ಕೋಲಾರ: ‘ಕೋಮುಲ್ ನಿರ್ದೇಶಕರ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಶಾಸಕ ಕೆ.ವೈ.ನಂಜೇಗೌಡ ಬಿಜೆಪಿಯವರ ಮುಖಾಂತರ ನನ್ನ ಬಂಗಾರಪೇಟೆ ಕ್ಷೇತ್ರದಲ್ಲಿ ಹಣ ಹಂಚಿದ್ದಾರೆ. ಈ ಬಗ್ಗೆ ನನ್ನಲ್ಲಿ ಸಾಕ್ಷ್ಯವಿದೆ’ ಎಂದು ಕಾಂಗ್ರೆಸ್ ಶಾಸಕ, ಕೋಮುಲ್ ನೂತನ ನಿರ್ದೇಶಕ ಎಸ್.ಎನ್.ನಾರಾಯಣಸ್ವಾಮಿ ಸ್ವಪಕ್ಷೀಯರ ವಿರುದ್ಧವೇ ಗಂಭೀರ ಆರೋಪ ಮಾಡಿದರು.
ಜಿಲ್ಲಾಡಳಿತ ಭವನದ ಎದುರು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಾರಾಯಣಸ್ವಾಮಿ ಎಂಬುವರ ಮನೆಯಲ್ಲಿ ಕುಳಿತು ಎಲ್ಲರನ್ನು ಕರೆಸಿ ರಾಜಕಾರಣ ಮಾಡಲಿಲ್ಲವೇ? ಮಾರ್ಕಂಡೇಗೌಡ ಎಂಬುವರನ್ನು ಮನೆಗೆ ಕರೆಸಿಕೊಂಡು ಹಣ ನೀಡಲಿಲ್ಲವೇ? ನನ್ನ ವಿರುದ್ಧ ಹುನ್ಕುಂದ ವೆಂಕಟೇಶ್ ಅವರನ್ನು ಕಣಕ್ಕಿಳಿಸಲು ಅವರೇ ಕಾರಣ. ಅದನ್ನು ನಾನು ಪ್ರಶ್ನೆಯೇ ಮಾಡಲಿಲ್ಲವಲ್ಲ ದೇವರು’ ಎಂದು ಗುಡುಗಿದ್ದಾರೆ.
‘ನನ್ನ ವಿರುದ್ಧ ಬಿಜೆಪಿ ಬೆಂಬಲಿತರಾಗಿ ಹುನ್ಕುಂದ ವೆಂಕಟೇಶ್ ಅಭ್ಯರ್ಥಿ ಆಗುತ್ತಿರಲಿಲ್ಲ. ಅವರನ್ನು ಮಾರ್ಕಂಡೇಗೌಡ ತಮ್ಮ ಮನೆಗೆ ಕರೆಸಿಕೊಂಡು ಹಣ ಕೊಟ್ಟಿರುವುದು ನನಗೆ ಗೊತ್ತಿಲ್ಲವೇ? ಎಲ್ಲಾ ಗೊತ್ತಿದ್ದು, ಸುಮ್ಮನಿದ್ದೇನೆ’ ಎಂದರು.
‘ಹೂಡಿ ವಿಜಯಕುಮಾರ್ ನನ್ನ ಸ್ನೇಹಿತ. ಜೊತೆಗೆ ಉದ್ಯಮ ನಡೆಸಿದವರು. ಸಭೆಯೊಂದರಲ್ಲಿ ಪಾಲ್ಗೊಂಡ ಬಳಿಕ ಕಾಫಿ ಕುಡಿಯಲು ಮನೆಗೆ ಕರೆದಿದ್ದಕ್ಕೆ ನಾನು ಹೋಗಿದ್ದೆ. ಅದು ತಪ್ಪೇ? ನಾನು ಏನು ಅಂಥ ಅಪರಾಧ ಮಾಡಿದ್ದೆ? ಬಿಜೆಪಿ ಮಾಜಿ ಶಾಸಕ ಮಾಲೂರಿನ ಮಂಜುನಾಥ್ ಗೌಡ, ಜೆಡಿಎಸ್‌ನ ರಾಮೇಗೌಡ ಕೂಡ ಸ್ನೇಹಿತರು. ಅವರೊಟ್ಟಿಗೆ ಮಾತನಾಡುತ್ತೇನೆ. ಆದರೆ, ರಾಜಕೀಯ ಬಂದಾಗ ನಾನು ಕಾಂಗ್ರೆಸ್, ಅವರು ಬೇರೆ ಪಕ್ಷದವರು. ಅವರ ಜೊತೆ ಕೈಜೋಡಿಸುವ ಮಾತೇ ಇಲ್ಲ’ ಎಂದು ಹೇಳಿದರು.
‘ಕೋಚಿಮುಲ್ ಭ್ರಷ್ಟಾಚಾರ ಸಂಬಂಧ ಮುಖ್ಯಮಂತ್ರಿಗೆ ಸಂಪೂರ್ಣ ಕಡತ ಕೊಟ್ಟಿದ್ದೇನೆ. ತನಿಖೆಯ ಭರವಸೆ ನೀಡಿದ್ದಾರೆ. ಏನೂ ನಡೆದಿಲ್ಲ ಎಂಬುದಾಗಿ ಉಸ್ತುವಾರಿ ಸಚಿವರು, ನಂಜೇಗೌಡರು ಹೇಳಬಹುದು. ಆದರೆ, ಅಕ್ರಮದ ದಾಖಲೆ, ಸಾಕ್ಷಿ ಕೊಡಲು ಸಿದ್ಧ. ಈ ಸಂಬಂಧ ನಾನು ರಾಜಿ ಆಗುವುದಿಲ್ಲ. ಯಾವ ಅಧಿಕಾರಿಗಳು ಕಾನೂನು ಉಲ್ಲಂಘನೆ ಮಾಡಿ ಅಕ್ರಮ ಮಾಡಿದ್ದಾರೋ ಅವರನ್ನು ಜೈಲಿಗೆ ಕಳಿಸದೆ ಬಿಡಲ್ಲ’ ಎಂದು ಸವಾಲು ಹಾಕಿದರು.
‘ನನಗೂ ನಂಜೇಗೌಡರಿಗೂ ವ್ಯಕ್ತಿಗತವಾಗಿ ಯಾವುದೇ ವ್ಯಾಜ್ಯ ಇಲ್ಲ. ನಾವಿಬ್ಬರೂ ಒಂದೇ ಪಕ್ಷದವರು. ಅವರನ್ನು ವ್ಯಕ್ತಿಗತವಾಗಿ ಪ್ರೀತಿಸುತ್ತೇನೆ. ಅವರ ಆಸ್ತಿಗೆ ನಾನು ಹೊಗಿಲ್ಲ, ನನ್ನ ಆಸ್ತಿಗೆ ಅವರು ಬಂದಿಲ್ಲ. ಆದರೆ ರೈತರು ಮತ್ತು ಬಡವರಿಗೆ ಅನ್ಯಾಯವಾದಾಗ ಸುಮ್ಮನಿರಲು ಸಾಧ್ಯವಿಲ್ಲ. ಕೋಚಿಮುಲ್‌ನಲ್ಲಿ ನೂರಾರು ಕೋಟಿ ಭ್ರಷ್ಟಾಚಾರ ನಡೆದಿದ್ದು, ಅದನ್ನು ಪ್ರಶ್ನಿಸುವುದು ನನ್ನ ಜನ್ಮಸಿದ್ಧ ಹಕ್ಕು. ಚಿಕ್ಕಬಳ್ಳಾಪುರ ಡೇರಿ ನಿರ್ಮಾಣ, ಚಿಂತಾಮಣಿ ಐಸ್ ಕ್ರೀಂ ಘಟಕ, ಎಂವಿಕೆ ಗೋಲ್ಡನ್ ಡೇರಿ ನಿರ್ಮಾಣ, ಸೋಲಾರ್ ಘಟಕ ನಿರ್ಮಾಣ, ನೇಮಕಾತಿ ಮತ್ತು ಸಾಗಣೆಯಲ್ಲಿ ಕಾನೂನನ್ನು, ನಿಯಮಗಳನ್ನು ಗಾಳಿಗೆ ತೂರಿ ರೈತರ ಹಣ ಲಪಟಾಯಿಸಿದ್ದಾರೆ. ಇದರ ವಿರುದ್ಧ ನನ್ನ ಹೋರಾಟ’ ಎಂದರು.
ಕೋಮುಲ್ ಅಧ್ಯಕ್ಷ ಸ್ಥಾನ ಕೇಳಿದ್ದೆ: ‘ನಾನು ಕೂಡ ಕೋಮುಲ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೆ. 1987ರಿಂದ ಯಾರಿಗೂ ಪರಿಶಿಷ್ಟ ಜಾತಿಯವರಿಗೆ ಅಧ್ಯಕ್ಷ ಸ್ಥಾನದ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಜಿ.ಪರಮೇಶ್ವರ, ಡಾ.ಮಹದೇವಪ್ಪ, ಪ್ರಿಯಾಂಕ್ ಖರ್ಗೆ ಭೇಟಿ ಮಾಡಿ ಅವಕಾಶ ಕೋರಿದ್ದೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ದಲಿತರಿಗೆ ಅವಕಾಶ ಮಾಡಿಕೊಟ್ಟರೆ ಪಕ್ಷಕ್ಕೆ ಒಳ್ಳೆಯದಾಗುತ್ತದೆ ಎಂಬ ಭರವಸೆ ನೀಡಿದ್ದರು’ ಎಂದು ಹೇಳಿದರು.
ಕೋಚಿಮುಲ್‌ನಲ್ಲಿ ಲೂಟಿ ಹೊಡೆದ ಹಣವನ್ನೇ ಒಕ್ಕೂಟದ ಚುನಾವಣೆಯಲ್ಲಿ ಕೋಟಿಗಟ್ಟಲೆ ಸುರಿದು ಗೆದ್ದಿದ್ದಾರೆ. ನನ್ನ ಸೋಲಿಸಲು ಜಾತಿ ಸಂಚು ನಡೆಯಿತು. ಆದರೆ ಒಕ್ಕಲಿಗರು ನನ್ನ ಕೈಬಿಡಲಿಲ್ಲ.ಎಸ್.ಎನ್.ನಾರಾಯಣಸ್ವಾಮಿ, ಶಾಸಕ
‘ಕಡೆ ಗಳಿಗೆಯಲ್ಲಿ ಉಸ್ತುವಾರಿ ಸಚಿವ ಬೈರತಿ ಸುರೇಶ್, ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆ ಮಾಡಿ ಪರ್ಯಾಯ ವ್ಯವಸ್ಥೆ ಮಾಡುವುದಾಗಿಯೂ, ಕೆಎಂಎಫ್‌ಗೆ ಕರೆಸಿಕೊಳ್ಳುವುದಾಗಿಯೂ ಹೇಳಿದರು. ಸ್ಪರ್ಧೆ ಮಾಡಿದರೆ ಸರ್ಕಾರಕ್ಕೆ ಮುಜುಗರವಾಗುತ್ತದೆ ಎಂಬ ಕಿವಿಮಾತು ಹೇಳಿದರು. ಸಿದ್ದರಾಮಯ್ಯ, ಬೈರತಿ ಸುರೇಶ್, ಕೆ.ಎಚ್.ಮುನಿಯಪ್ಪ ಮಾತಿಗೆ ಹಾಗೂ ಪಕ್ಷಕ್ಕೆ ಗೌರವ ನೀಡಿ ಕೋಮುಲ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಲಿಲ್ಲ. ಪಕ್ಷಕ್ಕೆ ಮುಜುಗರ ಉಂಟು ಮಾಡದಂತೆ ನಡೆದುಕೊಂಡಿದ್ದೇನೆ’ ಎಂದರು.
ಕೆಎಂಎಫ್ ಅಧ್ಯಕ್ಷ ಸ್ಥಾನ ಆಕಾಂಕ್ಷಿ ಎಂಬ ನಂಜೇಗೌಡರ ಹೇಳಿಕೆ ಕುರಿತು, ‘ನಂಜೇಗೌಡರು ಕೂಡ ಕೆಎಂಎಫ್‌ಗೆ ಆಕಾಂಕ್ಷಿಯಾಗಿರಬಹುದು. ಮುಖ್ಯಮಂತ್ರಿ ಆಗುವ ಹಕ್ಕು ಕೂಡ ಪ್ರಜಾಪ್ರಭುತ್ವದಲ್ಲಿ ಇದೆ. ಆದರೆ, ನಾನು ನಂಜೇಗೌಡರ ಜೊತೆ ಯಾವುದೇ ರೀತಿ ಮಾತನಾಡಿಲ್ಲ, ಪ್ರಸ್ತಾಪ ಮಾಡಿಲ್ಲ. ನಾನು ಪ್ರಸ್ತಾಪ ಮಾಡಿರುವುದು ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರು, ಸಚಿವ ಮುನಿಯಪ್ಪ ಹಾಗೂ ಉಸ್ತುವಾರಿ ಮಂತ್ರಿ ಬಳಿ. ಅವರ ಮಾತಿಗೆ ಕಟ್ಟುಬಿದ್ದು ಸುಮ್ಮನಿದ್ದೇನೆ. ಈ ನಾಯಕರು ದಾರಿ ತೋರಿಸಿದಂತೆ ನಡೆಯುತ್ತೇನೆ’ ಎಂದು ಹೇಳಿದರು.
ಕೆಎಂಎಫ್ ಡೆಲಿಗೇಟ್ ಭರವಸೆ ಸಿಕ್ಕಿದೆ
‘ಕೆಎಂಎಫ್‌ಗೆ ನನ್ನನ್ನು ಡೆಲಿಗೇಟ್ ಆಗಿ ಕಳಿಸುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ನನ್ನ ಗುರು ಸಚಿವ ಕೆ.ಎಚ್.ಮುನಿಯಪ್ಪ ನೀಡಿದ್ದಾರೆ. ಅವರ ಮಾತಿಗೆ ಗೌರವ ಕೊಟ್ಟು ಸುಮ್ಮನಾಗಿದ್ದೇನೆ’ ಎಂದು ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.
‘ಕೆಎಂಎಫ್ ವಿಚಾರದ ಬಗ್ಗೆ ನಂಜೇಗೌಡರ ಜೊತೆ ಮಾತನಾಡುವ ಅಗತ್ಯ ನನಗಿಲ್ಲ. ನನಗೆ ವರಿಷ್ಠರು ಭರವಸೆ ನೀಡಿದ್ದು ಅವರ ಸಮಕ್ಷಮದಲ್ಲಿ ಚರ್ಚೆ ನಡೆದಿದೆ. ಆ ಚರ್ಚೆಯ ಫಲಶ್ರುತಿಯಾಗಿ ನನ್ನನ್ನು ಕೆಎಂಎಫ್ ಡೆಲಿಗೇಟ್ ಮಾಡುತ್ತಾರೆ ಎಂಬ ಆಶಾಭಾವನೆ ಇದೆ’ ಎಂದರು. ‘ಕೋಮುಲ್ ಅಧ್ಯಕ್ಷ ಚುನಾವಣೆ ದಿನ ನನಗೆ ಆರೋಗ್ಯ ಸಮಸ್ಯೆ ಇತ್ತು. ಆಸ್ಪತ್ರೆಗೆ ಹೋಗಿದ್ದೆ. ಇನ್ನು ನಮ್ಮ ಪಕ್ಷದವರೇ ಆಗುತ್ತಿದ್ದಾರೆ ಒಳ್ಳೆಯದಾಗಲಿ ಎಂದು ಸುಮ್ಮನಾದೆ’ ಎಂದು ತಿಳಿಸಿದರು.
ಎಚ್ಚರಿಕೆಯಿಂದ ಮಾತನಾಡಿ ಮಂಜಣ್ಣ!
‘ನಾನು ರೈತ ಪರ ಇದ್ದೇನೋ ಇಲ್ಲವೋ ಎಂಬುದನ್ನು ಕಾದುನೋಡಿ ಮಂಜಣ್ಣ. ನಾನು ಹುಟ್ಟು ರೈತ. ಅದನ್ನು ತಮಗೆ ಸಾಬೀತುಪಡಿಸುವ ಅಗತ್ಯವಿಲ್ಲ. ತಾವೇ ಹೇಳಿದ್ದೀರಿ ಡೇರಿಯಲ್ಲಿ ತಿಂದವರು ಹಾಳಾಗಿ ಹೋಗಲಿ ಎಂದು. ಅದಕ್ಕೆ ಖುಷಿಪಟ್ಟಿದ್ದೆ. ಈಗ ತಾವು ಪರಸ್ಪರ ತಬ್ಬಿಕೊಂಡಿದ್ದೀರಿ. ಡೇರಿಯಲ್ಲಿ ತಿಂದವರನ್ನು ನಾನು ರೆಡ್‌ಹ್ಯಾಂಡ್ ಆಗಿ ಹಿಡಿದುಕೊಡುತ್ತೇನೆ. ಆ ರೀತಿ ಮಾಡಲು ಸಾಧ್ಯವಾಗದಿದ್ದರೆ ನಿರ್ದೇಶಕನಾಗಿರಲು ನಾಲಾಯಕ್ ಎಂದು ನಾನು ಹೊರಬರುತ್ತೇನೆ. ನನ್ನ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು’ ಎಂದು ಎಸ್.ಎನ್.ನಾರಾಯಣಸ್ವಾಮಿ ಶಾಸಕ ಕೊತ್ತೂರು ಮಂಜುನಾಥ್ ಅವರಿಗೆ ತಿರುಗೇಟು ನೀಡಿದರು.
ರೈತರ ಬಗ್ಗೆ ಕಾಳಜಿ ಇಲ್ಲದವರು ಕೋಮುಲ್ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಶಾಸಕ ಕೊತ್ತೂರು ಮಂಜುನಾಥ್ ಜುಲೈ 5ರಂದು ಹೇಳಿದ್ದರು.
ಅಕ್ರಮ ಹೊರಗೆಳೆಯಲು ಕೋಮುಲ್ ಪ್ರವೇಶ
‘ನಾನು ಡೇರಿಗೆ ಪ್ರವೇಶ ಮಾಡಿರುವುದೇ ಕೋಚಿಮುಲ್ ಅಕ್ರಮ ಹೊರಗೆಳೆಯಲು. ರೈತರು ಮಹಿಳೆಯರ ಹಿತ ಕಾಪಾಡಲು. ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿ ಅಧಿಕಾರಿಗಳಾದ ನಾಗೇಶ್ ಚೇತನ್ ಎಂಬುವರಿದ್ದು ಅವರು ಮನುಷ್ಯರೇ? ಸರ್ಕಾರದ ಕಾನೂನುಕಟ್ಟಲೆಯ ಭಯವಿಲ್ಲವೇ? ಅಧ್ಯಕ್ಷರು ಸಚಿವರು ತಮ್ಮ ಜೊತೆಗಿದ್ದಾರೆ ಎಂದು ಏನು ಬೇಕಾದರೂ ಮಾಡಬಹುದೇ?’ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
‘ಇಂಥವರ ವಿರುದ್ಧ ಹೋರಾಟ ನಡೆಸಲು ನಾನು ಕೋಮುಲ್‌ಗೆ ಬಂದಿದ್ದೇನೆ. ನನಗೆ ಅಧ್ಯಕ್ಷ ಸ್ಥಾನ ಮುಖ್ಯವಲ್ಲ. ನನಗೆ ಅವರ ದಿನದ ಭತ್ಯೆಯೂ ಬೇಡ ಸಭೆಗೆ ಹೋದರೆ ಚಹಾ ಕೂಡ ಕುಡಿಯುವುದಿಲ್ಲ’ ಎಂದರು.
‘ಡಾ.ಮೈತ್ರಿ ಇಷ್ಟು ದಿನ ಆಡಳಿತಾಧಿಕಾರಿಯಾಗಿ ನಾಮಕಾವಸ್ತೆಗೆ ಇದ್ದರು. ಎಲ್ಲವನ್ನೂ ಗೋಪಾಲಮೂರ್ತಿ ಪಟಾಲಮ್ಮಿನ ಮೂಲಕ ನಂಜೇಗೌಡ ನಿಯಂತ್ರಿಸುತ್ತಿದ್ದರು’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.