ADVERTISEMENT

ಕೋಲಾರ ಜಿಲ್ಲೆಯಲ್ಲಿ ಮುನಿಯಪ್ಪ ಹೊಸ ಅಧ್ಯಾಯ!

ಕೋಲಾರ ರಾಜಕಾರಣದಲ್ಲಿ ಮತ್ತೆ ಸಕ್ರಿಯವಾಗುವ ಸುಳಿವು ನೀಡಿದ ಆಹಾರ ಸಚಿವ

ಕೆ.ಓಂಕಾರ ಮೂರ್ತಿ
Published 13 ಮೇ 2025, 4:44 IST
Last Updated 13 ಮೇ 2025, 4:44 IST
ಕೋಲಾರದ ತಮ್ಮ ನಿವಾಸದಲ್ಲಿ ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಮಾತನಾಡಿದರು
ಕೋಲಾರದ ತಮ್ಮ ನಿವಾಸದಲ್ಲಿ ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಮಾತನಾಡಿದರು   

ಕೋಲಾರ: ಕೋಲಾರ ಜಿಲ್ಲೆಯ ರಾಜಕಾರಣದಲ್ಲಿ ಮತ್ತೆ ಸಕ್ರಿಯವಾಗುವ ಸುಳಿವನ್ನು ಆಹಾರ ಸಚಿವ ಹಾಗೂ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ನೀಡಿದ್ದಾರೆ.

ಜಿಲ್ಲೆಯ ರಾಜಕಾರಣದಲ್ಲಿ ‘ಹಳೆ ಹುಲಿ’ ಎನಿಸಿರುವ ಅವರು ಇದರೊಂದಿಗೆ ಹೊಸ ಅಧ್ಯಾಯ ಆರಂಭಿಸುತ್ತಿದ್ದಾರೆ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ. ಇದು ಸಹಜವಾಗಿ ಜಿಲ್ಲೆಯ ರಾಜಕಾರಣದಲ್ಲಿ ಹೊಸ ಸಂಚಲನ ಉಂಟು ಮಾಡಿದೆ.

ಕೋಲಾರ ಲೋಕಸಭಾ ಕ್ಷೇತ್ರದಿಂದ ಸತತ ಏಳು ಬಾರಿ ಗೆದ್ದಿದ್ದ ಅವರು ಕೇಂದ್ರ ಸರ್ಕಾರದಲ್ಲಿ ಎರಡು ಬಾರಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ಆದರೆ, ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ ಕ್ಷೇತ್ರದಿಂದ ಶಾಸಕರಾಗಿ ಸಚಿವರಾದ ಮೇಲೆ ಕೋಲಾರಕ್ಕೆ ಅಪರೂಪಕ್ಕೊಮ್ಮೆ ಬಂದು ಹೋಗುತ್ತಿದ್ದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ತಮ್ಮ ಅಳಿಯನಿಗೆ ಟಿಕೆಟ್‌ ಕೈತಪ್ಪಿದ ಬಳಿಕ ಜಿಲ್ಲೆಯಿಂದ ಮತ್ತಷ್ಟು ದೂರವೇ ಉಳಿದಿದ್ದರು. ಅಲ್ಲದೇ, ಜಿಲ್ಲೆಯಲ್ಲಿನ ಎರಡು ರಾಜಕೀಯ ಬಣಗಳ ಕಿತ್ತಾಟದಿಂದ ಬೇಸರಗೊಂಡಿದ್ದರು.

ADVERTISEMENT

ಹೀಗಾಗಿ, ನಗರದ ಹಾರೋಹಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ಅವರು ವಾಸ್ತವ್ಯ ಇರಲಿಲ್ಲ. ಈಗ ಸುಣ್ಣಬಣ್ಣ ಬಳಿಸಿ ವಾಸ್ತವ್ಯಕ್ಕೆ ಮತ್ತೆ ಸಜ್ಜುಗೊಳಿಸಿದ್ದಾರೆ, ವಿಶೇಷ ಪೂಜೆ ಕೂಡ ಮಾಡಿದ್ದು ಕನಿಷ್ಠ 15 ದಿನಗಳಿಗೊಮ್ಮೆಯಾದರೂ ಬಂದು ಹೋಗುವುದಾಗಿ ಹೇಳಿದ್ದಾರೆ.

‘ರಾಜಕೀಯ ಜೀವನ ನೀಡಿದ ಕೋಲಾರಕ್ಕೆ 15 ದಿನಗಳಿಗೊಮ್ಮೆಯಾದರೂ ಬಂದು ಜನರು ಹಾಗೂ ಕಾರ್ಯಕರ್ತರನ್ನು ಭೇಟಿಯಾಗುತ್ತೇನೆ, ಕಷ್ಟ ಸುಖ ವಿಚಾರಿಸುತ್ತೇನೆ. ಕೋಲಾರ–ಚಿಕ್ಕಬಳ್ಳಾಪುರ ಜನರು ನನ್ನನ್ನು ಸತತ ಏಳು ಬಾರಿ ಗೆಲ್ಲಿಸಿದ್ದಾರೆ. ರಾಜಕೀಯವಾಗಿ ನಿರಂತರವಾಗಿ ನನ್ನ ಕೈಹಿಡಿದ ಜನರ ರಕ್ಷಣೆ ಮಾಡುವುದು ನನ್ನ ಕರ್ತವ್ಯ. ಅದನ್ನು ಪುನರಾರಂಭಿಸುತ್ತೇನೆ’ ಎಂದು ಮುನಿಯಪ್ಪ ನುಡಿದಿದ್ದಾರೆ.

‘ರಾಜಕೀಯ ಏರುಪೇರು ಸಹಜ. ವ್ಯಕ್ತಿಗಿಂತ ಪಕ್ಷ ದೊಡ್ಡದು, ಸಂಘಟನೆ ಮುಖ್ಯ. ಚುನಾಯಿತ ಪ್ರತಿನಿಧಿಗಳಾದ ನಾವು ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗಬೇಕು’ ಎಂದಿದ್ದಾರೆ.

‘ಚುನಾವಣೆಗಾಗಿ ದೇವನಹಳ್ಳಿಗೆ ಸ್ಥಳಾಂತರಗೊಂಡಿದ್ದರಿಂದ ಕಾಲಕಾಲಕ್ಕೆ ಕೋಲಾರಕ್ಕೆ ಬರಲು ಸಾಧ್ಯವಾಗಲಿಲ್ಲ’ ಎಂದು ಎಂಬುದನ್ನು ಒತ್ತಿ ಹೇಳಿದ್ದಾರೆ.

ಇಷ್ಟಲ್ಲದೇ, ಅವರೇ ಹೇಳಿದಂತೆ ರಾಜ್ಯ ಕಾಂಗ್ರೆಸ್‌ ಸರ್ಕಾರ ಎರಡೂವರೆ ವರ್ಷ ಪೂರೈಸಿದ ನಂತರ ಹಿರಿಯ ಸಚಿವರು ರಾಜೀನಾಮೆ ನೀಡಿ ಎರಡನೇ ಹಂತದ ನಾಯಕರಿಗೆ ಅವಕಾಶ ಮಾಡಿಕೊಡಬೇಕಂತೆ. ಮುನಿಯಪ್ಪ ಕೂಡ ಹಿರಿಯ ಸಚಿವರೇ. ಹೀಗಾಗಿ, ಕೋಲಾರದ ರಾಜಕಾರಣದಲ್ಲಿ ಸಕ್ರಿಯವಾಗುವ ಅವರ ಮಾತುಗಳು ಕುತೂಹಲ ಮೂಡಿಸಿವೆ. 

ಪೂಜಾ ಕಾರ್ಯಕ್ರಮದಲ್ಲಿ ಶಾಸಕರಾದ ಎಸ್‌.ಎನ್‌.ನಾರಾಯಣಸ್ವಾಮಿ, ರೂಪಕಲಾ ಶಶಿಧರ್‌, ಮಾಜಿ ಶಾಸಕ ಎಂ.ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ಎಂ.ಆರ್‌.ರವಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ., ಜಿಲ್ಲಾ ಪಂಚಾಯಿತಿ ಸಿಇಒ ಪ್ರವೀಣ್‌ ಪಿ.ಬಾಗೇವಾಡಿ, ಉಪವಿಭಾಗಾಧಿಕಾರಿ ಡಾ.ಮೈತ್ರಿ, ತಹಶೀಲ್ದಾರ್‌ ನಯನಾ, ನಗರಸಭೆ ಸದಸ್ಯ ಮುರಳಿಗೌಡ, ಮುಖಂಡರಾದ ಶೇಷಾಪುರ ಗೋಪಾಲ್‌, ಚಂದ್ರಾರೆಡ್ಡಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ, ಕಾರ್ಯಾಧ್ಯಕ್ಷ ಊರಬಾಗಿಲು ಶ್ರೀನಿವಾಸ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಪ್ರಸಾದ್‌ ಬಾಬು, ಉದಯಶಂಕರ್‌, ಎಸ್‌ಸಿ ಘಟಕದ ಅಧ್ಯಕ್ಷ ಕೆ.ಜಯದೇವ್‌, ಎಸ್‌ಟಿ ಘಟಕದ ಅಧ್ಯಕ್ಷ ನಾಗರಾಜ್‌, ಓಬಿಸಿ ಘಟಕದ ಮಂಜುನಾಥ್‌, ಮಹಿಳಾ ಘಟಕದ ರತ್ನಮ್ಮ ಇದ್ದರು.

ಜಿಲ್ಲೆಯಲ್ಲಿ ಕಾಂಗ್ರೆಸ್‌ ಬಲಿಷ್ಠವಾಗಿದ್ದು ಜಿ.ಪಂ ತಾ.ಪಂ ಚುನಾವಣೆಯಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಿ ಅಧಿಕಾರಕ್ಕೆ ತರಬೇಕು. ಡಿಸಿಸಿ ಬ್ಯಾಂಕ್‌ ಕೋಮುಲ್‌ ಚುನಾವಣೆಯಲ್ಲಿ ಶ್ರಮಹಾಕಿ ಗೆಲ್ಲಬೇಕು
ಕೆ.ಎಚ್‌.ಮುನಿಯಪ್ಪ ಆಹಾರ ಸಚಿವ

ಮುನಿಯಪ್ಪ ಮನೆಗೆ ಸುಣ್ಣಬಣ್ಣ ಪೂಜೆ!

ಕೋಲಾರ ನಗರದ ಹಾರೋಹಳ್ಳಿಯಲ್ಲಿರುವ ಕೆ.ಎಚ್‌.ಮುನಿಯಪ್ಪ ಅವರ ನಿವಾಸಕ್ಕೆ ಸುಣ್ಣಬಣ್ಣ ಬಳಿದು ಸಿದ್ಧಗೊಳಿಸಲಾಗಿದೆ. ಇದಲ್ಲದೇ ಸೋಮವಾರ ಸತ್ಯನಾರಾಯಣ ಪೂಜೆ ಕೂಡ ನಡೆಯಿತು. ಗಣೇಶನ ಹೋಮ ದೇವತಾ ಪೂಜಾ ತೀರ್ಥಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿತ್ತು. ಕುಟುಂಬಸ್ಥರು ರಾಜಕೀಯ ಮುಖಂಡರು ಅಧಿಕಾರಿಗಳು ಪಾಲ್ಗೊಂಡಿದ್ದರು.

ಶಾಸಕರ ಒಂದು ಬಣ ಗೈರು

ಜಿಲ್ಲೆಯಲ್ಲಿ ಕಾಂಗ್ರೆಸ್‌ ಶಾಸಕರ ಒಂದು ಬಣ ಹಾಗೂ ಅವರ ಬೆಂಬಲಿಗರು ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿಲ್ಲ. ಶಾಸಕರಾದ ಕೆ.ವೈ.ನಂಜೇಗೌಡ ಕೊತ್ತೂರು ಮಂಜುನಾಥ್‌ ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌ ಬಂದಿರಲಿಲ್ಲ. ಈ ಕುರಿತು ಪ್ರತಿಕ್ರಿಯಿಸಿದ ಮುನಿಯಪ್ಪ ‘ಎಲ್ಲರಿಗೂ ಆಹ್ವಾನ ನೀಡಿದ್ದೇವೆ’ ಎಂದರು. ಪಕ್ಕದಲ್ಲಿದ್ದ ಊರುಬಾಗಿಲು ಶ್ರೀನಿವಾಸ್‌ ‘ಬೇರೆ ತುರ್ತು ಕಾರ್ಯಕ್ರಮವಿರುವ ಕಾರಣ ಅವರೆಲ್ಲಾ ಬಂದಿಲ್ಲ’ ಎಂದು ನುಡಿದರು. ಇನ್ನುಳಿದಂತೆ ‘ಮತ್ತೊಂದು ಬಣ’ದ ಶಾಸಕಿ ಮತ್ತು ಪುತ್ರಿ ರೂಪಕಲಾ ಶಶಿಧರ್‌ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ ಕಾರ್ಯಾಧ್ಯಕ್ಷ ಊರಬಾಗಿಲು ಶ್ರೀನಿವಾಸ್‌ ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.