ಕೋಲಾರ: ನಾಡಹಬ್ಬ ಮೈಸೂರು ದಸರಾ ಮೆರವಣಿಗೆಯಲ್ಲಿ ಈ ಬಾರಿ ಕೋಲಾರ ಜಿಲ್ಲೆಯ ಪ್ರಮುಖ ಆಕರ್ಷಣೀಯಗಳಾದ ರೇಷ್ಮೆ, ಹಾಲು ಹಾಗೂ ಮಾವಿನ ಖ್ಯಾತಿಯನ್ನು ಸಾರಲಾಗುತ್ತಿದೆ.
ಅ.2ರಂದು (ಗುರುವಾರ) ಮೈಸೂರು ಅರಮನೆಯಿಂದ ಬನ್ನಿಮಂಟಪದವರೆಗೆ ಸಾಗಲಿರುವ ಜಂಬೂ ಸವಾರಿ ಮೆರವಣಿಗೆಯಲ್ಲಿ ಇಡೀ ಕೋಲಾರದ ಗರಿಮೆ ಸಾರಲಿರುವ ಸ್ತಬ್ಧಚಿತ್ರವನ್ನು ಈ ಸಲ ಕಣ್ತುಂಬಿಕೊಳ್ಳಬಹುದು. ಕೋಲಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿಯಿಂದ ಈ ಸ್ತಬ್ಧಚಿತ್ರದ ನಿರ್ಮಾಣ ಮಾಡಲಾಗಿದೆ.
ಸ್ತಬ್ಧಚಿತ್ರದ ಉಸ್ತುವಾರಿಯನ್ನು ಈ ವರ್ಷವೂ ಕೈಗಾರಿಕಾ ಇಲಾಖೆ ಉಪನಿರ್ದೇಶಕ ರವಿಚಂದ್ರನ್ ವಹಿಸಿಕೊಂಡಿದ್ದಾರೆ. ಸ್ತಬ್ಧಚಿತ್ರದ ಅಂತಿಮ ಸಿದ್ಧತೆಯಲ್ಲಿ ಅವರು ತೊಡಗಿದ್ದಾರೆ. ಮಾವಿನ ಮರ, ಹಸು, ಹಾಲಿನ ಕ್ಯಾನ್ ಹಾಗೂ ರೇಷ್ಮೆ ಕೃಷಿಯು ಸ್ತಬ್ಧಚಿತ್ರದಲ್ಲಿ ಒಡಮೂಡುತ್ತಿದೆ.
ಕಳೆದ ಬಾರಿ ಕೆಜಿಎಫ್ ತಾಲ್ಲೂಕಿನ ಕಮ್ಮಸಂದ್ರ ಗ್ರಾಮದ ಕೋಟಿ ಲಿಂಗೇಶ್ವರ ದೇಗುಲದ ಸ್ತಬ್ಧಚಿತ್ರ ಪ್ರದರ್ಶಿಸಲಾಗಿತ್ತು. ಅದಕ್ಕೂ ಮೊದಲಿನ ವರ್ಷ ಅರಾಭಿಕೊತ್ತನೂರು ಗ್ರಾಮದ ವೀರಗಲ್ಲು ಉದ್ಯಾನದ ಸ್ತಬ್ಧಚಿತ್ರ ದಸರೆ ಮೆರವಣಿಗೆಯಲ್ಲಿ ಪಾಲ್ಗೊಂಡಿತ್ತು.
‘ಕೋಲಾರ ಜಿಲ್ಲೆಯ ರೇಷ್ಮೆ, ಹಾಲು, ಮಾವಿಗೆ ಹೆಸರುವಾಸಿ. ಹೀಗಾಗಿ, ಈ ಬಾರಿ ದಸರೆಯಲ್ಲಿ ಈ ಸಂಬಂಧಿಸಿದ ಸ್ತಬ್ಧಚಿತ್ರ ಪ್ರದರ್ಶಿಸಲಾಗುತ್ತಿದೆ. ಜಿಲ್ಲಾಧಿಕಾರಿ ಎಂ.ಆರ್.ರವಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ ಮಾರ್ಗದರ್ಶನದಲ್ಲಿ ಸ್ತಬ್ಧಚಿತ್ರ ರೂಪಿಸಲಾಗಿದೆ’ ಎಂದು ರವಿಚಂದ್ರನ್ ‘ಪ್ರಜಾವಾಣಿ’ಗೆ ತಿಳಿಸಿದರು.
ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಮಾವು ಬೆಳೆಯುವ ಜಿಲ್ಲೆ ಕೋಲಾರ. ಅದರಲ್ಲೂ ಶ್ರೀನಿವಾಸಪುರ ‘ಮಾವಿನ ನಾಡು’ ಎಂದೇ ಪ್ರಸಿದ್ಧಿ. ಹಾಗೆಯೇ ರೇಷ್ಮೆಯಲ್ಲೂ ಮುಂದಿದೆ. ಜಿಲ್ಲೆಯ ಹೆಚ್ಚಿನ ರೈತರು ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ಈ ವಿಚಾರದಲ್ಲಿ ರಾಜ್ಯಕ್ಕೆ ಮಾದರಿಯಾಗಿದೆ.
ರೇಷ್ಮೆ ಕೃಷಿ: ಜಿಲ್ಲೆಯ 1,477 ಹಳ್ಳಿಗಳಲ್ಲಿ ಒಟ್ಟು 19,818 ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 19,117 ರೈತರು ರೇಷ್ಮೆ ಕೃಷಿಯಲ್ಲಿ ತೊಡಗಿದ್ದಾರೆ. ವಾಣಿಜ್ಯ ಬೆಳೆಯಾಗಿದ್ದು ಅನೇಕ ರೈತರಿಗೆ, ಕೃಷಿ ಕಾರ್ಮಿಕರಿಗೆ ಉದ್ಯೋಗ ಒದಗಿಸಿದೆ.
ರೈತರ ಜೀವಾಳ ಹೈನುಗಾರಿಕೆ: ಜಿಲ್ಲೆಯ ಹಾಲು ಒಕ್ಕೂಟದಲ್ಲಿ (ಕೋಮುಲ್) 994 ಡೇರಿಗಳಿದ್ದು, 42,064 ಹಾಲು ಉತ್ಪಾದಕರಿಂದ ಸರಾಸರಿ ಶೇ 7.5 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿದೆ. ಅಂದಾಜು ₹ 1,300 ಕೋಟಿ ವಹಿವಾಟು ನಡೆಯುತ್ತಿದೆ. ಪ್ರತಿ ತಿಂಗಳು ₹ 90 ಕೋಟಿಯನ್ನು ಹಾಲು ಉತ್ಪಾದಕರಿಗೆ ಒಕ್ಕೂಟದಿಂದ ಪಾವತಿಸಲಾಗುತ್ತಿದೆ. ಹೊರ ರಾಜ್ಯಗಳಿಗೂ ಒಕ್ಕೂಟದಿಂದ ಹಾಲು ಪೂರೈಸಲಾಗುತ್ತಿದೆ. ತಿರುಪತಿಗೆ ನಂದಿನಿ ತುಪ್ಪ ರವಾನೆಯಾಗುತ್ತಿದೆ.
ಮಾವಿನ ನಾಡಿಗೆ ಸ್ವಾಗತ: ಜಿಲ್ಲೆಯಲ್ಲಿ 39,331 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಈ ಪೈಕಿ ಶ್ರೀನಿವಾಸಪುರ ತಾಲ್ಲೂಕು ಅತಿ ಹೆಚ್ಚು ಮಾವು ಬೆಳೆಯುವ ಪ್ರದೇಶವಾಗಿದೆ. ಪ್ರಮುಖವಾಗಿ ತೋತಾಪುರಿ, ಬಾದಾಮಿ, ನೀಲಂ, ಮಲ್ಲಿಕಾ, ರಸಪೂರಿ, ರಾಜಗಿರ ತಳಿಗಳನ್ನು ಬೆಳೆಯಲಾಗುತ್ತಿದೆ. ದೇಶವಿದೇಶಗಳಿಗೆ ಮಾವಿನ ಹಣ್ಣು ರಫ್ತು ಮಾಡಲಾಗುತ್ತಿದೆ.
ಮೈಸೂರು ದಸರಾ ಮೆರವಣಿಗೆಯಲ್ಲಿ ಈ ಬಾರಿ ಕೋಲಾರದ ಹಿರಿಮೆಯನ್ನು ಸಾರಲಾಗುತ್ತಿದೆ. ಸ್ತಬ್ಧಚಿತ್ರಕ್ಕೆ ಅಂತಿಮ ಸ್ಪರ್ಶ ನೀಡಲಾಗುತ್ತಿದ್ದು ಎಲ್ಲರ ಮೆಚ್ಚುಗೆ ಗಳಿಸಲಿದೆ ಎಂಬ ವಿಶ್ವಾಸವಿದೆರವಿಚಂದ್ರನ್ ನೋಡಲ್ ಅಧಿಕಾರಿ ಕೋಲಾರ
ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿಯಿಂದ ಮೈಸೂರು ದಸರೆಗೆ ಕಳುಹಿಸಿಕೊಡ ಬೇಕಿರುವ ಸ್ತಬ್ಧಚಿತ್ರಗಳ ಕುರಿತು ಚರ್ಚಿಸಲಾಗಿತ್ತು. ಅಂತಿಮವಾಗಿ ಸೋಮೇಶ್ವರ ದೇಗುಲ ಅಂತರ್ಜಲ ಮಹತ್ವ ಹಾಗೂ ರೇಷ್ಮೆ ಹೈನು ಮಾವಿನ ಸ್ತಬ್ಧಚಿತ್ರದ ವಿಷಯಗಳನ್ನು ಸಚಿವ ಡಾ.ಎಚ್.ಸಿ.ಮಹದೇವಪ್ಪ ನೇತೃತ್ವದ ಮೈಸೂರು ದಸರಾ ಸ್ತಬ್ಧಚಿತ್ರ ಸಮಿತಿಗೆ ಕಳುಹಿಸಿಕೊಡಲಾಗಿತ್ತು. ಅದರಲ್ಲಿ ಸಮಿತಿಯು ರೇಷ್ಮೆ ಹೈನು ಮಾವಿನ ಸ್ತಬ್ಧಚಿತ್ರಕ್ಕೆ ಸಮ್ಮತಿ ದೊರಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.