ADVERTISEMENT

ಇಂದಿನಿಂದ ಇ–ಹರಾಜು: ಅಂಗಡಿ ತೆರವುಗೊಳಿಸಲು ಮಾಲೀಕರಿಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 29 ಜನವರಿ 2021, 2:04 IST
Last Updated 29 ಜನವರಿ 2021, 2:04 IST
ಕೆಜಿಎಫ್‌ ಎಂ.ಜಿ. ಮಾರುಕಟ್ಟೆಯಲ್ಲಿ ಗುರುವಾರ ಅಂಗಡಿ ಮಾಲೀಕರಿಗೆ ತೆರವು ನೋಟಿಸ್‌ ನೀಡುತ್ತಿರುವ ನಗರಸಭೆಯ ಸಿಬ್ಬಂದಿ
ಕೆಜಿಎಫ್‌ ಎಂ.ಜಿ. ಮಾರುಕಟ್ಟೆಯಲ್ಲಿ ಗುರುವಾರ ಅಂಗಡಿ ಮಾಲೀಕರಿಗೆ ತೆರವು ನೋಟಿಸ್‌ ನೀಡುತ್ತಿರುವ ನಗರಸಭೆಯ ಸಿಬ್ಬಂದಿ   

ಕೆಜಿಎಫ್‌: ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ನಗರಸಭೆಯ ಎಂ.ಜಿ. ಮಾರುಕಟ್ಟೆ ಸೇರಿದಂತೆ ಇತರೇ ಅಂಗಡಿಗಳ ಇ–ಹರಾಜು ಪ್ರಕ್ರಿಯೆಯು ಜ. 29ರಂದು ಬೆಳಿಗ್ಗೆ 11ಗಂಟೆಗೆ ಪ್ರಾರಂಭವಾಗಲಿದೆ.

ಇ–ಹರಾಜು ಮಾಡುವ ಹಿನ್ನೆಲೆಯಲ್ಲಿ ಅಂಗಡಿಗಳನ್ನು ಖಾಲಿ ಮಾಡುವಂತೆ ನಗರಸಭೆ ಸಿಬ್ಬಂದಿ ಗುರುವಾರ ಎಲ್ಲಾ ಅಂಗಡಿಗಳಿಗೆ ತೆರವು ನೋಟಿಸ್‌ ನೀಡಿದರು. ಅಂಗಡಿ ತೆರವಿಗೆ 20 ದಿನಗಳ ಕಾಲಾವಕಾಶ ನೀಡಲಾಗಿದೆ. ರಾಬರ್ಟಸನ್‌ಪೇಟೆಯ ಎಂ.ಜಿ. ಮಾರುಕಟ್ಟೆಯಲ್ಲಿ 1,441, ಆಂಡರಸನ್‌ಪೇಟೆಯ ಮಾರುಕಟ್ಟೆಯಲ್ಲಿ 207, ಸ್ಯಾನಿಟರಿ ಬೋರ್ಡ್‌ ಬಳಿ 27 ಮತ್ತು ನಗರಸಭೆ ಮೈದಾನದ ಬಳಿ 22 ಅಂಗಡಿಗಳನ್ನು ಹನ್ನೆರಡು ವರ್ಷದ ಅವಧಿಗೆ ಇ–ಪ್ರಕ್ಯೂರ್‌ಮೆಂಟ್‌ ಮೂಲಕ ಹರಾಜು ಹಾಕಲಾಗುತ್ತದೆ.

ಅಂಗಡಿಗಳನ್ನು 24 ಸ್ಲಾಟ್‌ಗಳನ್ನಾಗಿ ವಿಂಗಡಿಸಲಾಗಿದೆ. ಪ್ರತಿ ಸ್ಲಾಟ್‌ಗಳಲ್ಲಿ 75 ಅಂಗಡಿಗಳು ಇರುತ್ತವೆ. ಈಗಾಗಲೇ, ಅಂಗಡಿಗಳಿಗೆ ಗುರುತಿನ ನಂಬರ್ ಹಾಕಲಾಗಿದೆ. ಜ. 29ರಂದು ಬೆಳಿಗ್ಗೆ 11ಗಂಟೆಗೆ ಲೈವ್‌ ಹರಾಜು ಪ್ರಕ್ರಿಯೆ ಶುರುವಾಗಲಿದ್ದು, ಮಾರ್ಚ್‌ 20ರಂದು ಮುಗಿಯುತ್ತದೆ.

ADVERTISEMENT

ನಗರಸಭೆಗೆ ಯಾವುದೇ ರೀತಿಯ ತೆರಿಗೆ, ಶುಲ್ಕ ಮತ್ತು ಬಾಡಿಗೆ ಪಾವತಿ ಮಾಡದೆ ಇರುವವರಿಗೆ ಹರಾಜಿನಲ್ಲಿ ಭಾಗವಹಿಸಲು ಅವಕಾಶವಿಲ್ಲ. ಎಸ್‌ಸಿ, ಎಸ್‌ಟಿ ಮತ್ತು ಅಂಗವಿಕಲರಿಗೆ ಮೀಸಲಾತಿ ಕಲ್ಪಿಸಲಾಗಿದೆ. ಮೀಸಲಾತಿ ಇರುವ ಅಂಗಡಿಗಳನ್ನು ಬಿಟ್ಟು ಉಳಿದ ಅಂಗಡಿಗಳಲ್ಲಿರುವ ಹಾಲಿ ಮಾಲೀಕರು ರೈಟ್‌ ಆಫ್‌ ಫಸ್ಟ್‌ ರೆಫ್ಯೂಸಲ್‌ ಪ್ರಕಾರ, ಬಿಡ್‌ ಆಗಿರುವ ಬೆಲೆಗೆ ಶೇಕಡ 5ರಷ್ಟು ಹೆಚ್ಚಿನ ಹಣ ನೀಡಿ ಬಾಡಿಗೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಇ–ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವ ಬಿಡ್‌ದಾರರು ನಗರಸಭೆ ವಿರುದ್ಧ ಯಾವುದೇ ನ್ಯಾಯಾಲಯದಲ್ಲಿ ಸಿವಿಲ್‌ ದಾವೆ ಹೂಡಿದ್ದಲ್ಲಿ ಅಂತಹವರಿಗೆ ಹರಾಜಿನಲ್ಲಿ ಭಾಗವಹಿಸಲು ನಿಷೇಧಿಸಲಾಗಿದೆ.

ನಗರಸಭೆ ಸಿಬ್ಬಂದಿ ತೆರವು ನೋಟಿಸ್ ನೀಡುತ್ತಿದ್ದಂತೆಯೇ ಎಂ.ಜಿ. ಮಾರುಕಟ್ಟೆಯಲ್ಲಿ ವರ್ತಕರ ಮುಖದಲ್ಲಿ ಆತಂಕ ಮಡುಗಟ್ಟಿದೆ. ಸುಮಾರು ಒಂದು ಶತಮಾನಗಳಷ್ಟು ದೀರ್ಘಕಾಲ ನಡೆಸಿಕೊಂಡು ಬಂದಿದ್ದ ಅಂಗಡಿಗಳನ್ನು ಈಗ ಬೇರೆಯವರ ಕೈಗೆ ಒಪ್ಪಿಸಬೇಕಾಗುತ್ತದೆ ಎಂಬ ಆತಂಕ ಕಾಣುತ್ತಿದೆ.

‘ಅಂಗಡಿಗಳನ್ನು ತೆರವು ಮಾಡಿ ಏನು ಸಾಧನೆ ಮಾಡಿದಂತಾಗುತ್ತದೆ. ನಮಗೇ ಕೊಡಿ, ಸರ್ಕಾರ ನಿಗದಿ ಮಾಡುವ ಠೇವಣಿ ಮತ್ತು ಬಾಡಿಗೆ ನೀಡುತ್ತೇವೆ’ ಎಂದು ವರ್ತಕರ ಸಂಘದ ಮುಖಂಡ ರಾಜಣ್ಣ ಹೇಳಿದರು.

ಇ–ಹರಾಜು ಹಾಕಿದರೆ ಹಣವಂತರು ಅಂಗಡಿಗಳನ್ನು ಬಾಡಿಗೆ ತೆಗೆದುಕೊಳ್ಳುತ್ತಾರೆ. ಬಡ ವ್ಯಾಪಾರಿಗಳು ಅಷ್ಟೊಂದು ದುಡ್ಡು ಕೊಟ್ಟು ಹರಾಜಿನಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಮಾರುಕಟ್ಟೆ ಸಮಸ್ಯೆ ವರ್ತಕರ ಸಮಸ್ಯೆ ಅಲ್ಲ. ಇದು ಊರಿನ ಸಮಸ್ಯೆ ಎಂದು ತಿಳಿಸಿದರು.

ಸರ್ಕಾರದ ನಿರ್ಧಾರ ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋಗುವವರಿಗೆ ಮಾರ್ಗ ತೋರಿಸಲಾಗಿದೆ. ಅವರಿಗೆ ವರ್ತಕರ ಸಂಘ ಸಹಾಯ ಮಾಡುತ್ತದೆ. ಕೋಲಾರದಲ್ಲಿ ನಗರಸಭೆ ನಡೆಸಿದ ಹರಾಜಿನಲ್ಲಿ ಭಾಗವಹಿಸಿ, ಅಂಗಡಿ ಪಡೆದಿದ್ದ ವರ್ತಕರ ಪರಿಸ್ಥಿತಿ ಇಲ್ಲಿನ ವರ್ತಕರಿಗೆ ಬರಬಾರದು. ಅಂಗಡಿಯೂ ಇಲ್ಲ, ಠೇವಣಿ ಹಣವೂ ಇಲ್ಲ ಎಂಬ ಪರಿಸ್ಥಿತಿ ಬಂದರೆ ವರ್ತಕರು ಎಲ್ಲಿಗೆ ಹೋಗಬೇಕು ಎಂದು ವರ್ತಕರ ಸಂಘದ ಅಧ್ಯಕ್ಷ ದೇವೇಂದ್ರನ್‌ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.