ADVERTISEMENT

ನಗರಸಭೆ ಚುನಾವಣೆ: ಗೆಲ್ಲುವ ಅಭ್ಯರ್ಥಿಗೆ ಟಿಕೆಟ್

ಶಾಸಕ ಕೆ.ಶ್ರೀನಿವಾಸಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2019, 12:20 IST
Last Updated 28 ಅಕ್ಟೋಬರ್ 2019, 12:20 IST
ಕೋಲಾರ ನಗರಸಭೆ ಚುನಾವಣೆ ಸಂಬಂಧ ಶಾಸಕ ಕೆ.ಶ್ರೀನಿವಾಸಗೌಡ ಅವರು ಸೋಮವಾರ ನಗರದ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ, ಕಾರ್ಯಕರ್ತರ ಸಭೆ ನಡೆಸಿದರು.
ಕೋಲಾರ ನಗರಸಭೆ ಚುನಾವಣೆ ಸಂಬಂಧ ಶಾಸಕ ಕೆ.ಶ್ರೀನಿವಾಸಗೌಡ ಅವರು ಸೋಮವಾರ ನಗರದ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ, ಕಾರ್ಯಕರ್ತರ ಸಭೆ ನಡೆಸಿದರು.   

ಕೋಲಾರ: ‘ನಗರಸಭೆ ಚುನಾವಣೆ ಜೆಡಿಎಸ್ ಪಕ್ಷಕ್ಕೆ ಪ್ರತಿಷ್ಠೆಯಾಗಿದ್ದು, ಪ್ರತಿ ವಾರ್ಡಿನಲ್ಲೂ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಕಾರ್ಯಕರ್ತರು ಕೆಲಸ ಮಾಡಬೇಕು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಸಲಹೆ ನೀಡಿದರು.

ನಗರಸಭೆ ಚುನಾವಣೆ ಸಂಬಂಧ ನಗರದ ವಿವಿಧ ವಾರ್ಡ್‌ಗಳಲ್ಲಿ ಸೋಮವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ‘ಹಿಂದೆ ಮೊದಲ ಅವಧಿಯಲ್ಲಿ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಆನಂತರ ಎರಡನೇ ಅವಧಿ ಅಧ್ಯಕ್ಷರ ಚುನಾವಣೆಯಲ್ಲಿ ನಮ್ಮ ಪಕ್ಷವರೆ ಮಾಡಿದ ತಪ್ಪಿನಿಂದ ಅಧಿಕಾರ ಕಳೆದುಕೊಳ್ಳಬೇಕಾಯಿತು, ಆ ಪರಿಸ್ಥಿತಿ ಮತ್ತೆ ಮರುಕಳುಹಿಸಬಾರದು’ ಎಂದು ಹೇಳಿದರು.

‘ನಗರಸಭೆಯ 35 ವಾರ್ಡ್‌ನಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಟಿಕೆಟ್‌ ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಗೆಲ್ಲುವವರಿಗಷ್ಟೇ ಟಿಕೆಟ್‌ ನೀಡಲು ಸಾಧ್ಯ. ಅಭ್ಯರ್ಥಿ ಯಾರಾಗಬೇಕೆಂದು ಆಯಾ ವಾರ್ಡ್‌ನ ಮುಖಂಡರ ಅಭಿಪ್ರಾಯ ಸಂಗ್ರಹಿಸಲು ಸಭೆ ನಡೆಸಲಾಗುತ್ತಿದೆ. ಗೆಲ್ಲುವಂತವರಿಗೆ ಕಣಕ್ಕಿಳಿಸಲಾಗುವುದು. ಮಹಿಳಾ ಮೀಸಲು ಕ್ಷೇತ್ರದಲ್ಲಿ ಮಹಿಳೆಯರಿಗೆ ಅವಕಾಶ ನೀಡಲಾಗುವುದು, ಸಾಮಾಜ್ಯ ಕ್ಷೇತ್ರದಲ್ಲಿ ಸ್ಪರ್ಧಿಸಲು ಮುಂದಾಗಬೇಡಿ’ ಎಂದರು.

ADVERTISEMENT

‘ನಗರದಲ್ಲಿನ ರಸ್ತೆ, ಕಸದ ಸಮಸ್ಯೆಯಿಂದ ಜನ ಬೇಸತ್ತಿದ್ದಾರೆ. ಈ ಸಮಸ್ಯೆ ಪರಿಹರಿಸುವುದು ಮುಂದೆ ಅಧಿಕಾರಕ್ಕೆ ಬರುವ ಆಡಳಿತ ಮಂಡಳಿಗೆ ದೊಡ್ಡ ಸವಾಲು. ನಗರದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ. 10 ವರ್ಷ ಏನಾಗಿತ್ತು ಎಂಬುದು ಬೇಕಿಲ್ಲ. ಈಗ ಅಧಿಕಾರ ಹಿಡಿಯುವುದು ಮುಖ್ಯ. ಈ ದಿಸೆಯಲ್ಲಿ ಭಿನ್ನಾಭಿಪ್ರಾಯ ಮರೆತು ಒಗ್ಗೂಡಿ ಕೆಲಸ ಮಾಡಿ’ ಎಂದು ಕಿವಿಮಾತು ಹೇಳಿದರು.

‘ಮೊದಲ ಅವಧಿಯಲ್ಲಿ ಅಧಿಕಾರದ ನಡೆದ ವ್ಯಕ್ತಿ ಈಗ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾನೆ. ಇಲ್ಲಿ ಮಜಾ ಮಾಡಿದ್ದು ಸಾಲದೆ ಅಲ್ಲಿಗೆ ಹೋಗಿರಬೇಕು. 2ನೆ ಅವಧಿಗೆ ಅಧ್ಯಕ್ಷರ ಆಯ್ಕೆ ವಿಚಾರ ಆ ವ್ಯಕ್ತಿಗೆ ಬಿಟ್ಟಿದ್ದಕ್ಕೆ ಮೋಸ ಮಾಡಿದ. ಇದರಿಂದ ಬೇರೆ ಸದಸ್ಯರು ಅಸಮಾಧಾನಗೊಂಡು ಪಕ್ಷ ಬಿಡುವಂತೆ ಮಾಡಿದ’ ಆಕ್ರೋಶವ್ಯಕ್ತಪಡಿಸಿದರು.

‘ಹಿಂದೆ 10 ವರ್ಷ ಅಧಿಕಾರದಲ್ಲಿದ್ದ ವರ್ತೂರು ಪ್ರಕಾಶ್‌ ನಡೆದ ವಿಫಲ ಪ್ರಯತ್ನದಿಂದ ರಸ್ತೆಗಳು, ಯುಜಿಡಿ, ಚರಂಡಿ ಪರಿಸ್ಥಿತಿ ಹದಗೆಟ್ಟಿದೆ. ಇದನೆಲ್ಲ ಸರಿಪಡಿಸಲು ಹಿಂದಿನ ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬಿಡುಗಡೆ ಮಾಡಿಸಿದ್ದ ಹಣವನ್ನು ಬಿಜೆಪಿ ಸರ್ಕಾರ ತಡೆಹಿಡಿದಿದೆ’ ಎಂದು ತಿಳಿಸಿದರು.

‘ಬಿಜೆಪಿ ಸರ್ಕಾರಕ್ಕೆ ರಾಜ್ಯದ ಅಭಿವೃದ್ಧಿಗಿಂತ ಅನರ್ಹಗೊಂಡಿರುವ ಶಾಸಕರನ್ನು ಉಪ ಚುನಾವಣೆಯಲ್ಲಿ ಗೆಲ್ಲಿಸಿಕೊಳ್ಳಲು ಅನುದಾನ ಕಡಿತಗೊಳಿಸಿ, ಪ್ರವಾಹಪೀಡಿತ ಜಿಲ್ಲೆಗಳಿಗೆ ಪರಿಹಾರ ನೀಡಲು ಕಡಿತಗೊಳಿಸಿರುವುದಾಗಿ ಹೇಳುತ್ತಿದ್ದಾರೆ’ ಎಂದು ಆರೋಪಿಸಿದರು.

ವಾರ್ಡ್‌ಗಳಿಗೆ ಶಾಸಕ ಕೆ.ಶ್ರೀನಿವಾಸಗೌಡ ಅರು ಭೇಟಿ ನೀಡುತ್ತಿದ್ದಂತೆ ಅಭ್ಯರ್ಥಿಗಳಪರ ಬೆಂಬಲಿಗರು ಘೋಷಣೆ ಹಾಕಿ, ಬಿ ಫಾರಂ ನೀಡುವಂತೆ ಒತ್ತಾಯ ಮಾಡಿದರು. ಇದಕ್ಕೆ ಮಧ್ಯ ಪ್ರವೇಶ ಮಾಡಿದ ಗೆಲ್ಲುವಂತ ಸೂಕ್ತ ಅಭ್ಯರ್ಥಿಯನ್ನು ಸೂಚಿಸಿದರೆ ಫಾರಂ ನೀಡಲಾಗುವುದು ಎಂದು ಸಮಾಧಾನಪಡಿಸಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ವಿ.ಯಾನಂದದ್, ಜೆಡಿಎಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಇ.ಗೋಪಾಲಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಬಾಬು ಮೌನಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.