್ಪಿಸುವ ಯೋಜನೆ ಅನುಸಾರವಾಗಿ 11 ವರ್ಷಗಳ ಹಿಂದೆ ತಾಲ್ಲೂಕಿನಲ್ಲಿ ರೈಲ್ವೆ ಸರ್ವೆ ಕೆಲಸ ನಡೆದಿತ್ತು. ಆದರೆ, ಇದುವರೆಗೂ ಅನುಷ್ಠಾನಗೊಂಡಿಲ್ಲ.

ಬಂಗಾರಪೇಟೆಯಿಂದ ಕೋಲಾರ, ಕೆಂಬೋಡಿ ಮತ್ತು ತಾಲ್ಲೂಕಿನ ಭೀಮಾಪುರ, ಮಾದಘಟ್ಟ, ಸೊಣ್ಣವಾಡಿ ಮೂಲಕ ನೆರೆಯ ಆಂಧ್ರಪ್ರದೇಶದ ಮಿಣಕಿ ಮಾರ್ಗವಾಗಿ ಮದನಪಲ್ಲಿ ಹಾಗೂ ತಿರುಪತಿಗೆ ಸಂಪರ್ಕ ಕಲ್ಪಿಸುವ ಒಂದು ಮಾರ್ಗ ಹಾಗೂ ಬೆಂಗಳೂರಿನ ವೈಟ್ ಫೀಲ್ಡ್ ಮಾರ್ಗವಾಗಿ ಕೋಲಾರ ನಂತರ ಮುಳಬಾಗಿಲು ಮಾರ್ಗದಿಂದ ಆಂಧ್ರಪ್ರದೇಶದ ಚಿತ್ತೂರಿಗೆ ಸಂಪರ್ಕ ಕಲ್ಪಿಸುವ ಮಾರ್ಗವಾಗಿ ಅಧಿಕಾರಿಗಳು ಪರಿಶೀಲನೆ ಮಾಡಿ ನಂತರ ಕೋಲಾರ ಮತ್ತು ಮುಳಬಾಗಿಲಿನಿಂದ ನೆರೆಯ ತಿರುಪತಿ ಕಡೆಗೆ ಹೋಗುವ ಮಾರ್ಗವನ್ನು ಸರ್ವೆ ಮಾಡಲಾಗಿತ್ತು. ಆದರೆ, ಸರ್ವೆ ಕಾರ್ಯ ನಡೆಸಿ ಕಲ್ಲು ಗುರುತು ಹಾಕಲಾಗಿತ್ತು. ಆದರೆ, ಈಗ ಗುರುತಿನ ಕಲ್ಲುಗಳೇ ಇಲ್ಲವಾಗಿದೆ.

ADVERTISEMENT

ರೈಲ್ವೆ ಇಲಾಖೆ ಸರ್ವೆ ಅಧಿಕಾರಿಗಳು ತಾಲ್ಲೂಕಿನ ಕೆಜಿಎಫ್ ರಸ್ತೆ, ಸೊಣ್ಣವಾಡಿ ಮುಂತಾದ ಕಡೆ ಸರ್ವೆ ಮಾಡಿ ರೈಲ್ವೆ ಇಲಾಖೆಯ ಮುದ್ರೆಯನ್ನು ಒಳಗೊಂಡ ಕಲ್ಲುಗಳನ್ನು ಹಾಕಲಾಗಿತ್ತು. ಆದರೆ, ಸರ್ವೆ ಲೈನ್ ಉದ್ದಕ್ಕೂ ಎಲ್ಲಿ ನೋಡಿದರೂ ಒಂದು ಕಲ್ಲೂ ಇಲ್ಲದೆ ಸುತ್ತಮುತ್ತಲಿನ ಜನ ಕಲ್ಲುಗಳನ್ನು ಕಿತ್ತು ಬಿಸಾಡಿದ್ದಾರೆ. ಇನ್ನು ಕೆಲವು ಕಡೆ ಕಲ್ಲುಗಳ ಮೇಲೆ ನಾನಾ ಬಗೆಯ ಗಿಡಗಂಟಿ, ಮರಗಳು ಹಾಗೂ ಪೊದೆಗಳು ಬೆಳೆದು ಗುರುತುಗಳೇ ಕಾಣಿಸದಂತಾಗಿದೆ.

ಜಿಲ್ಲೆಯ ಕೋಲಾರ, ಮಾಲೂರು, ಕೆ.ಜಿ.ಎಫ್, ಬಂಗಾರಪೇಟೆ ಹಾಗೂ ಶ್ರೀನಿವಾಸಪುರ ತಾಲ್ಲೂಕುಗಳಲ್ಲಿ ರೈಲ್ವೆ ಸಂಪರ್ಕ ಇದೆ. ನೆರೆಯ ಬೆಂಗಳೂರು ಹಾಗೂ ಇತರ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಆದರೆ, ಮುಳಬಾಗಿಲು ತಾಲ್ಲೂಕಿನಲ್ಲಿ ಮಾತ್ರ ಇದುವರೆಗೂ ರೈಲ್ವೆ ಯಾವ ಸೌಲಭ್ಯವೂ ಇಲ್ಲ.

ಇನ್ನು ಬೆಂಗಳೂರಿನ ಕೆ.ಆರ್.ಪುರ ಮಾರ್ಗವಾಗಿ ಮುಳಬಾಗಿಲು ತಾಲ್ಲೂಕಿನ ಗಡಿ ನಂಗಲಿವರೆಗೂ ರಾಷ್ಟ್ರೀಯ ಹೆದ್ದಾರಿ 75 ಇದೆ. ಈ ಹೆದ್ದಾರಿ ಮೂಲಕ ಪ್ರತಿದಿನ ಆಂಧ್ರಪ್ರದೇಶದ ತಿರುಪತಿ, ವಿಜಯವಾಡ, ಕಡಪ, ಕಾಳಹಸ್ತಿ ಮತ್ತು ತಮಿಳುನಾಡಿನ ಚೆನ್ನೈ ಮುಂತಾದ ಪ್ರದೇಶಗಳಿಗೆ ಪ್ರತಿನಿತ್ಯ ಸಾವಿರಾರು ಮಂದಿ ಪ್ರವಾಸಗಳಿಗಾಗಿ, ದೇವಸ್ಥಾನಗಳಿಗಾಗಿ ಹಾಗೂ ಚೆನ್ನೈಗೆ ಮಾರುಕಟ್ಟೆಗಾಗಿ ರಸ್ತೆ ಮಾರ್ಗವಾಗಿ ಸಂಚರಿಸುತ್ತಲೇ ಇರುತ್ತಾರೆ. ‌

ಆದರೆ, ರಸ್ತೆ ಮಾರ್ಗದಲ್ಲಿ ಸಂಚಾರ ದುಸ್ತರವಾದ ಕಾರಣದಿಂದ ಸುಮಾರು ವರ್ಷಗಳಿಂದ ತಾಲ್ಲೂಕಿನ ಜನರು ರೈಲು ಸಂಪರ್ಕಕ್ಕಾಗಿ ಬೇಡಿಕೆ ಸಲ್ಲಿಸುತ್ತಿದ್ದರೂ ಇದುವರೆಗೂ ಸಮಸ್ಯೆ ಪರಿಹಾರವಾಗಿಲ್ಲ.

ಚೆನ್ನೈ ಮಾರುಕಟ್ಟೆಗೆ ಬೇಕು ರೈಲು ಸಂಪರ್ಕ: ತಾಲ್ಲೂಕಿನ ಎನ್.ವಡ್ಡಹಳ್ಳಿ ಟೊಮೆಟೊ ಮಾರುಕಟ್ಟೆ ಮತ್ತು ತರಕಾರಿ ಮಾರುಕಟ್ಟೆ, ನಂಗಲಿ ತರಕಾರಿ ಮಾರುಕಟ್ಟೆ, ಕೋಲಾರ ಟೊಮೆಟೊ ಮಾರುಕಟ್ಟೆ ಹಾಗೂ ತಾಲ್ಲೂಕಿನಿಂದ ಪ್ರತಿದಿನ ವಿವಿಧ ತರಕಾರಿ, ಗೆಣಸು ಮುಂತಾದ ನೂರಾರು ಲೋಡ್‌ ರಸ್ತೆ ಮೂಲಕ ಚೆನ್ನೈ ಮಾರುಕಟ್ಟೆಗೆ ಹೋಗುತ್ತದೆ. ಬೆಳಿಗ್ಗೆ ಐದು -ಆರು ಗಂಟೆಗೆ ಚೆನ್ನೈ ಮಾರುಕಟ್ಟೆಗೆ ಸರಕು ತಲುಪಬೇಕು. ಇದರಿಂದ ರೈಲು ಸಂಚಾರ ಇದ್ದಿದ್ದರೆ ನೂರಾರು ಲೋಡ್‌ ಒಂದೇ ರೈಲಿನಲ್ಲಿ ಸಮಯಕ್ಕೆ ಸರಿಯಾಗಿ ಸಾಗಿಸಬಹುದಾಗಿತ್ತು. ರೈತರು ಹಾಗೂ ವ್ಯಾಪಾರಿಗಳೂ ಸುಗಮವಾಗಿ ಹೋಗಿ ಬರಬಹುದಾಗಿತ್ತು. ಇದರಿಂದ ರೈಲು ಸಂಪರ್ಕ ಬೇಕು ಎಂದು ಜನ ಒತ್ತಾಯಿಸುತ್ತಾರೆ.

ತಿರುಪತಿ, ಕಾಳಹಸ್ತಿಗೆ ಸಾವಿರಾರು ಭಕ್ತರು ಪ್ರಯಾಣ: ಪ್ರತಿನಿತ್ಯ ರಾಜ್ಯದ ವಿವಿಧ ಕಡೆಗಳಿಂದ ಹೆದ್ದಾರಿ ಮೂಲಕ ಮುಳಬಾಗಿಲು ಮಾರ್ಗವಾಗಿ ಆಂಧ್ರಪ್ರದೇಶದ ತಿರುಪತಿ, ಕಾಳಹಸ್ತಿ, ವಿಜಯವಾಡ, ಕಾಣಿಪಾಕಂ ಮುಂತಾದ ಪ್ರಸಿದ್ಧ ದೇವಾಲಯಗಳಿಗೆ ಭಕ್ತರು ಬಸ್‌,ಕಾರು ಮುಂತಾದ ವಾಹನಗಳಲ್ಲಿ ಪ್ರಯಾಣಿಸುತ್ತಿರುತ್ತಾರೆ. ಆದರೆ, ರೈಲು ಸಂಪರ್ಕ ಇದ್ದಿದ್ದರೆ ಎಲ್ಲ ಭಕ್ತರಿಗೂ ಹಾಗೂ ಸಾಮಾನ್ಯ ಜನರಿಗೂ ಅನುಕೂಲವಾಗುತ್ತಿತ್ತು ಎಂದು ಸ್ಥಳೀಯರು ಹೇಳುತ್ತಾರೆ.

ರೈಲು ಸಂಚಾರ ಕಲ್ಪಿಸಿ

ಮುಳಬಾಗಿಲು ತಾಲ್ಲೂಕಿನ ಮೂಲಕ ನೆರೆಯ ರಾಜ್ಯಗಳಿಗೆ ಕೇವಲ ರಸ್ತೆ ಸಂಪರ್ಕ ಮಾತ್ರ ಇದೆ. ಇದರಿಂದ ಸುಲಭವಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ಪ್ರಯಾಣಿಕರು ಹೋಗಿ ಬರಲು ಅನಾನುಕೂಲವಾಗಿದೆ. ಇದರಿಂದ ಮುಂದಿನ ಕೇಂದ್ರ ಬಜೆಟ್‌ನಲ್ಲಾದರೂ ತಾಲ್ಲೂಕಿಗೆ ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸಬೇಕಾಗಿದೆ - ಯಲುವಹಳ್ಳಿ ಪ್ರಭಾಕರ್ ರೈತ ಸಂಘದ ತಾಲ್ಲೂಕು ಅಧ್ಯಕ್ಷ

ಸುಗಮ ಸಾಗಾಟಕ್ಕೆ ಅನುಕೂಲ

ತಾಲ್ಲೂಕಿನ ಎನ್.ವಡ್ಡಹಳ್ಳಿಯ ಟೊಮೆಟೊ ಹಾಗೂ ತರಕಾರಿ ಮಾರುಕಟ್ಟೆಗಳಿಂದ ಪ್ರತಿದಿನ ನೂರಾರು ಲೋಡ್‌ಗಳಷ್ಟು ಟೊಮೆಟೊ ತರಕಾರಿ ಮುಂತಾದ ವಸ್ತುಗಳು ನೆರೆಯ ತಮಿಳುನಾಡಿನ ಚೆನ್ನೈ ದೆಹಲಿ ಪಶ್ಚಿಮ ಬಂಗಾಳ ಮುಂತಾದ ರಾಜ್ಯಗಳಿಗೆ ರಫ್ತಾಗುತ್ತದೆ. ಇದರಿಂದ ರೈಲ್ವೆ ಸಂಪರ್ಕ ಇದ್ದಿದ್ದರೆ ಸುಗಮ ಸಾಗಾಟ ಮತ್ತು ಸಂಚಾರಕ್ಕೆ ಅನುಕೂಲವಾಗುತ್ತಿತ್ತು - ನಗವಾರ ಎನ್.ಆರ್.ಸತ್ಯಣ್ಣ ಟೊಮೆಟೊ ಮಂಡಿ ಮಾಲೀಕರು ಎನ್.ವಡ್ಡಹಳ್ಳಿ

ಎನ್.ವಡ್ಡಹಳ್ಳಿ ಮಾರುಕಟ್ಟೆ
ಮುಳಬಾಗಿಲು ತಾಲ್ಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.