ADVERTISEMENT

ಮುಳಬಾಗಿಲು| ಅಭಿವೃದ್ಧಿ ಹೆಸರಲ್ಲಿ ಮರಗಳ ಹನನ

ಬದಲಿಗೆ ಸಸಿಗಳನ್ನು ನಾಟಿ ಮಾಡಲು ಪರಿಸರವಾದಿ ಒಕ್ಕೊರಲ ಆಗ್ರಹ

ಕೆ.ತ್ಯಾಗರಾಜ್ ಎನ್.ಕೊತ್ತೂರು.
Published 9 ಫೆಬ್ರುವರಿ 2026, 5:56 IST
Last Updated 9 ಫೆಬ್ರುವರಿ 2026, 5:56 IST
ಮುಳಬಾಗಿಲು ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಪೆಟ್ರೋಲ್ ಬಂಕ್ ಸ್ಥಾಪನೆಗೆ ಕಟಾವು ಮಾಡಿರುವ ಭಾರಿ ಮರಗಳು 
ಮುಳಬಾಗಿಲು ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಪೆಟ್ರೋಲ್ ಬಂಕ್ ಸ್ಥಾಪನೆಗೆ ಕಟಾವು ಮಾಡಿರುವ ಭಾರಿ ಮರಗಳು    

ಮುಳಬಾಗಿಲು: ತಾಲ್ಲೂಕಿನಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಸಾವಿರಾರು ಮರಗಳ ಹನನ ನಡೆಯುತ್ತಿದೆ. ಈ ಮರಗಳ ಬದಲಿಗೆ ಅಷ್ಟೇ ಸಂಖ್ಯೆಯಲ್ಲಿ ಸಸಿಗಳನ್ನು ನಾಟಿ ಮಾಡಬೇಕೆಂದು ಪರಿಸರವಾದಿಗಳಿಂದ ಬಲವಾದ ಕೂಗು ಕೇಳಿ ಬಂದಿದೆ. 

ತಾಲ್ಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ 75, ರಾಜ್ಯ ಹೆದ್ದಾರಿ ಹಾಗೂ ಗ್ರಾಮೀಣ ರಸ್ತೆಗಳು ಹಾದು ಹೋಗಿವೆ. ಇವುಗಳ ಬದಿಯಲ್ಲಿ ಹಲವು ವರ್ಷಗಳ ಹಿಂದೆ ನಾಟಿ ಮಾಡಿದ ಗಿಡಗಳು ಈಗ ದೊಡ್ಡ ಮರಗಳಾಗಿ ಬೆಳದಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ಹೆದ್ದಾರಿ ವಿಸ್ತರಣೆ ಮತ್ತು ವಾಣಿಜ್ಯ ಸಂಕೀರ್ಣಗಳ ನಿರ್ಮಾಣದ ಹೆಸರಿನಲ್ಲಿ ಪ್ರತಿವರ್ಷ ಸಾವಿರಾರು ಮರಗಳನ್ನು ಕಡಿಯಲಾಗುತ್ತಿದೆ. ಈ ಕಟಾವುಗಳಿಗೆ ಪರ್ಯಾಯವಾಗಿ ಸಸಿನಾಟಿ ನಡೆಯುತ್ತಿದೆಯೇ ಎಂಬುದು ಸಾರ್ವಜನಿಕರ ಪ್ರಮುಖ ಪ್ರಶ್ನೆಯಾಗಿದೆ.

ಅರಣ್ಯ ಇಲಾಖೆ ನಿಯಮದಂತೆ ಸರ್ಕಾರಿ ಭೂಮಿಯಲ್ಲಿ ಒಂದು ಮರ ಕಡಿದರೆ ಅದರ ಬದಲಿಗೆ ಹತ್ತು ಸಸಿಗಳನ್ನು ನಾಟಿ ಮಾಡಿ ಬೆಳೆಸಬೇಕು. ಆದರೆ, ಈ ನಿಯಮ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆಯೇ ? ನಾಟಿ ಮಾಡಿದ ಸಸಿಗಳ ಸೂಕ್ತ ಪೋಷಣೆ ನಡೆಯುತ್ತಿದೆಯೇ ? ಎಂಬುದರ ಕುರಿತು ಸ್ಪಷ್ಟತೆ ಮತ್ತು ಪಾರದರ್ಶಕತೆ ಅಗತ್ಯವಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ADVERTISEMENT

ರಸ್ತೆ ಬದಿಯಲ್ಲಿ ಪೆಟ್ರೋಲ್ ಬಂಕ್‌, ಹೋಟೆಲ್‌, ರೆಸ್ಟೋರೆಂಟ್‌ ಮತ್ತು ಇತರ ವಾಣಿಜ್ಯ ಸೌಕರ್ಯಗಳು ಹೆಚ್ಚಾಗಿವೆ. ಇವುಗಳ ನಿರ್ಮಾಣ ಮತ್ತು ವಿಸ್ತರಣೆಗಾಗಿ ವಾಹನ ಸಾಗಣೆ ಸುಲಭವಾಗಲು ಸೇವಾ ರಸ್ತೆ  ಮಾಡುವಾಗ ಹಲವು ಮರಗಳು ಕಡಿಯಲ್ಪಡುತ್ತವೆ. ವಾಣಿಜ್ಯ ಕಟ್ಟಡಗಳ ನಿರ್ಮಾಣದ ಸಮಯದಲ್ಲಿ ಎಲ್ಲ ಮರಗಳನ್ನು ಕಡಿಯುವ ಬದಲು, ಕಟ್ಟಡದ ಮುಂಭಾಗದಲ್ಲಿ ಮಾತ್ರ ಮರಗಳನ್ನು ತೆರವುಗೊಳಿಸಿದರೆ ಹೆಚ್ಚಿನ ಮರಗಳನ್ನು ಉಳಿಸಬಹುದು.

ಕೆಲವು ವ್ಯಾಪಾರಸ್ಥರು ತಮ್ಮ ಹೋಟೆಲ್ ಅಥವಾ ಬಾರ್‌ಗಳು ದೂರದಿಂದ ಕಾಣಿಸಲಿ ಎಂದು ರಸ್ತೆಬದಿ ಮರಗಳ ಕೊಂಬೆಗಳನ್ನು ಅನಾವಶ್ಯಕವಾಗಿ ಕತ್ತರಿಸುವುದು ಕೂಡ ಸಾಮಾನ್ಯವಾಗಿದೆ. ಈ ರೀತಿಯ ಅನಿಯಂತ್ರಿತ ಕ್ರಮಗಳಿಂದ ಪರಿಸರ ಹಾನಿಯಾಗುವುದನ್ನು ತಪ್ಪಿಸಲು, ಸರ್ಕಾರ ಸೂಕ್ತ ಕಾನೂನು ಮಾರ್ಪಾಡು ಮಾಡಬೇಕಾಗಿದೆ.

ಅಭಿವೃದ್ಧಿ ಹೆಸರಿನಲ್ಲಿ ತಾಲ್ಲೂಕಿನಲ್ಲಿ ಹೆದ್ದಾರಿ ಮತ್ತಿತರ ಕಡೆ ಸಾವಿರಾರು ಮರಗಳ ಕಟಾವು ನಡೆಯುತ್ತಿದೆ. ಪರಿಸರವನ್ನು ಸಂರಕ್ಷಿಸಿ ಗಿಡ ಬೆಳೆಸುವ ತತ್ವ ಏನಾಗುತ್ತಿದೆ? ಪರಿಸರ ಸಂರಕ್ಷಣೆಗೆ ಸರ್ಕಾರ ಹಾಗೂ ಇಲಾಖೆ ಕಾನೂನುಗಳನ್ನು ಮಾರ್ಪಡಿಸಬೇಕೆಂದು ವಕೀಲ ಮನ್ನೇನಹಳ್ಳಿ ವೆಂಕಟರಾಮರಡ್ಡಿ ಒತ್ತಾಯಿಸಿದ್ದಾರೆ.

ಸರ್ಕಾರ ಮತ್ತು ಅರಣ್ಯ ಇಲಾಖೆ ಆದೇಶದಂತೆ ಒಂದು ಮರ ಕಡಿದರೆ ಅದರ ಬದಲಿಗೆ ಹತ್ತು ಸಸಿಗಳನ್ನು ನಾಟಿ ಮಾಡುವ ನಿಯಮವಿದೆ. ಯಾವುದೇ ಮರಗಳನ್ನು ಕತ್ತರಿಸಿದರೂ, ಅವುಗಳ ಬದಲಿ ಸಸಿಗಳನ್ನು ನಾಟಿ ಮಾಡಲು ಮೂರು ವರ್ಷಗಳ ಅವಧಿಯ ರಕ್ಷಣಾ ನಿಧಿಯನ್ನು ಶುಲ್ಕವಾಗಿ ಪಾವತಿಸಲಾಗುತ್ತದೆ. ನಂತರ ರಸ್ತೆಬದಿ ಅಥವಾ ಸರ್ಕಾರಿ ಜಾಗಗಳಲ್ಲಿ ಸಸಿಗಳನ್ನು ನಾಟಿ ಮಾಡಲಾಗುತ್ತದೆ ಎಂದು ಡಿ.ಆರ್.ಎಫ್.ಒ ಸೋಮ ಮಾಹಿತಿ ನೀಡಿದ್ದಾರೆ. 

ಎತ್ತರದ ಮರವನ್ನು ಕಟಾವು ಮಾಡಿರುವುದು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.