ADVERTISEMENT

ಹೊಸಕೋಟೆ: ನಗರಸಭೆ ಉಳಿತಾಯ ಬಜೆಟ್ ಮಂಡನೆ

ಒಟ್ಟು ₹ 65.05 ಕೋಟಿ ಆಯವ್ಯಯ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2021, 7:27 IST
Last Updated 1 ಏಪ್ರಿಲ್ 2021, 7:27 IST
ಹೊಸಕೋಟೆ ನಗರಸಭೆಯ ಬಜೆಟ್ ಮಂಡಿಸಿದ ಸ್ಥಾಯಿಸಮಿತಿ ಅಧ್ಯಕ್ಷ ಸೋಮಶೇಖರ್‍
ಹೊಸಕೋಟೆ ನಗರಸಭೆಯ ಬಜೆಟ್ ಮಂಡಿಸಿದ ಸ್ಥಾಯಿಸಮಿತಿ ಅಧ್ಯಕ್ಷ ಸೋಮಶೇಖರ್‍   

ಹೊಸಕೋಟೆ: ನಗರಸಭೆಗೆ ಬರಬೇಕಾದ ಎಲ್ಲಾ ರೀತಿಯ ಆದಾಯದ ಮೂಲಗಳನ್ನು ಗಮನದಲ್ಲಿರಿಸಿ ಅದನ್ನು ಸರಿಯಾಗಿ ವಸೂಲಿ ಮಾಡಲು ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಂ.ವಿ. ಸೋಮಶೇಖರ್ ತಿಳಿಸಿದರು.

ನಗರಸಭೆಯ ಸಭಾಂಗಣದಲ್ಲಿ 2021-22 ನೇ ಸಾಲಿನ ಆಯವ್ಯಯ ಮಂಡಿಸಿ ಅವರುಮಾತನಾಡಿದರು.

ಎಲ್ಲಾ ರೀತಿಯ ನಾಗರೀಕ ಸೌಲಭ್ಯಗಳನ್ನು ಕಲ್ಪಿಸಿ ₹ 76.45 ಲಕ್ಷ ಉಳಿತಾಯ ಆಯವ್ಯಯವನ್ನು ಮಂಡಿಸಿದರು.

ADVERTISEMENT

ಒಟ್ಟು ₹ 65.05 ಕೋಟಿ ಆಯವ್ಯಯದಲ್ಲಿ ಆಸ್ತಿ ತೆರಿಗೆ, ಜಾಹಿರಾತು ತೆರಿಗೆ, ಉದ್ದಿಮೆ ಮತ್ತು ಇತರೆ ಶುಲ್ಕಗಳಿಂದ ₹ 5.72 ಕೋಟಿ, ನೀರಿನ ತೆರಿಗೆ ಹಾಗೂ ಮಳಿಗೆಗಳ ಬಾಡಿಗೆಯಿಂದ ₹ 1 ಕೋಟಿ , ಕೇಂದ್ರ ಸರ್ಕಾರದ ಅನುದಾನಗಳಿಂದ ₹ 3.83 ಕೋಟಿ ಹಾಗೂ ರಾಜ್ಯ ಸರ್ಕಾರದ ಅನುದಾನಗಳಿಂದ ₹ 33.58 ಕೋಟಿ ನಿರೀಕ್ಷಿಸಲಾಗಿದ್ದು, ಕಳೆದ ವರ್ಷದ ಉಳಿತಾಯದ ₹ 17.66 ಕೋಟಿ ಸಂಗ್ರಹದ ಗುರಿ ಹೊಂದಲಾಗಿದೆ ಎಂದರು.

ಹಾಗೆಯೇ ಕಚೇರಿ ನಿರ್ವಹಣೆ ಹಾಗೂ ಕೌನ್ಸಿಲ್ ಮಂಡಳಿಯ ವೆಚ್ಚ ₹ 1.52 ಕೋಟಿ, ಅಧಿಕಾರಿಗಳ ಹಾಗೂ ನೌಕರರ ವೇತನ ಹಾಗೂ ಭತ್ಯೆಗಳಿಗೆ ₹ 5.47 ಕೋಟಿ, ಕಲ್ಯಾಣ ಕಾರ್ಯಕ್ರಮಗಳಿಗೆ ₹ 72 ಲಕ್ಷ, ನೀರು ಸರಬರಾಜು ನಿರ್ವಹಣೆ ಮತ್ತು ಕಾಮಗಾರಿಗೆ ₹ 6.62 ಕೋಟಿ, ಬೀದಿದೀಪ ನಿರ್ವಹಣೆಗೆ ₹ 2.56 ಕೋಟಿ, ಘನತ್ಯಾಜ್ಯ ನಿರ್ವಹಣೆಗೆ ₹ 7.01 ಕೋಟಿ ಖರ್ಚುಮಾಡಲಾಗುತ್ತದೆ ಎಂದುವಿವರಿಸಿದರು.

ಚರಂಡಿ ಮತ್ತು ರಾಜಕಾಲುವೆ ಕಾಮಗಾರಿಗಳಿಗೆ ಆದ್ಯತೆ ನೀಡಿದ್ದು, ಅದಕ್ಕಾಗಿ ₹ 12.65 ಕೋಟಿ ಮೀಸಲಿರಿಸಿರುವುದಾಗಿ ತಿಳಿಸಿದರು.

ಇತರೆ ನಾಗರಿಕ ಸೌಲಭ್ಯದ ಕಾಮಗಾರಿಗಳಿಗಾಗಿ ₹13.6 ಕೋಟಿ ಹಾಗೂ ಅಸಾಧಾರಣ ಪಾವತಿಗಳಿಗಾಗಿ ₹ 5.2 ಕೋಟಿಯನ್ನು ತೆಗೆದಿಡಲಾಗಿದೆ ಎಂದು ತಿಳಿಸಿದರು.

ಸಭೆಯ ಅಧ್ಯಕ್ಷತೆವಹಿಸಿದ್ದ ನಗರಸಭೆ ಅಧ್ಯಕ್ಷ ಅರುಣ್ ಕುಮಾರ್‍ ಮಾತನಾಡಿ, ಪೌರಾಡಳಿತ ಹಾಗೂ ಸಕ್ಕರೆ ಸಚಿವ ಎಂ.ಟಿ.ಬಿ. ನಾಗರಾಜ್ ಅವರ ಮಾರ್ಗದರ್ಶನದಲ್ಲಿ ನಗರ ಸಭೆಯು ನಗರದ ಸರ್ವಾಂಗೀಣ ಅಭಿವೃದ್ಧಿಯ ಕನಸನ್ನು ಹೊತ್ತಿದ್ದು, ಅದಕ್ಕೆ ಪೂರಕವಾದ ಆಯವ್ಯಯ ಮಂಡಿಸಲಾಗಿದೆ ಎಂದು ತಿಳಿಸಿದರು.

ನಗರಸಭೆಯ ವ್ಯಾಪ್ತಿಯ ಅಂಗಡಿ ಮಳಿಗೆಗಳ ಬಾಡಿಗೆ ವಸೂಲಿಯನ್ನು ಸರಿಯಾಗಿ ಮಾಡಬೇಕಾಗಿದ್ದು ಅದರ ಮರುಹರಾಜು ಪ್ರಕ್ರಿಯೆಯನ್ನು ಮಾಡಬೇಕಾಗಿದೆ ಎಂದ ಅವರು, ಜಾಹೀರಾತು ಪಲಕಗಳಿಂದ ನಗರಸಭೆಗೆ ಸರಿಯಾಗಿ ಶುಲ್ಕ ವಸೂಲಿಯಾಗಬೇಕಾಗಿದ್ದು ಅದಕ್ಕಾಗಿ ಫಲಕವಿರುವ ಕಟ್ಟಡಗಳ ಮಾಲೀಕರನ್ನು ಸಭೆ ಕರೆದು ತೀರ್ಮಾನಿಸುವುದಾಗಿ
ತಿಳಿಸಿದರು.

ಸ್ವಾಭಿಮಾನಿ ಬಣದ ನಗರಸಭೆ ಸದಸ್ಯ ಕೇಶವಮೂರ್ತಿ ಮಾತನಾಡಿ, ಆಯವ್ಯಯ ತಯಾರಿಯ ವೇಳೆ ಬಹಳಷ್ಟು ಮೂಲಗಳಿಂದ ಬರಬೇಕಾದ ಆದಾಯದ ಅಂದಾಜಿನಲ್ಲಿ ಕಡಿಮೆ ಮಾಡಲಾಗಿದ್ದು, ನೂತನವಾಗಿ ನಿರ್ಮಾಣವಾಗುತ್ತಿರುವ ಬಡಾವಣೆಗಳು ಮತ್ತು ಬಹುಮಹಡಿ ಕಟ್ಟಡಗಳಿಂದ ಸರಿಯಾಗಿ ಮತ್ತು ಈಗಿನ ರೀತಿಯಲ್ಲಿ ತೆರಿಗೆ ವಸೂಲಿ ಮಾಡಿದರೆ ನಗರಸಭೆಗೆ ಬರಬೇಕಾದ ಆದಾಯದ ಮೂಲಗಳು ಹೆಚಾಗುತ್ತದೆ ಎಂದುತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.